ಕೇಂದ್ರದಿಂದ ಯಡಿಯೂರಪ್ಪರೇ ಅನುದಾನ ತರಲಾಗ್ಲಿಲ್ಲ, ಬೊಮ್ಮಾಯಿ ತರ್ತಾರಾ: ಸಿದ್ದು ವ್ಯಂಗ್ಯ

ಮೈಸೂರು: ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಿದ್ದ ಅನುದಾನವನ್ನು ಯಡಿಯೂರಪ್ಪ ಅವರೇ ತರಲು ಆಗಲಿಲ್ಲ. ಇನ್ನು ಬೊಮ್ಮಾಯಿ ಕೈಯ್ಯಲ್ಲಿ ಆಗುತ್ತಾ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದರು.

ನಗರದಲ್ಲಿ ಶನಿವಾರ ಮಾತನಾಡಿದ ಅವರು, ಬಿಜೆಪಿಯಲ್ಲೇ ಬೆಳೆದ ಯಡಿಯೂರಪ್ಪಗೆ ಅನುದಾನ ತರಲು ಸಾಧ್ಯವಾಗಲಿಲ್ಲ. ಇನ್ನು ಜನತಾದಳದಿಂದ ಹೋದ ಬಸವರಾಜ ಬೊಮ್ಮಾಯಿಗೆ ಆಗುತ್ತಾ? ಜೆಡಿಎಸ್‌ನಿಂದ ಹೋದವರ ಮಾತು ಕೇಳುತ್ತಾರಾ ಎಂದು ಪ್ರಶ್ನಿಸಿದರು.

ಸಚಿವ ಸಂಪುಟ ಆಗಬೇಕಿತ್ತು, ಇನ್ನೂ ಆಗಿಲ್ಲ. ನಿನ್ನೆ ದೆಹಲಿಯಲ್ಲಿ ಚರ್ಚೆ ಮಾಡಿಲ್ಲ ಎನಿಸುತ್ತೆ. ಮುಂದಿನ ಬಾರಿ ಆಗಬಹುದು. ಕೊರೊನಾ ಹಿನ್ನೆಲೆಯಲ್ಲಿ ಆದಷ್ಟು ಬೇಗ ಪರಿಗಣಿಸಬೇಕು ಎಂದರು.

ಕೋವಿಡ್‌ ಮೂರನೇ ಅಲೆ ಕುರಿತು ಮಾತನಾಡಿ, ಸರ್ಕಾರ ಕೊರೊನಾ 3ನೇ ಅಲೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಇಲ್ಲವಾದರೆ ರಾಜ್ಯ ಕೊರೊನಾ ಮೂರನೇ ಅಲೆಗೆ ಸಿಲುಕಲಿದೆ ಎಂದು ಎಚ್ಚರಿಸಿದರು.

ಸಚಿವರು ಇಲ್ಲದಿದ್ದರೂ ಅಧಿಕಾರಿಗಳ ಮೂಲಕ ನಿರ್ವಹಣೆ ಮಾಡಬೇಕು. ಸಚಿವರು ಇದ್ದರೆ ಅವರೇನು ಗಡಿಗೆ ಬೀಗ ಹಾಕಲು ಸಾಧ್ಯವಿಲ್ಲ. ಅಧಿಕಾರಿಗಳ ಮೂಲಕ ಈ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಸರ್ಕಾರದ ಏಕ ವ್ಯಕ್ತಿಯಿಂದ ಕೊರೊನಾ ನಿಯಂತ್ರಣ ಸಾಧ್ಯವಿಲ್ಲ. ಆದಷ್ಟು ಬೇಗ ಸಚಿವ ಸಂಪುಟ ಆಗಬೇಕು ಎಂದು ಹೇಳಿದರು.

× Chat with us