ಕೆಎಫ್‌ಸಿ ಗೆ ಬಿಸಿ ಮುಟ್ಟಿಸಿದ ಕರವೇ

ದಾವಣಗೆರೆ: ಕನ್ನಡದ ಹಾಡು ಹಾಕೋದಿಲ್ಲ, ಯಾರೂ ಏನೂ ಮಾಡಿಕೊಳ್ಳೋದಿಕ್ಕೆ ಆಗೋದಿಲ್ಲ ಎಂದು ದುರಹಂಕಾರ ತೋರಿದ್ದ ಕೆಎಫ್ ಸಿ ಸಂಸ್ಥೆ ಈಗ ಕನ್ನಡಿಗರ ಆಕ್ರೋಶವನ್ನು ಎದುರಿಸುತ್ತಿದ್ದು, ದಾವಣಗೆರೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಮುಖಂಡರು ಕೆಎಫ್ ಸಿ ಮಳಿಗೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ಕರವೇ ದಾವಣಗೆರೆ ಜಿಲ್ಲಾಧ್ಯಕ್ಷರಾದ ಎಂ.ಎಸ್. ರಾಮೇಗೌಡರ ನೇತೃತ್ವದಲ್ಲಿ ಅನೇಕ ಮುಖಂಡರು ಇಂದು ಕೆಎಫ್ ಸಿ ಕನ್ನಡ ವಿರೋಧಿ ನಿಲುವು ಖಂಡಿಸಿ ಪ್ರತಿಭಟಿಸಿದರು. ಒಂದು ವಾರದೊಳಗೆ ಎಲ್ಲ ನಾಮಫಲಕಗಳು ಕನ್ನಡದಲ್ಲಿ ಹಾಕಬೇಕು, ಕನ್ನಡದಲ್ಲೇ ವ್ಯವಹರಿಸಬೇಕು, ಕನ್ನಡದ ಹಾಡುಗಳನ್ನೇ ಹಾಕಬೇಕು ಎಂದು ರಾಮೇಗೌಡರು ಆಗ್ರಹಿಸಿದರು.

ಒಂದು‌ ವೇಳೆ ಕೆಎಫ್ ಸಿ ತನ್ನ ದುರಹಂಕಾರ ಮುಂದುವರೆಸಿದರೆ ರಾಜ್ಯದ ಎಲ್ಲ ಕೆಎಫ್‌ಸಿ‌ ಮಳಿಗೆಗಳ ಮುಂದೆ ಕರ್ನಾಟಕ ರಕ್ಷಣಾ‌ ವೇದಿಕೆ ಕಾರ್ಯಕರ್ತರು ಪ್ರತಿಭಟಿಸಲಿದ್ದಾರೆ. ಆಗ ಆಗಬಹುದಾದ ಅನಾಹುತಗಳಿಗೆ ನೀವೇ ಹೊಣೆಗಾರರು ಎಂದು ಕೆಎಫ್‌ಸಿ ಮುಖ್ಯಸ್ಥರಿಗೆ ಎಚ್ಚರಿಕೆ‌‌ ನೀಡಿದರು.

ಬೆಂಗಳೂರಿನ ಕೆಎಫ್ ಸಿ ಮಳಿಗೆ ಒಂದರಲ್ಲಿ ಕನ್ನಡದ ಹಾಡುಗಳನ್ನು ಹಾಕಿ ಎಂದು ಹೇಳಿದ್ದಕ್ಕೆ ಅಲ್ಲಿನ ಸಿಬ್ಬಂದಿ ಉದ್ಧಟತನದಿಂದ‌ ಮಾತನಾಡಿ, ಹಿಂದೆಯೂ ಇದೇ ರೀತಿ ಹಲವರು ಹೇಳಿದ್ದರು, ಯಾರಿಂದ ಏನೂ ಮಾಡಿಕೊಳ್ಳಲು ಆಗೋದಿಲ್ಲ. ಹಿಂದಿ ನಮ್ಮ ರಾಷ್ಟ್ರಭಾಷೆ, ನಾವು ಹಿಂದಿ ಹಾಡುಗಳನ್ನೇ ಪ್ರಸಾರ ಮಾಡುತ್ತೇವೆ ಎಂದು ದರ್ಪ ತೋರಿದ ವಿಡಿಯೋ ನಿನ್ನೆ ವೈರಲ್ ಆಗಿತ್ತು. ನಿನ್ನೆ ಸಂಜೆ ಟ್ವಿಟರ್ ನಲ್ಲಿ #RejectKFC #KFCಕನ್ನಡಬೇಕು ಎಂಬ‌ ಹ್ಯಾಶ್ ಟ್ಯಾಗ್ ಮೂಲಕ ಕನ್ನಡಿಗರು‌‌ ಆಕ್ರೋಶ ವ್ಯಕ್ತಪಡಿಸಿದ್ದರು. ನಿನ್ನೆ ಸುಮಾರು 45,000ಕ್ಕೂ‌ ಹೆಚ್ಚು ಟ್ವೀಟ್ ಗಳನ್ನು ಬರೆದ ಕನ್ನಡಿಗರು ಕೆಎಫ್ ಸಿಗೆ ಎಚ್ಚರಿಕೆ ನೀಡಿದ್ದರು. #RejectKFC ಭಾರತಮಟ್ಟದಲ್ಲಿ ಸುಮಾರು‌ ಮೂರು ಗಂಟೆಗಳ‌ ಕಾಲ ಮೂರನೇ ಸ್ಥಾನದಲ್ಲಿ ಟ್ರೆಂಡ್ ಆಗಿತ್ತು.

ಇಂದು ದಾವಣಗೆರೆಯಲ್ಲಿ ನಡೆದ ಪ್ರತಿಭಟನೆಯಲ್ಲಿ ಕರವೇ ಮಹಿಳಾ ಘಟಕ ಅಧ್ಯಕ್ಷರಾದ ಶ್ರೀಮತಿ ಬಸಮ್ಮ, ಮುಖಂಡರಾದ ಮಲ್ಲಿಕಾರ್ಜುನ್, ಕೆಜಿ ಬಸವರಾಜ್, ಮುಬಾರಕ್, ಎಂಡಿ ರಫೀಕ್, ಖಾದರ್ ಭಾಷಾ, ಭಾಷಾ ಸಾಬ್, ಗೋಪಾಲ್ ದೇವರಮನೆ, ಪರಮೇಶ್, ಯೋಗೇಶ್ ಬಸನಕೋಟೆ, ಬಸವರಾಜ್, ಉಮೇಶ್, ಸಿದ್ದೇಶ್, ಜಬಿವುಲ್ಲಾ ಮತ್ತಿತರು ಉಪಸ್ಥಿತರಿದ್ದರು.

× Chat with us