ನಮಗೆ ಶೀಘ್ರವೇ ಮನೆ ನಿರ್ಮಿಸಿ: ಕಬಿನಿ ಪ್ರವಾಹ ಸಂತ್ರಸ್ತರ ಒತ್ತಾಯ

ಮೈಸೂರು: ಕಬಿನಿ ಪ್ರವಾಹದಿಂದ ಮನೆ ಕಳೆದುಕೊಂಡು ಮುರುಕಲು ಮನೆಯಲ್ಲೇ ಜೀವನ ನಡೆಸುತ್ತಿದ್ದೇವೆ. ಮನೆ ಕಟ್ಟಿಸಿಕೊಡುವುದಾಗಿ ಸಚಿವರು ಮೂಡಿಸಿದ ಭರವಸೆಯಲ್ಲಿಯೇ ನಿತ್ಯ ಬದುಕುವಂತಾಗಿದೆ. ಈಗ ಮತ್ತೆ ಪ್ರವಾಹದ ಭೀತಿ ಎದುರಾಗಿದ್ದು, ನಮ್ಮ ಜೀವನ ಯಾರಿಗೂ ಬೇಡ ಎನ್ನಿಸಿದೆ ಎಂದು ಜಿಲ್ಲೆಯ ಸರಗೂರು ತಾಲ್ಲೂಕಿನ ಬಿದರಹಳ್ಳಿ ಸರ್ಕಲ್ ಗ್ರಾಮದ ನೆರೆಯಿಂದ ಮನೆ ಕಳೆದುಕೊಂಡವರು ಅವಲತ್ತುಕೊಂಡಿದ್ದು ಹೀಗೆ.

ಗುರುವಾರ ಸೋಷಿಯಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯೂನಿಸ್ಟ್) ನೇತೃತ್ವದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪಾಪಮ್ಮ, ಚೆಲುವಿ, ಕಾಳಿಯಮ್ಮ, ಪದ್ಮ, ರಫಿಯಾ, ಶಾಂತಿ ಮತ್ತು ಮಂಜುಳಾ ಎಂಬ ಸಂತ್ರಸ್ತರು ತಮ್ಮ ಸಮಸ್ಯೆಗಳನ್ನು ಎಳೆ ಎಳೆಯಾಗಿ ವಿವರಿಸಿ ಕಣ್ಣೀರು ಹಾಕಿದರು.

೨೦೧೯ರ ಕಬಿನಿ ಪ್ರವಾಹದಿಂದಾಗಿ ಬಿದರಹಳ್ಳಿ ಸರ್ಕಲ್‌ನಲ್ಲಿರುವ ೪೨ ಮನೆಗಳು ಹಾನಿಗೊಂಡು ವಾಸಿಸಲು ಯೋಗ್ಯವಾಗಿಲ್ಲ. ಇದರಿಂದ ನಮ್ಮನ್ನು ಗಂಜಿ ಕೇಂದ್ರಕ್ಕೆ ಕಳುಹಿಸಿದರು. ಬಳಿಕ ಯಾವುದೇ ಪರಿಹಾರ ನೀಡದೇ ಅಲ್ಲಿಂದ ಖಾಲಿ ಮಾಡಿಸಿದರು. ಆಗಿನ ಜಿಲ್ಲಾ ಉಸ್ತುವಾರಿ ಮತ್ತು ವಸತಿ ಸಚಿವ ವಿ.ಸೋಮಣ್ಣ ಅವರು ಭೇಟಿ ನೀಡಿ, ತಗ್ಗಿನಲ್ಲಿರುವ ಊರನ್ನು ಸ್ಥಳಾಂತರಿಸಿ, ಇನ್ನೂ ಮೂರು ತಿಂಗಳ ಒಳಗೆ ಹೊಸ ಮನೆಗಳನ್ನು ಕಟ್ಟಿಸಿಕೊಡುತ್ತೇವೆ ಎಂದರಲ್ಲದೇ, ಜಾಗ ಗುರುತಿಸಿ ಗುದ್ದಲಿ ಪೂಜೆ ನೆರವೇರಿಸಿದರು. ಆದರೆ, ಎರಡು ವರ್ಷ ಕಳೆದರೂ ಮನೆಯೂ ನಿರ್ಮಾಣ ಆಗಿಲ್ಲ. ಸ್ವಂತ ಸೂರಿನ ಕನಸು ಹೊತ್ತ ನಾವು ಅತಂತ್ರರಾಗಿದ್ದೇವೆ ಎಂದು ಅಳಲು ತೋಡಿಕೊಂಡರು.

ಕಳೆದ ಎರಡು ವರ್ಷಗಳಿಂದಲೂ ಸರಗೂರು ತಹಸಿಲ್ದಾರ್, ಜಿಲ್ಲಾಧಿಕಾರಿ ಮತ್ತು ಸ್ಥಳೀಯ ಶಾಸಕರಿಗೆ ನಿರಂತರವಾಗಿ ಮನವಿ ಸಲ್ಲಿಸುತ್ತಿದ್ದೇವೆ, ಪ್ರತಿಭಟನೆ ನಡೆಸಿದ್ದೇವೆ. ಕಬಿನಿ ಜಲಾಶಯಕ್ಕೆ ನಿಕಟಪೂರ್ವ ಸಿಎಂ ಯಡಿಯೂರಪ್ಪ ಭೇಟಿ ನೀಡಿದಾಗಲೂ ಸಮಸ್ಯೆ ಹೇಳಿಕೊಂಡಿದ್ದೇವೆ. ಇದುವರೆಗೆ ಯಾವುದೇ ಪ್ರಯೋಜನ ಆಗಿಲ್ಲ ಎಂದು ದೂರಿದರು.

ಶೀಘ್ರ ಮನೆ ನಿರ್ಮಿಸಿಕೊಡುವುದಾಗಿ ಹೇಳಿದ್ದರಿಂದ ಯಾವುದೇ ಪರಿಹಾರ ನೀಡಲಿಲ್ಲ. ಹಾನಿಗೊಳಗಾದ ಮನೆಗಳನ್ನು ನಮ್ಮ ಸ್ವಂತ ಹಣದಲ್ಲಿಯೇ ರಿಪೇರಿ ಮಾಡಿಕೊಂಡು, ಟರ್ಪಲ್, ಶೆಲ್ಟರ್ ಹಾಕಿಕೊಂಡಿದ್ದೇವೆ. ಯಾವುದೇ ಸುರಕ್ಷತೆ ಇಲ್ಲ. ಈ ಮನೆಗಳಲ್ಲಿ ಹಾವು, ಚೇಳು, ಇಲಿ-ಹೆಗ್ಗಣ ಮತ್ತು ಕಾಡು ಪ್ರಾಣಿಗಳ ಕಾಟವೂ ಇದೆ. ಹಲವರು ಇನ್ನೂ ಸಂಬಂಧಿಕರ ಮನೆಯಲ್ಲೇ ಉಳಿದುಕೊಂಡಿದ್ದಾರೆ. ನಮ್ಮ ಮಕ್ಕಳನ್ನು ಸಂಬಂಧಿಕರ ಮನೆ ಕಳಿಸಿದ್ದೇವೆ. ಈಗ ಶಾಲೆ ಆರಂಭ ಆಗುವ ಸಾಧ್ಯತೆ ಇದೆ. ಈಗಿರುವ ಮನೆಯ ಸ್ಥಿತಿಯಲ್ಲಿ ಮಕ್ಕಳ ಪಾಲನೆ ಕಷ್ಟ ಎಂದು ಸಮಸ್ಯೆ ಹೇಳಿಕೊಂಡರು.

ಕಾಡಂಚಿನಲ್ಲಿದ್ದೇವೆ ಎಂದ ಮಾತ್ರಕ್ಕೆ ನಾವು ಪ್ರಾಣಿಗಳಲ್ಲ, ನಾವು ಮನುಷ್ಯರೇ ಶೀಘ್ರವೇ ಮನೆ ಕಟ್ಟಿಸಿಕೊಡಿ. ಬಿದರಹಳ್ಳಿ ಪಕ್ಕದ ಕಪಿಲೇಶ್ವರ ಕಾಲೊನಿಯಲ್ಲಿ ಪುನರ್ವಸತಿಯ ೪೨ ಮನೆಗಳ ನಿರ್ಮಾಣ ಕಾಮಗಾರಿಯನ್ನು ತಕ್ಷಣೆವೇ ಆರಂಭಿಸಿ, ಆರು ತಿಂಗಳ ಒಳಗೆ ಕಾಮಗಾರಿ ಪೂರ್ಣಗೊಳಿಸಿ ಹಕ್ಕುಪತ್ರ ವಿತರಿಸಿ ಎಂದು ಒತ್ತಾಯಿಸಿದರು.

ಎಸ್‌ಯುಸಿಐ ಜಿಲ್ಲಾ ಸಮಿತಿ ಸದಸ್ಯರಾದ ಟಿ.ಆರ್.ಸುನೀಲ್, ಜಿ.ಎಸ್.ಸೀಮಾ, ನಿತಿನ್ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

× Chat with us