ಕೋಲ್ಕತ್ತಾ ನೈಟ್‌ ರೈಡರ್ಸ್‌ v/s ಸನ್‌ ರೈಸರ್ಸ್‌ ಹೈದರಾಬಾದ್‌ ಹಣಾಹಣೆ ಇಂದು

ಚೆನ್ನೈ: ಎರಡು ಸಲ ಐಪಿಎಲ್ ಚಾಂಪಿಯನ್ ಆಗಿರುವ ಕೊಲ್ಕತ್ತಾ ನೈಟ್ ರೈಡರ್ಸ್‌ ತಂಡವು ಸ್ಥಿರ ಪ್ರದರ್ಶನ ನೀಡುತ್ತಿರುವ ಸನ್ ರೈಸರ್ಸ್‌ ಹೈದರಾಬಾದ್ ತಂಡವನ್ನು ಚೆನ್ನೈನ ಎಂ.ಎಂ. ಚಿದಂಬರಂ ಸ್ಟೇಡಿಯಂನಲ್ಲಿ ಭಾನುವಾರ ಎದುರಿಸಲಿದೆ.

ಕಳೆದ ಸೀಸನ್‌ನಲ್ಲಿ ಅರ್ಧ ಪಂದ್ಯಾವಳಿ ಮುಗಿದು ಹೋದ ನಂತರ ಕೆಆರ್‌ಆರ್ ನಾಯಕತ್ವದ ಹೊಣೆ ಹೊತ್ತುಕೊಂಡ ಇಯಾನ್ ಮೊರ್ಗನ್ ತಂಡಕ್ಕೆ ಹೊಸ ಹುರುಪು ತುಂಬಿದರು. ಸೋತು ಸುಣ್ಣವಾಗಿದ್ದ ಕೆಕೆಆರ್ ತಂಡವನ್ನು ಪ್ಲೇ ಅಪ್ ಹಂತಕ್ಕೆ ತಗೆದುಕೊಂಡು ಹೋಗಲು ಶ್ರಮಿಸಿದರು. ಆದರೆ ಉತ್ತಮ ರನ್‌ರೇಟ್ ಇದ್ದ ಆರ್‌ಸಿಬಿ ಹಾಗೂ ಎಚ್ ಆರ್‌ಎಚ್ ತಂಡಗಳು ನಾಲ್ಕರ ಘಟ್ಟವನ್ನು ತಲುಪಿದವು. ಕೆಕೆಆರ್ ಐದನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು.

ಪ್ರಸ್ತುತ ಸೀಸನ್‌ಗೆ ಪೂರ್ಣ ಪ್ರಮಾಣದ ನಾಯಕರಾಗಿರುವ ಇಯಾನ್ ಮೊರ್ಗನ್ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಏಕದಿನ ಕ್ರಿಕೆಟ್ ವಿಶ್ವಕಪ್ ಗೆದ್ದ ಇಂಗ್ಲೆಂಡ್ ತಂಡವನ್ನು ಮುನ್ನಡೆಸಿರುವ ಅವರ ಅನುಭವ ಹೇಗೆ ಫಲಕೊಡುತ್ತದೆ ಎನ್ನುವುದು ಭಾನುವಾರದ ಪಂದ್ಯದಲ್ಲಿ ಗೊತ್ತಾಗಲಿದೆ.

ಪ್ರತಿಭಾವಂತ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್ ಶುಭಮನ್ ಗಿಲ್ ಯಾವ ಸಮಯದಲ್ಲಿ ಆದರೂ ಸ್ಫೋಟಗೊಳ್ಳುವ ಪ್ರತಿಭೆ ಹೊಂದಿದ್ದಾರೆ. ಇವರೊಟ್ಟಿಗೆ ರಾಹುಲ್ ತ್ರಿಪಾಠಿ ಉತ್ತಮ ಜೊತೆಯಾಟ ಆಡಿದರೇ ರನ್ ಸೂರೆಗೊಳ್ಳಬಹುದು. ಮಧ್ಯಮ ಕ್ರಮಾಂಕದಲ್ಲಿ ಮಾಜಿ ನಾಯಕ ದಿನೇಶ್ ಕಾರ್ತಿಕ್, ನಿತೀಶ್ ರಾಣಾ, ನಾಯಕ ಮೊರ್ಗನ್ ಆಡಲಿದ್ದಾರೆ. ಆದರೆ ತಂಡಕ್ಕೆ ಚಿಂತೆಯಾಗಿರುವುದು ಟ್ರಂಪ್‌ಕಾರ್ಡ್ ಆ್ಯಂಡ್ರೆ ರೆಸಲ್ ಬಗ್ಗೆ. ಕಳೆದ ಸೀಸನ್‌ನಲ್ಲಿ ಒಂಭತ್ತು ಇನ್ನಿಂಗ್ಸ್‌ನಲ್ಲಿ ಕೇವಲ ೧೩ ಸರಾಸರಿ ರನ್‌ಗಳಿಸಿದ್ದರು. ಒಂದೇ ಒಂದು ಮ್ಯಾಚ್ ವಿನ್ನಿಂಗ್ ಪ್ರದರ್ಶನ ಅವರಿಂದ ಬರಲೇ ಇಲ್ಲ. ಈಗ ಅವರು ಮತ್ತೆ ಲಯಕ್ಕೆ ಬರಬೇಕು ಎನ್ನುವುದು ಟೀಮಿನ ಬಯಕೆಯಾಗಿದೆ. ಇನ್ನು ಸುನಿಲ್ ನರೇನ್ ಲಯಕಂಡುಕೊಂಡಿಲ್ಲ. ಇವರ ಬದಲಿಗೆ ಹಳೆಯ ಹುಲಿ ಹರಭಜನ್ ಸಿಂಗ್ ಅವರನ್ನು ಕಣಕ್ಕೆ ಇಳಿಸುವ ಆಲೋಚನೆ ತಂಡದ ಚಿಂತಕರ ಚಾವಡಿಗೆ ಇದೆ.

ಐಪಿಎಲ್ ಸೀನನ್‌ಗಳಲ್ಲಿ ಸ್ಥಿರ ಪ್ರದರ್ಶನವನ್ನು ನೀಡುತ್ತಾ ಬರುತ್ತಿರುವ ಸನ್‌ರೈಸರ್ ಹೈದರಾಬಾದ್ ತಂಡಕ್ಕೆ ಕಳೆದ ಸಲ ಟ್ರೋಫಿ ಗೆಲ್ಲುವ ಓಟಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ಅಡ್ಡಗಾಲು ಹಾಕಿತು. ಎಂಟು ತಂಡಗಳಲ್ಲೇ ಅತ್ಯಂತ ಬಲಿಷ್ಠ ಓಪನಿಂಗ್ ಜೋಡಿಯನ್ನು ಹೊಂದಿರುವ ಎಸ್‌ಆರ್‌ಎಚ್ ತಂಡಕ್ಕೆ ವೇಗಿ ಭುವನೇಶ್ವರ ಕುಮಾರ್ ಲಯ ಕಂಡುಕೊಂಡಿರುವುದು ಲಾಭವಾಗಿದೆ. ಮತ್ತೊಬ್ಬ ವೇಗಿ ಟಿ.ನಟರಾಜನ್ ಉತ್ತಮ ಸಾಥ್ ನೀಡಬೇಕಾಗಿದೆ.ಸ್ಪಿನ್ ವಿಭಾಗದಲ್ಲಿ ಆಪ್ಘನಿಸ್ತಾನದ ರಶೀದ್‌ಖಾನ್ ಕೈ ಚಳಕ ತೋರಬೇಕಾಗಿದೆ.

ಡೇವಿಡ್ ವಾರ್ನರ್, ಜಾನಿ ಬ್ರೆಸ್ಟೋ ಆಗ್ರ ಕ್ರಮಾಂಕದಲ್ಲಿ ಆಡಿದರೆ, ನ್ಯೂಜಿಲ್ಯಾಂಡ್ ನಾಯಕ ಕೆನ್ ವಿಲಿಯಮ್ಸ್‌ಸನ್, ಕನ್ನಡಿಗ ಮನೀಶ್ ಪಾಂಡೆ, ಆಲ್‌ರೌಂಡರ್ ವಿಜಯ ಶಂಕರ್ ಮಧ್ಯಮಕ್ರಮಾಂಕದಲ್ಲಿ ಭದ್ರ ಬುನಾದಿ ಹಾಕಬೇಕಾಗುತ್ತದೆ.

× Chat with us