ಮೈತ್ರಿಯಾದರೆ ಕಾಂಗ್ರೆಸ್ ಜತೆ, ಇಲ್ಲವೇ ತಟಸ್ಥ: ಜೆಡಿಎಸ್‌ ಶಾಸಕ ಸಾ.ರಾ.ಮಹೇಶ್‌

ಮೈಸೂರು: ಮಹಾಪೌರ ಚುನಾವಣೆಯಲ್ಲಿ ಮೈತ್ರಿ ಮುಂದುವರಿದರೆ ಕಾಂಗ್ರೆಸ್ ಜತೆಗೆ ಹೋಗ್ತೇವೆ. ಇಲ್ಲದಿದ್ದರೆ ತಟಸ್ಥವಾಗಿ ಉಳಿಯುತ್ತೇವೆ. ಉಪ ಚುನಾವಣೆಯಿಂದಾಗಿ ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಲುಕಿರುವ ಪರಿಣಾಮ ಮಂಗಳವಾರ ನಡೆಯಲಿರುವ ಸದಸ್ಯರ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಶಾಸಕ ಸಾ.ರಾ.ಮಹೇಶ್ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾಪೌರ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಯನ್ನು ಬೆಂಬಲಿಸಿದರು. ನಂತರ ಅವರ ಪಕ್ಷದವರೇ ನ್ಯಾಯಾಲಯದ ಮೊರೆ ಹೋಗಿದ್ದರಿಂದ ಅಧಿಕಾರ ಹೋಯಿತು. ನಂತರ, ಚುನಾವಣಾ ದಿನಾಂಕ ನಿಗದಿಯಾಗಿದ್ದಾಗ ಮಹಾಪೌರ ಸ್ಥಾನವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡುತ್ತೇವೆಂದು ಒಪ್ಪಿಕೊಂಡಿದ್ದೆವು. ಅವರದ್ದೇ ಪಕ್ಷದ ಸದಸ್ಯರೊಬ್ಬರು ಚುನಾವಣೆಗೆ ತಡೆಯಾಜ್ಞೆ ತಂದರು. ಒಂದು ಕಡೆ ಬೆಂಬಲ ಕೊಟ್ಟು, ಮತ್ತೊಂದು ಕಡೆ ಅಧಿಕಾರ ಕಿತ್ತುಕೊಳ್ಳುವಂತಾಯಿತು. ಮೈತ್ರಿ ವಿಷಯದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ನಮ್ಮೊಂದಿಗೆ ಚರ್ಚಿಸಿದ್ದಾರೆ. ಬಿಜೆಪಿ ಜತೆಗೆ ಹೋಗುವ ಪ್ರಶ್ನೆ ಇಲ್ಲ ಎಂದು ಹೇಳಿದರು.

ಕಾಂಗ್ರೆಸ್-ಬಿಜೆಪಿ ಎರಡು ಸಮಾನ ವಿರೋಧಿಗಳು. ನಮಗೆ ಮಹಾಪೌರ ಸ್ಥಾನ ಪಡೆದುಕೊಳ್ಳುವಂತೆ ಸದಸ್ಯರು ಹೇಳುತ್ತಿದ್ದಾರೆ. ಈಗಾಗಲೇ ಕಾಂಗ್ರೆಸ್‌ನ ಉಪ ಮಹಾಪೌರರೇ ಎರಡು ತಿಂಗಳು ಆಡಳಿತ ಮಾಡಿರುವುದರಿಂದ ಮುಂದಿನ ಎರಡು ವರ್ಷಗಳ ಕಾಲ ಪಡೆಯಬೇಕೋ ಎನ್ನುವುದನ್ನು ನೋಡುತ್ತಿದ್ದೇವೆ. ಮಂಗಳವಾರ ಸಂಜೆ ನಡೆಯಲಿರುವ ಜಾ.ದಳ ಸದಸ್ಯರ ಸಭೆಯಲ್ಲಿ ಒಬ್ಬೊಬ್ಬರಾಗಿಯೇ ಅಭಿಪ್ರಾಯ ಸಂಗ್ರಹಿಸಿ ಅಂತಿಮ ನಿರ್ಧಾರವನ್ನು ಹೈಕಮಾಂಡ್‌ಗೆ ಬಿಡುತ್ತೇವೆ ಎಂದರು.

36ನೇ ವಾರ್ಡ್ ಉಪ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಗೆಲುವು ಸಾಧಿಸುವುದು ಶತಃಸಿದ್ಧ. ಕಳೆದ 15 ವರ್ಷಗಳಿಂದ ಈ ವಾರ್ಡಿನಲ್ಲಿ ಜಾ.ದಳ ಪ್ರಬಲವಾಗಿದೆ. ಕಾರ್ಯಕರ್ತರು ಗಟ್ಟಿಯಾಗಿದ್ದಾರೆ. ನಾನೇ ಗುರುವಾರದಿಂದ ಮನೆ ಮನೆಗೆ ತೆರಳಿ ಪ್ರಚಾರ ಮಾಡುತ್ತೇನೆ ಎಂದರು. ಶಾಸಕ ಜಿ.ಟಿ.ದೇವೇಗೌಡರು ಕಾಂಗ್ರೆಸ್ ಅಭ್ಯರ್ಥಿಗೆ ಹಾರೈಸಿರುವುದು ಗೊತ್ತಿಲ್ಲ. ಅವರು ನಮ್ಮ ಹಿರಿಯ ನಾಯಕರು. ಅವರನ್ನು ಪ್ರಶ್ನೆ ಮಾಡಲಾಗದು. ಅವರು ಯಾವುದೇ ತೀರ್ಮಾನ ಮಾಡಿದರೂ ನಮ್ಮದೇನೂ ಅಭ್ಯಂತರವಿಲ್ಲ ಎಂದು ಮಾರ್ಮಿಕವಾಗಿ ನುಡಿದರು.

× Chat with us