BREAKING NEWS

ಬಿಜೆಪಿ ಮುಕ್ತ ಭಾರತ ಮಾಡುವುದು ನಮ್ಮೆಲ್ಲರ ಕರ್ತವ್ಯ: ಡಿಕೆ ಶಿವಕುಮಾರ್‌

ಬೆಂಗಳೂರು : ಬಿಜೆಪಿಯವರು ಕಾಂಗ್ರೆಸ್ ಮುಕ್ತ ಭಾರತದ ಬಗ್ಗೆ ಮಾತನಾಡುತ್ತಿದ್ದರು. ಕರ್ನಾಟಕ ವಿಧಾನಸಭೆ ಚುನಾವಣೆ ಬಳಿಕ ಪಕ್ಷದಲ್ಲಿ ಹುಮ್ಮಸ್ಸು ಹೆಚ್ಚಾಗಿದ್ದು, ಮುಂದಿನ ದಿನಗಳಲ್ಲಿ ಬಿಜೆಪಿ ಮುಕ್ತ ಭಾರತ ಮಾಡುವುದು ನಮ್ಮೆಲ್ಲರ ಕರ್ತವ್ಯ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕರೆ ನೀಡಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿಂದು ನಡೆದ ಕ್ವಿಟ್ ಇಂಡಿಯಾ ಚಳವಳಿಯ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ಹಿಂದೆ ಬ್ರಿಟಿಷರನ್ನು ತೊಲಗಿಸಲು ಮಹಾತ್ಮ ಗಾಂಧೀಜಿ ನೇತೃತ್ವದಲ್ಲಿ ಕಾಂಗ್ರೆಸಿಗರು ಭಾರತ ಬಿಟ್ಟು ತೊಲಗಿ ಎಂಬ ಚಳುವಳಿ ನಡೆಸಿದರು. 81 ವರ್ಷಗಳ ಬಳಿಕ ಈಗಿನ ಕಾಂಗ್ರೆಸಿಗರು ಕೋಮುವಾದಿ, ಸರ್ವಾಕಾರಿಗಳ ವಿರುದ್ಧ ಹೋರಾಟ ಮಾಡಬೇಕಿದೆ ಎಂದು ಹೇಳಿದರು.

ದೇಶದ ಎಲ್ಲಾ ವಿಪಕ್ಷಗಳ ನಾಯಕರು ಬೆಂಗಳೂರಿಗೆ ಬಂದು ಇಂಡಿಯಾ ರಾಜಕೀಯ ಕೂಟದ ಮೂಲಕ ಹೊಸ ಅಧ್ಯಯನಕ್ಕೆ ಮುನ್ನುಡಿ ಬರೆದಿದ್ದು, ಬೆಂಗಳೂರು ಅದಕ್ಕೆ ಸಾಕ್ಷಿಯಾಗಿದೆ. ನಮ್ಮ ಮುಂದಿನ ಗುರಿ 2024 ರ ಲೋಕಸಭೆ ಚುನಾವಣೆಯಷ್ಟೇ ಅಲ್ಲ, 2028 ರ ವಿಧಾನಸಭೆ ಚುನಾವಣೆ ಕೂಡಾ ಆಗಿದೆ. ಅದಕ್ಕೆ ಪಕ್ಷವನ್ನು ಸಜ್ಜುಗೊಳಿಸಬೇಕಿದೆ. ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಮರೆತು ಕಳೆದ ಚುನಾವಣೆಯಲ್ಲಿ ಒಟ್ಟಾಗಿ ಕೆಲಸ ಮಾಡಿ ಸ್ಪಷ್ಟ ಬಹುಮತದಿಂದ ಪಕ್ಷವನ್ನು ಗೆಲ್ಲಿಸುವ ಮೂಲಕ ಕರ್ನಾಟಕ ದೇಶಕ್ಕೆ ಮಾದರಿಯಾಗಿದೆ.

ಪಕ್ಷದ ವರೀಷ್ಠರು ಕೂಡ ಇದನ್ನು ಎಲ್ಲಾ ರಾಜ್ಯದ ನಾಯಕರಿಗೆ ಹೇಳುತ್ತಿದ್ದಾರೆ. ಮೇಕೆದಾಟು ಪಾದಯಾತ್ರೆ, ಸ್ವತಂತ್ರ ನಡಿಗೆ, ಭಾರತ್‍ಜೋಡೋ ಯಾತ್ರೆಗಳು ಪಕ್ಷಕ್ಕೆ ಬಲ ತಂದುಕೊಟ್ಟಿದ್ದವು. ಚುನಾವಣೆಗೆ ಮೊದಲೇ ನಾನು 136 ಸ್ಥಾನ ಗೆಲ್ಲುತ್ತೇವೆ ಎಂದು ಹೇಳಿದ್ದೆ. ಮುಂದಿನ ಹಂತದಲ್ಲಿ ಅದು 141ಕ್ಕೆ ಏರಿಕೆಯಾಗಿತ್ತು. ಇದನ್ನು ಹೇಳಿದಾಗ ಕೆಲವರು ನಕ್ಕು ಡಿ.ಕೆ.ಶಿವಕುಮಾರ್‌ಗೆ ಬುದ್ಧಿಭ್ರಮಣೆಯಾಗಿದೆ ಎನ್ನುತ್ತಿದ್ದರು. ಅತಂತ್ರ ವಿಧಾನಸಭೆ ಬರುತ್ತದೆ, ಮೈತ್ರಿ ಸರ್ಕಾರ ಅನಿವಾರ್ಯ ಎಂದು ಕೆಲವರು ಕಾಲಿಗೆ ಬಿದ್ದು ಆಶೀರ್ವಾದ ಪಡೆಯುತ್ತಿದ್ದರು ಎಂದು ಲೇವಡಿ ಮಾಡಿದರು.

ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಪ್ರಕಟಿಸುವಾಗ ನನ್ನನ್ನು ಸಮಾಧಾನಪಡಿಸಲು ಮಾತನಾಡಿದ ಸೋನಿಯಾಗಾಂಧಿಯವರು, ಅಷ್ಟು ಕರಾರುವಕ್ಕಾಗಿ 136 ಸ್ಥಾನವನ್ನು ಗೆಲ್ಲುತ್ತೇನೆ ಎಂದು ಹೇಗೆ ಹೇಳಿದ್ದಿರಿ ಎಂದು ಪ್ರಶ್ನಿಸಿದರು. ನಾನು ಹೊಲ ಉತ್ತು, ಕಳೆ ಕಿತ್ತು ದುಡಿಯುತ್ತಿದ್ದೇನೆ. ಹಾಗಾಗಿ ಸ್ಪಷ್ಟವಾಗಿ ಗೊತ್ತಿತ್ತು ಎಂದು ಡಿ.ಕೆ.ಶಿವಕುಮಾರ್ ಪ್ರತ್ಯುತ್ತರಿಸಿದ್ದಾಗಿ ತಿಳಿಸಿದರು.

224 ಸ್ಥಾನಗಳಲ್ಲಿ 115 ಕ್ಷೇತ್ರಗಳಿಗೆ ಒಮ್ಮತದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿತ್ತು. ಎಚ್.ಎಂ.ರೇವಣ್ಣ, ಉಗ್ರಪ್ಪ, ಪದ್ಮಾವತಿಯಂತಹ ಹಿರಿಯ ನಾಯಕರು ಕೇಳಿದ ಕ್ಷೇತ್ರಗಳಿಗೆ ಟಿಕೆಟ್ ನೀಡಬೇಕಾಗಿತ್ತು. ಆದರೆ ಅದು ಆಗಲಿಲ್ಲ. ಶೇ.20 ರಷ್ಟು ಸ್ಥಾನಗಳಲ್ಲಿ ಹೆಚ್ಚು ಕಮ್ಮಿಯಾಗಿದೆ. 25 ರಷ್ಟು ನಾಯಕರಿಗೆ ಅನ್ಯಾಯವಾಗಿದೆ. ಅವರೆಲ್ಲಾ ತಮ್ಮ ವೈಯಕ್ತಿಕ ಹಿತಾಸಕ್ತಿ ಮರೆತು ತ್ಯಾಗ ಮಾಡಿದ್ದಾರೆ. ಪಕ್ಷ ಅಧಿಕಾರಕ್ಕೆ ಬರಲಿ ಎಂದು ದುಡಿದಿದ್ದಾರೆ ಎಂದು ಮೆಚ್ಚುಗೆಯ ಮಾತುಗಳನ್ನಾಡಿದರು.

ಕೆಲವರು ನಾನು ಮಾಟ, ಮಂತ್ರ, ಮಾಯ ಮಾಡಿ ಸರ್ಕಾರವನ್ನು ತಂದಿದ್ದೇನೆ ಎಂದು ಹೇಳುತ್ತಿದ್ದಾರೆ. ಆದರೆ ಇದರ ಹಿಂದೆ ನಮ್ಮ ಹೋರಾಟ ಇದೆ. ಭಾಗ್ಯಾದ ಲಕ್ಷ್ಮೀ ಬಾರಮ್ಮ ಎಂದು ಹಾಡು ಹೇಳುವ ಮೂಲಕ ಪಂಚಖಾತ್ರಿ ಸೇರಿದಂತೆ ಹಲವು ಯೋಜನೆಗಳ ಭರವಸೆ ನೀಡಿದ್ದು ಹಾಗೂ ಜಾರಿಗೊಳಿಸುವುದರ ಬಗ್ಗೆ ಡಿ.ಕೆ.ಶಿವಕುಮಾರ್ ವಿವರಿಸಿದರು.

ನಾವು ತ್ಯಾಗ ಮಾಡಿದ್ದೇವೆ. ಜೀವ ಪಣಕ್ಕಿಟ್ಟು ಕೋವಿಡ್ ಸಮಯದಲ್ಲಿ ಕೆಲಸ ಮಾಡಿದ್ದೇವೆ. ಅದರ ಫಲ ಸರ್ಕಾರ ರಚನೆಯಾಗಿದೆ ಎಂದರು.

ವಿಜಯ ಸಾಧಕರಿಗೆ ಅಧಿಕಾರ :
ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣಜಿತ್ ಸುರ್ಜೆವಾಲ ತಮಗೆ ಪತ್ರ ಬರೆದಿದ್ದು, ನಿಗಮ ಮಂಡಳಿ ಸೇರಿದಂತೆ ಹಲವು ನೇಮಕಾತಿಗಳಿಗೆ ಮುಖಂಡರು, ಕಾರ್ಯಕರ್ತರನ್ನು ಪರಿಗಣಿಸುವಾಗ ಅವರ ಬೂತ್ ಮಟ್ಟದಲ್ಲಿ ಕಾಂಗ್ರೆಸ್ ಪಡೆದಿರುವ ಮತಗಳನ್ನು ಪರಿಗಣನೆಗೆ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ.

ಈ ಕುರಿತು ವರದಿ ನೀಡುವಂತೆ ತಾವು ಜಿಲ್ಲಾ ಕಾಂಗ್ರೆಸ್‍ಗಳಿಗೆ ಸೂಚನೆ ನೀಡಿದ್ದೇವೆ. ಯಾರು ಎಷ್ಟೇ ದೊಡ್ಡ ನಾಯಕರಾಗಿದ್ದರೂ, ಬೂತ್ ಮಟ್ಟದಲ್ಲಿ ಪಕ್ಷವನ್ನು ಗೆಲ್ಲಿಸಬೇಕು. ಅಂತಹ ವಿಜಯ ಸಾಧಕರಿಗೆ ಮಾತ್ರ ಅವಕಾಶ ನೀಡಲಾಗುವುದು. ಶಾಸಕರಿಗೂ ಸೂಚನೆ ನೀಡಲಾಗಿದ್ದು, ಹಿಂಬಾಲಕರನ್ನು ಪರಿಗಣಸದೆ ಪಕ್ಷಕ್ಕೆ ಕೆಲಸ ಮಾಡಿದವರಿಗೆ ಅವಕಾಶ ನೀಡುವಂತೆ ತಾಕೀತು ಮಾಡಲಾಗಿದೆ. ಕಾರ್ಯಕರ್ತರ ಮನವಿಯ ಪಕ್ಕದಲ್ಲೇ ಬೂತ್ ಮಟ್ಟದ ಸಾಧನೆಗಳನ್ನು ಉಲ್ಲೇಖಿಸಲಾಗುವುದು ಎಂದು ಹೇಳಿದರು.

ಪಂಚಖಾತ್ರಿ ಯೋಜನೆಗಳ ಲಾಭವನ್ನು ಕಾಂಗ್ರೆಸಿಗರಷ್ಟೇ ಪಡೆದುಕೊಳ್ಳುತ್ತಿಲ್ಲ. ಬಿಜೆಪಿ, ಜೆಡಿಎಸ್‍ನವರೂ ಅನುಭವಿಸುತ್ತಿದ್ದಾರೆ. ಅವರನ್ನೂ ಪಕ್ಷದತ್ತ ಸೆಳೆಯಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಹಾತ್ಮಗಾಂಧಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಸಚಿವರಾದ ಈಶ್ವರ ಖಂಡ್ರೆ, ಕೆ.ಎಚ್.ಮುನಿಯಪ್ಪ, ಶಾಸಕರಾದ ಎ.ಎಸ್.ಪೆÇನ್ನಣ್ಣ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಚಂದ್ರಪ್ಪ, ಸಲೀಂ ಅಹಮ್ಮದ್, ವಿಧಾನಪರಿಷತ್ ಸದಸ್ಯ ನಜೀರ್ ಅಹಮ್ಮದ್, ಮಾಜಿ ಸದಸ್ಯರಾದ ಹೆಚ್.ಎಂ.ರೇವಣ್ಣ, ಉಗ್ರಪ್ಪ ಮತ್ತಿತರರು ಉಪಸ್ಥಿತರಿದ್ದರು.

andolanait

Recent Posts

ಮುಡಾ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು: ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು: ಮುಡಾ ಕೇಸ್‌ ಮುಚ್ಚಿ ಹಾಕುವಲ್ಲಿ ಸರ್ಕಾರಕ್ಕೆ ಲೋಕಾಯುಕ್ತ ಸಹಾಯ ಮಾಡುತ್ತದೆ ಎಂಬ ಶಂಕೆ ಇದೆ. ಹೀಗಾಗಿ ಮುಡಾ ಪ್ರಕರಣವನ್ನು…

8 mins ago

ಭವಾನಿ ರೇವಣ್ಣಗೆ ಬಿಗ್‌ ರಿಲೀಫ್:‌ ಹೈಕೋರ್ಟ್‌ ಆದೇಶ ಎತ್ತಿ ಹಿಡಿದ ಸುಪ್ರೀಂ ಕೋರ್ಟ್‌

ಹೊಸದಿಲ್ಲಿ: ಆತ್ಯಾಚಾರ ಸಂತ್ರಸ್ತೆಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಭವಾನಿ ರೇವಣ್ಣಗೆ ಹೈಕೋರ್ಟ್‌ನಿಂದ ಜಾಮೀನು ಮಂಜೂರು ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ಎಸ್‌ಐಟಿ…

27 mins ago

ಮುಡಾ ಪ್ರಕರಣ: ಮುಡಾ ಕಚೇರಿಯ ಮೇಲೆ ಇ.ಡಿ ದಾಳಿ

ಮೈಸೂರು: ಮುಡಾದಲ್ಲಿ ಹಗರಣ ನಡೆದಿದೆ ಎಂದು ಆರ್‌ಐಟಿ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಇ.ಡಿ.ಗೆ ದೂರು ನೀಡಿದ್ದರು. ಈ ದೂರಿನ ಆಧಾರದ…

50 mins ago

ನಟ ದರ್ಶನ್‌ಗೆ ಮತ್ತೊಂದು ಸಂಕಷ್ಟ: ಹಳೆ ಪ್ರಕರಣಕ್ಕೆ ಹೊಸ ಎನ್‌ಸಿಆರ್‌

ಬೆಂಗಳೂರು: ನಟ ದರ್ಶನ್‌ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಈ ಮಧ್ಯೆ ಹಳೆ…

2 hours ago

ಓದುಗರ ಪತ್ರ: ಮಹಿಳಾ ಅಧಿಕಾರಿಗಳಿಗೆ ಅಭಿನಂದನೆಗಳು

ಚಾಮರಾಜನಗರದಲ್ಲಿ ಅಕ್ಟೋಬರ್ ೭ರಿಂದ ಅ. ೯ರವರೆಗೆ ಆಯೋಜಿಸಿದ್ದ ‘ಚೆಲುವ ಚಾಮರಾಜನಗರ ದಸರಾ’ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಕಾರ್ಯಕ್ರಮಗಳನ್ನು ವ್ಯವಸ್ಥಿತವಾಗಿ ಆಯೋಜಿಸಿದ್ದರಿಂದ…

3 hours ago

ಓದುಗರ ಪತ್ರ: ರತನ್‌ ಟಾಟಾರಿಗೆ ಭಾರತರತ್ನ ನೀಡಿ

ಕೆಲ ಗಣ್ಯರು ನಿಧನರಾದಾಗ ದುಃಖವಾಗುತ್ತದೆ. ಇನ್ನೂ ಕೆಲ ಗಣ್ಯರನ್ನು ಕಳೆದುಕೊಂಡಾಗ ದುಃಖದ ಕೋಡಿಯೇ ಹರಿಯುತ್ತದೆ; ದೇಶಾದ್ಯಂತ ಮೌನ ಹೆಪ್ಪುಗಟ್ಟುತ್ತದೆ. ಹೀಗೆ…

3 hours ago