ಸಚಿವ ಸಂಪುಟ ವಿಚಾರವಾಗಿ ಯಾವುದೇ ಅಸಮಾಧಾನವಿಲ್ಲ: ಸಿಎಂ ಬಸವರಾಜ ಬೊಮ್ಮಾಯಿ

ಮೈಸೂರು: ಸಚಿವ ಸಂಪುಟ ರಚನೆ ವಿಚಾರವಾಗಿ ಯಾವುದೇ ರೀತಿಯ ಅಸಮಾಧಾನವಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ನಗರದಲ್ಲಿ ಸೋಮವಾರ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಶೇಷ ಸಂದರ್ಭದಲ್ಲಿ ಸಚಿವ ಸಂಪುಟ ರಚನೆಯಾಗಿದ್ದು, ಎಲ್ಲರೂ ಸಹಕಾರ ಕೊಡುತ್ತಿದ್ದಾರೆ. ಸಣ್ಣಪುಟ್ಟ ಅಸಮಾಧಾನ ಇರಬಹುದು. ಅದನ್ನು ಬಗೆಹರಿಸುವ ಪ್ರಯತ್ನಿಸುತ್ತೇನೆ ಎಂದು ತಿಳಿಸಿದರು.

ಶಾಸಕ ರಾಮದಾಸ್ ಅಸಮಾಧಾನ ಬಗ್ಗೆ ಪ್ರತಿಕ್ರಿಯಿಸಿ, ರಾಮದಾಸ್ ನನ್ನ ಆತ್ಮೀಯ ಸ್ನೇಹಿತರು. ಪಕ್ಷದಲ್ಲಿ ಅವರು ಹಿರಿಯರಾಗಿದ್ದಾರೆ. ಅವರನ್ನು ಕರೆಸಿ ಮಾತನಾಡುತ್ತೇನೆ ಎಂದರು.

ಮೇಕೆದಾಟು ವಿಚಾರದಲ್ಲಿ ಇನ್ನೊಮ್ಮ ದೆಹಲಿಗೆ ಹೋಗಿ ಚರ್ಚಿಸುತ್ತೇನೆ. ಈ ಸಂಬಂಧ ಡಿಪಿಆರ್ ಸಿದ್ಧವಾಗುತ್ತಿದೆ. ತಮಿಳುನಾಡಿನಲ್ಲಿ ಕಾವೇರಿ ಹೆಸರಿನಲ್ಲಿ ರಾಜಕಾರಣ ಸದಾ ನಡೆಯುತ್ತದೆ. ಇದಕ್ಕೂ ನಮಗೂ ಸಂಬಂಧವಿಲ್ಲ. ರಾಜಕೀಯಕ್ಕಾಗಿ ಅವರು ಮೇಕೆದಾಟುವಿಗೆ ವಿರೋಧ ವ್ಯಕ್ತಪಡಿಸಬಹುದು. ಆದರೆ, ನಾವು ನಮ್ಮ‌ ಪಾಲಿನ‌ ನೀರನ್ನು ಪಡೆಯಲು ಮೇಕೆದಾಟು ಆರಂಭಿಸುತ್ತೇವೆ ಎಂದು ತಿಳಿಸಿದರು.

ವೀಕೆಂಡ್ ಕರ್ಫ್ಯೂ ಬಗ್ಗೆ ಗಡಿ ಜಿಲ್ಲೆಗಳ ಸ್ಥಿತಿಗತಿ ಮೇಲೆ ನಿರ್ಧರಿಸಿ ಆದೇಶ ಮಾಡಲಾಗಿದೆ. ಈಗ ಮೈಸೂರಿನ ಬಗ್ಗೆ ಸಭೆ ಮಾಡಿ ಚರ್ಚೆ ಮಾಡುತ್ತೇವೆ ಎಂದು ಮಾಹಿತಿ ನೀಡಿದರು.

ಸಂಪುಟ ದರ್ಜೆಯ ಸವಲತ್ತನ್ನು ಯಡಿಯೂರಪ್ಪ ಅವರು ನಿರಾಕರಿಸಿದ್ದಾರೆ. ಇದನ್ನು ನಾನು ಒಪ್ಪಿಕೊಂಡಿದ್ದೇನೆ. ಅವರಿಗೆ ನಿಕಟ ಪೂರ್ವ ಸಿಎಂ‌ಗೆ ಸಿಗಬೇಕಾದ ಸ್ಥಾನಮಾನ ಎಂದಿನಂತೆ ನೀಡುತ್ತೇವೆ ಎಂದು ಹೇಳಿದರು.

× Chat with us