ಚಾಮರಾಜನಗರಕ್ಕೆ ಹೋಗದಿರುವವರ ಅಧಿಕಾರ ಶಾಶ್ವತವಾಗಿದೆಯೇ?; ಸಿಎಂ

ಮೈಸೂರು: ಯಾರೀಗೂ ಅಧಿಕಾರ ಶಾಶ್ವತವಲ್ಲ. ಚಾಮರಾಜನಗರಕ್ಕೆ ಹೋಗದೇ ಇರುವವರು ಅಧಿಕಾರ ಕಳೆದುಕೊಂಡಿಲ್ಲವೇ? ಅಲ್ಲಿಗೆ ಹೋದರೆ ಅಧಿಕಾರ ಹೋಗುತ್ತದೆ ಎಂಬುದು ಸರಿಯಲ್ಲ. ಅಲ್ಲಿಗೆ ಹೋಗದೆ ಇದ್ದವರಿಗೆ ಅಧಿಕಾರ ಶಾಶ್ವತವಾಗಿ ಉಳಿದಿದೆಯಾ..? ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಶ್ನಿಸಿದರು.

ಮೈಸೂರು ದಸರಾ ಉತ್ಸವ, ಮೋದಿ ಯುಗ್‌ ಉತ್ಸವ್‌ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಅವರಿಂದು ಮೈಸೂರಿಗೆ ಆಗಮಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಾಮರಾಜ ನಗರಕ್ಕೆ ಭೇಟಿ ನೀಡುತ್ತೇನೆ. ಅಲ್ಲಿಗೆ ಹೋದ್ರೆ ಅಧಿಕಾರ ಹೋಗುತ್ತದೆ ಎಂಬುದು ಸರಿಯಲ್ಲ ಎಂದರು.

ನನಗೆ ಬೇರೆಯವರ ರೀತಿ ಯಾವುದೇ ಭಯ ಇಲ್ಲ. ಇದು ನಂಬಿಕೆ ಅಪನಂಬಿಕೆಗಳ ಪ್ರಶ್ನೆಯೂ ಇಲ್ಲ. ಇದು ಮುಖ್ಯಮಂತ್ರಿಯಾಗಿ ನನ್ನ ಕರ್ತವ್ಯದ ಪ್ರಶ್ನೆ‌. ಆ ಕರ್ತವ್ಯವನ್ನ ನಾನು ಈಗ ಮಾಡುತ್ತಿದ್ದೇನೆ. ನೀರಾವರಿ ಸಚಿವನಾಗಿ ಚಾಮರಾಜನಗರಕ್ಕೆ ಹೋಗಿದ್ದೇನೆ. ನಾಳೆ ಮಾತ್ರ ಅಲ್ಲ, ಮತ್ತೆ ಚಾಮರಾಜನಗರಕ್ಕೆ ಭೇಟಿ ನೀಡುತ್ತೇನೆ. ಸಂಪೂರ್ಣ ವೀಕ್ಷಣೆ ಮಾಡಿ ಚಾಮರಾಜನಗರ ಅಭಿವೃದ್ಧಿಗೆ ಕ್ರಮ ವಹಿಸುತ್ತೇನೆ ಎಂದು ಸ್ಪಷ್ಟನೆ ನೀಡಿದರು.

ಮುಖ್ಯಮಂತ್ರಿ ಆದವರಿಗೆ ಎಲ್ಲ ಜಿಲ್ಲೆಗಳೂ ಒಂದೇ. ಅಲ್ಲಿಗೆ ಹೋದರೆ, ಹಲವಾರು ವಿಷಯ ತಿಳಿದು ಅಭಿವೃದ್ಧಿ ಮಾಡಬಹುದು. ಚಾಮರಾಜನಗರದ ಕೆಲವು ತಾಲ್ಲೂಕುಗಳು ನಂಜುಂಡಪ್ಪ ವರದಿಯಲ್ಲಿ ಹಿಂದುಳಿದಿರುವುದು ಕಂಡುಬಂದಿದೆ. ಅಂತಹ ಪ್ರದೇಶಕ್ಕೆ ಹೋಗುವುದು ಮುಖ್ಯಮಂತ್ರಿಯಾಗಿ ನನ್ನ ಕರ್ತವ್ಯ ಅದನ್ನು ನಾನು ಮಾಡುತ್ತಿದ್ದೇನೆ. ಇನ್ನೂ ನಂಬಿಕೆ ಅಪನಂಬಿಕೆ ಅವರವರಿಗೆ ಬಿಟ್ಟಿರುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಇದೇ ವೇಳೆ ನಂಜನಗೂಡು ದೇವಸ್ಥಾನ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ದೇವಸ್ಥಾನಗಳ ರಕ್ಷಣೆಗೆ ಕಾನೂನು ರೂಪಿಸುತ್ತಿದ್ದೇವೆ, ಆದಷ್ಟು ಬೇಗನೇ ಇದಕ್ಕೆ ಅಡಿಗಲ್ಲು ಹಾಕಲಾಗುತ್ತದೆ ಎಂದು ಹೇಳಿದರು.

ಜಲಾವೃತ ಪ್ರದೇಶಗಳ ಶಾಶ್ವತ ಪರಿಹಾರಕ್ಕೆ ಚಿಂತನೆ:
ಮಳೆಬಂದಾಗ ಪದೇ ಪದೇ ಜವಾವೃತ ಆಗುವ ಪ್ರದೇಶಗಳಿಗೆ ಶಾಶ್ವತ ಪರಿಹಾರ ಕಲ್ಪಿಸಲು ಚಿಂತನೆ ನಡೆಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.
ಬೆಂಗಳೂರಿನಲ್ಲಿ ಬಂದಾಗ ತಳಭಾಗದ ಪ್ರದೇಶಗಳು ಜಲಾವೃತ ಆಗುವುದು, ಕೆರೆ ಆವರಣದಲ್ಲಿರುವ ಬಡಾವಣೆಗಳಿಗೆ ತೊಂದರೆ ಆಗುವುದು ಸಹಜವಾಗಿದೆ. ಮಳೆ ಬಂದಾಗ ತಕ್ಷಣಕ್ಕೆ ಕ್ರಮ ಕೈಗೊಳ್ಳುವುದರಿಂದ ಸಮಸ್ಯೆ ಬಗೆಹರಿಸಲಾಗುವುದಿಲ್ಲ. ಆದ್ದರಿಂದ ಜಲಾವೃತ ಆಗುವ ಪ್ರದೇಶಗಳಿಗೆ ಆರೆಂಡಾರ್‌ ಕೆಲಸ ಮಾಡುವ ಮೂಲಕ ಶಾಶ್ವತ ಪರಿಹಾರ ಕಲ್ಪಿಸಲು ಸಿದ್ಧತೆ ನಡೆಸಲಾಗಿದೆ ಎಂದು ಭರವಸೆ ನೀಡಿದರು.

× Chat with us