ಮಂಡ್ಯ: ಎತ್ತಿನಗಾಡಿ ಓಟದ ಸ್ಪರ್ಧೆಗೆ ಹೈಕೋರ್ಟ್‌ ಷರತ್ತುಬದ್ಧ ಒಪ್ಪಿಗೆ

ಬೆಂಗಳೂರು: ಮಂಡ್ಯದಲ್ಲಿ ನಡೆಸುವ ಚಕ್ಕಡಿ ಸ್ಪರ್ಧೆ (ಎತ್ತಿನಗಾಡಿ ಓಟದ ಸ್ಪರ್ಧೆ)ಗೆ ಸುಪ್ರೀಂ ಕೋರ್ಟ್ ವಿಧಿಸಿರುವ ಷರತ್ತುಗಳನ್ನು ಅನ್ವಯಿಸಿ ಸುಸೂತ್ರವಾಗಿ ನಡೆಸಬಹುದು ಎಂದು ಹೈಕೋರ್ಟ್ ಅನುಮತಿಸಿದೆ.

ಈ ಸಂಬಂಧ ಮೈಸೂರಿನ ಪ್ರಾಣಿದಯಾ ಸಂಘವು ಎತ್ತಿನ ಗಾಡಿ ಓಟದ ಸ್ಪರ್ಧೆ ನಡೆಸಲು ಅನುಮತಿಸಬಾರದು ಎಂದು ದಾವೆ ಸಲ್ಲಿಸಿತ್ತು. ಇದರ ವಿಚಾರಣೆ ನಡೆಸಿದ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರಿದ್ದ ವಿಭಾಗೀಯ ಪೀಠವು ಸುಪ್ರೀಂ ಕೋರ್ಟ್ ವಿಧಿಸಿರುವ ಷರತ್ತುಗಳನ್ನು ಪಾಲಿಸುವಂತೆ ಸೂಚಿಸಿ ಎತ್ತಿನಗಾಡಿ ಓಟದ ಸ್ಪರ್ಧೆ ನಡೆಸುವಂತೆ ವ್ಯಾಜ್ಯವನ್ನು ಇತ್ಯರ್ಥಗೊಳಿಸಿದೆ.

ಚಕ್ಕಡಿ, ಗೂಳಿ, ಕಂಬಳ ಸ್ಪರ್ಧೆ ನಡೆಸಲು ಅನುಮತಿಸಲು ಅಗತ್ಯವಾದ ಶಾಸನಬದ್ಧ ನಿಬಂಧನೆಗಳು ಜಾರಿಯಲ್ಲಿರುವುದರಿಂದ ಹೆಚ್ಚಿನ ಆದೇಶದ ಅಗತ್ಯವಿಲ್ಲ. ಮೇಲೆ ಹೇಳಲಾದ ಷರತ್ತುಗಳಿಗೆ ಒಳಪಟ್ಟು ರಾಜ್ಯ ಸರ್ಕಾರವು ಶಾಸನಬದ್ಧ ನಿಬಂಧನೆಗಳ ಅನ್ವಯ ಅನುಮತಿ ನೀಡಬೇಕು. ಪರಂಪರಾಗತ ಸಂಪ್ರದಾಯ ಮತ್ತು ಸಂಸ್ಕೃತಿ ರಕ್ಷಿಸುವ ದೃಷ್ಟಿಯಿಂದ ಮತ್ತು ಎಮ್ಮೆಗಳ ನಾಟಿ ತಳಿ ರಕ್ಷಣೆ ಮತ್ತು ಅಸ್ತಿತ್ವದ ದೃಷ್ಟಿಯಿಂದ ಕಂಬಳ ಸ್ಪರ್ಧೆಗೆ ಅವಕಾಶ ಮಾಡಿಕೊಡಲಾಗಿದೆ. ಅದೇ ರೀತಿ ‘ಡಿ’ಅಡಿ ದೇಶಿ ತಳಿಯ ಗೋವುಗಳ ಸಂರಕ್ಷಣೆ ಮತ್ತು ರೂಢಿಗತ ಸಂಪ್ರದಾಯವನ್ನು ಮುಂದುವರಿಸುವ ಉದ್ದೇಶದಿಂದ ಗೂಳಿ, ಎತ್ತು, ಚಕ್ಕಡಿ ಸ್ಪರ್ಧೆಗಳಿಗೆ ಅವಕಾಶ ಮಾಡಿಕೊಡಲಾಗಿದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.

× Chat with us