ಜಿಟಿಡಿಗೆ ಜೆಡಿಎಸ್ಸೆ ಅನಿವಾರ್ಯ: ಮಾಜಿ ಸಂಸದ ಶಿವರಾಮೇಗೌಡ

ಮೈಸೂರು: ಶಾಸಕ ಜಿ.ಟಿ.ದೇವೇಗೌಡ ಅವರಿಗೆ ಜೆಡಿಎಸ್ಸೆ ಅನಿವಾರ್ಯ ಎಂದು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಟಿಡಿ ಈಗಾಗಲೇ ಬಿಜೆಪಿಗೆ ಹೋಗಿ ಬಂದಿದ್ದಾರೆ. ಸಿದ್ದರಾಮಯ್ಯ ಇರುವವರೆಗೂ ಅವರಿಗೆ ಕಾಂಗ್ರೆಸ್‌ನಲ್ಲಿ ಅವಕಾಶ ಇಲ್ಲ ಎಂದು ತಿಳಿಸಿದರು.

ನಾಗಮಂಗಲದಲ್ಲಿ ಈ ಬಾರಿ ನಾನೇ ರಂಗ ಕುಣಿಯೋದು. ಶಾಸಕ ಸುರೇಶ್‌ಗೌಡಗೆ ಪರ್ಮನೆಂಟಾಗಿ ನಾಗಮಂಗಲ ಬರೆದುಕೊಟ್ಟಿಲ್ಲ. ಜೆಡಿಎಸ್‌ನಿಂದ ನನಗೆ ಟಿಕೆಟ್ ಸಿಗುವ ವಿಶ್ವಾಸ ಇದೆ. ಸುರೇಶ್‌ಗೌಡರನ್ನು ಎಂಎಲ್‌ಸಿ ಅಥವ ಎಂಪಿಗೆ ಕಳಿಸಲಿ ನಮ್ಮದೇನು ಅಭ್ಯಂತರ ಇಲ್ಲ ಎಂದರು.

2023ಕ್ಕೆ ಮತ್ತೆ ಕುಮಾರಸ್ವಾಮಿ‌ ಕಾಲು ಹಿಡಿಯುವ ಸ್ಥಿತಿ ಬರುತ್ತದೆ. ನಮ್ಮ ಪಕ್ಷದ ಹಣೆ ಬರಹವೇ ಇಷ್ಟು. 2018ರಲ್ಲಿ ಕುಮಾರಸ್ವಾಮಿ ಮತ್ತೆ ಸಿಎಂ ಆಗುತ್ತಾರೆ ಅಂದರೆ ಎಲ್ಲರೂ ನಗುತ್ತಿದ್ದರು. ಕುಮಾರಸ್ವಾಮಿ ಹುಡುಕಿಕೊಂಡು ಬರುವ ಸ್ಥಿತಿ ಬಂತು. ಈಗಲು ಅಷ್ಟೆ, 2023ಕ್ಕೆ ಎಚ್‌ಡಿಕೆ ಹುಡುಕಿಕೊಂಡು ಬರಲೇಬೇಕು ಎಂದು ಮಾತನಾಡಿದರು.

ಕೊರೋನ ಬಂದು ಸಿ.ಡಿ ಪ್ರಕರಣ ಮುಚ್ಚಿಕೊಂಡಿದೆ. ಬಿಜೆಪಿ‌ ನಾಯಕರೇ ಹೇಳಿರುವಂತೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕು‌. ಸತ್ಯಾಸತ್ಯತೆ ಹೊರಬರಲು ಕೂಲಂಕಶ ಸಮಗ್ರ ತನಿಖೆ ಆಗಲೇಬೇಕು. ನಮ್ಮ ನಾಯಕ ಎಚ್‌ಡಿಕೆ ಹೇಳಿದಂತೆ ತನಿಖೆ ಹಳ್ಳ ಹಿಡಿಯುತ್ತಿದೆ. ಬಿಜೆಪಿ ದಿಕ್ಕು ತಪ್ಪಿಸುವ ರಾಜಕಾರಣ ಮಾಡುತ್ತಿದೆ. ಕೊರೊನಾ ಎರಡನೇ ಅಲೆ ನೋಡಿದರೆ ಮತ್ತೆ ಆತಂಕ ಸೃಷ್ಟಿಸುತ್ತಿದೆ. ರಾಜ್ಯ ಸರ್ಕಾರ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

× Chat with us