ಹಿರಿಯ ಕಲಾವಿದ ಎಚ್‌.ಜಿ.ಸೋಮಶೇಖರ ರಾವ್‌ ನಿಧನ

ಬೆಂಗಳೂರು: ರಂಗಭೂಮಿ, ಕಿರುತೆರೆ ಹಾಗೂ ಚಲನಚಿತ್ರ ಕಲಾವಿದ ಎಚ್‌.ಜಿ.ಸೋಮಶೇಖರ ರಾವ್ (85) ಅವರು ಮಂಗಳವಾರ ನಿಧನರಾದರು.

ವಯೋಸಹಜ ಕಾಯಿಲೆಗಳನ್ನು ಎದುರಿಸುತ್ತಿದ್ದ ಅವರನ್ನು ಜಯನಗರದ ಶಾಂತಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ವೈದ್ಯರು ತಪಾಸಣೆ ನಡುಸುವ ಮುನ್ನವೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅವರಿಗೆ ಪತ್ನಿ ಹಾಗೂ ಇಬ್ಬರು ಪುತ್ರರು ಇದ್ದಾರೆ.

ಶ್ರೀನಗರದಲ್ಲಿರುವ ಅವರ ಸ್ವಗೃಹದಲ್ಲಿ ಪಾರ್ಥಿವ ಶರೀರದ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದ್ದು, ಸಂಜೆ 4 ಗಂಟೆಗೆ ಬನಶಂಕರಿಯ ಚಿತಾಗಾರದಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ.

ಚಲನಚಿತ್ರ ನಟ ದತ್ತಣ್ಣ (ದತ್ತಾತ್ರೇಯ) ಅವರ ಸಹೋದರರಾಗಿರುವ ಸೋಮಶೇಖರ ರಾವ್, ಮಿಂಚಿನ ಓಟ, ಮಿಥಿಲೆಯ ಸೀತೆಯರು, ಸಾವಿತ್ರಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

× Chat with us