IPL-2021: ಡೆಲ್ಲಿ ಕ್ಯಾಪಿಟಲ್‌ v/s ಚೆನ್ನೈ ಸೂಪರ್‌ ಕಿಂಗ್ಸ್‌ ಸೆಣಸಾಟ ಇಂದು

ಮುಂಬೈ: ಐಪಿಎಲ್ ಪಂದ್ಯಾವಳಿಯ 14ನೇ ಸೀಸನ್‌ನ ಎರಡನೇ ಪಂದ್ಯವು ಇಲ್ಲಿನ ವಾಂಖೇಡೆ ಸ್ಟೇಡಿಯಂನಲ್ಲಿ ಇಂದು ನಡೆಯಲಿದ್ದು, ಡೆಲ್ಲಿ ಕ್ಯಾಪಿಟಲ್ ತಂಡದ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಸೆಣಸಲಿದೆ.

ಡ್ಯಾಡಿಸ್ ಆರ್ಮಿ ಎಂದೇ ಕರೆಯಲ್ಪಡುತ್ತಿರುವ ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಸಿಎಸ್‌ಕೆ ತಂಡವು ಕಳೆದ ಋತುವಿನಲ್ಲಿ ಆರಬ್‌ರಾಷ್ಟ್ರದಲ್ಲಿ ನಡೆದ ಪಂದ್ಯಾವಳಿಯಲ್ಲಿ ಇಡೀ ಐಪಿಎಲ್ ಇತಿಹಾಸದಲ್ಲೇ ಅತ್ಯಂತ ಹೀನಾಯ ಪ್ರದರ್ಶನ ನೀಡಿದ್ದು ಬಿಟ್ಟರೆ ಉಳಿದಂತೆ ತಂಡದ ಪ್ರದರ್ಶನ ಮಾತ್ರ ಉತ್ತಮವಾಗಿದೆ.

ಕೂಲ್ ಕ್ಯಾಪ್ಟನ್ ಎಂದು ಹೆಸರುವಾಸಿಯಾಗಿರುವ ಎಂ.ಎಸ್.ಧೋನಿಯು ಅಂಗಳದಲ್ಲೇ ತಗೆದುಕೊಳ್ಳುವ ಕೆಲವು ನಿರ್ಧಾರಗಳು ಕೈ ತಪ್ಪಿ ಹೋಗುತ್ತಿರುವ ಪಂದ್ಯಗಳನ್ನೂ ತಮ್ಮ ವಶಕ್ಕೆ ತಗೆದುಕೊಂಡಿರುವ ಹಲವರು ನಿದರ್ಶನಗಳು ಇವೆ. ಇವರಿಗೆ ಸಾಥ್ ನೀಡುತ್ತಿದ್ದ ಪ್ರಮುಖ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಸುರೇಶ್ ರೈನಾ ವೈಯಕ್ತಿಕ ಕಾರಣಗಳಿಂದ 13ನೇ ಸೀಸನ್ನಿನಲ್ಲಿ ಭಾಗವಹಿಸದೇ ದುಬೈನಿಂದ ಭಾರತಕ್ಕೆ ವಾಪಸ್ ಆಗಿದ್ದರು. ಇದು ಸಿಎಸ್‌ಕೆಯ ಫಲಿತಾಂಶದ ಮೇಲೆ ಪರಿಣಾಮ ಬೀರಿದೆ ಎನ್ನುವುದು ಅಂಕಿ ಅಂಶಗಳಿಂದಲೇ ತಿಳಿಯುತ್ತದೆ. 14 ಪಂದ್ಯಗಳಿಂದ ಕೇವಲ 12 ಅಂಕಗಳಿಸಿ 7ನೇ ಸ್ಥಾನವನ್ನು ಪಡೆದುಕೊಂಡಿತು. ಸುರೇಶ್ ರೈನಾ ಅನುಪಸ್ಥಿತಿಯಲ್ಲಿ ಮಧ್ಯಮ ಕ್ರಮಾಂಕದಲ್ಲಿ ಯಾರು ಆಡಬೇಕು ಎನ್ನುವ ಗೊಂದಲದಲ್ಲೇ ಟೂರ್ನಿ ಪೂರ್ತ ಆಟವಾಡಿದ ಸಿಎಸ್‌ಕೆಗೆ ಗೆಲುವು ಮಾತ್ರ ಹೆಚ್ಚಾಗಿ ಧಕ್ಕಲಿಲ್ಲ. ಆದರೆ ಪ್ರಸ್ತುತ ಸೀಸನ್‌ಗೆ ಸುರೇಶ್ ರೈನಾ ಅವರ ಆಗಮನವಾಗಿದ್ದು, ತಂಡಕ್ಕೆ ಆನೆಯ ಬಲ ಬಂದಂತೆ ಆಗಿರುವುದಂತೂ ಸ್ಪಷ್ಟ.

ಈ ಸೀಸನ್‌ನಲ್ಲಿ ಅಗ್ರ ಕ್ರಮಾಂಕದಲ್ಲಿ ಯಾರನ್ನು ಆಡಿಸಬೇಕು ಎನ್ನುವ ಗೊಂದಲ ಧೋನಿಯನ್ನು ಕಾಡದೆ ಇರದು. ಋತುರಾಜ್ ಗಾಯಕವಾಡ್, ಫಾಪ್-ಡು-ಪ್ಲೆಸೀಸ್, ರಾಬಿನ್ ಉತ್ತಪ್ಪ ಈ ಮೂವರಲ್ಲಿ ಯಾರನ್ನು ಜೋಡಿಯಾಗಿ ಕಣಕ್ಕೆ ಇಳಿಸಬೇಕು ಎನ್ನುವುದು ತಂಡಕ್ಕೆ ತುಸು ಗೊಂದಲ ಮೂಡಿಸಿದೆ. ಮಧ್ಯಮಕ್ರಮಾಂಕದಲ್ಲಿ ರೈನಾ, ಅಂಬಟಿ ರಾಯುಡು, ಧೋನಿ,ಡ್ವೇನ್ ಬ್ರಾವೋ ತಂಡದ ಆಧಾರವಾಗಿದ್ದಾರೆ.

ಇನ್ನೂ ಡೆಲಿ ಕ್ಯಾಪಿಟಲ್ ತಂಡವು ಕಳೆದ ಸೀಸನ್‌ನಲ್ಲಿ ಯಾರೂ ಊಹಿಸಲಾರದಷ್ಟು ಅತ್ಯುತ್ತಮ ಪ್ರದರ್ಶನವನ್ನೇ ನೀಡಿದೆ. ಹೆಸರು ಬದಲಾವಣೆ, ನಾಯಕತ್ವ ಬದಲಾವಣೆ ಹಾಗೂ ಹೊಸ ಹುಡುಗರ ಸಂಯೋಜನೆ ತಂಡವನ್ನು ಯಶಸ್ಸಿನ ಉತ್ತುಂಗಕ್ಕೆ ಕರೆದುಕೊಂಡು ಹೋಗಿತ್ತು. ಆದರೆ ಫೈನಲ್‌ನಲ್ಲಿ ಅನುಭವಿ ಮುಂಬೈ ಇಂಡಿಯನ್ಸ್ ವಿರುದ್ಧ ಸೋತು ಹೋಯಿತು.

ಈ ಸೀಸನ್‌ನಲ್ಲಿ ರಿಷಭ್ ಪಂತ್‌ಗೆ ತಂಡದ ಪಟ್ಟ ಕಟ್ಟಲಾಗಿದೆ. ಶ್ರೇಯಸ್ ಅಯ್ಯರ್ ಇಂಗ್ಲೆಂಡ್ ಪಂದ್ಯದಲ್ಲಿ ಗಾಯಾಳು ಆದ ಕಾರಣ ಐಪಿಎಲ್ ತಪ್ಪಿಸಿಕೊಂಡಿದ್ದಾರೆ. ನಾಯಕತ್ವದ ಹೊಣೆ ಹೊತ್ತಿರುವ ರಿಷಭ್ ಪಂತ್ ಯಾವ ರೀತಿ ತಂಡನ್ನು ಮುನ್ನಡೆಸುತ್ತಾರೆ ಎನ್ನುವುದು ಇಂದಿನ ಪಂದ್ಯದಲ್ಲಿ ಅನಾವರಣಗೊಳ್ಳುತ್ತದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿರುವ ಶಿಖರ್ ಧವನ್, ಅಂಜಿಕ್ಯ ರಹಾನೆ, ರವಿಚಂದ್ರನ್ ಅಶ್ವಿನ್, ಇಶಾಂತ್ ಶರ್ಮಾರಂತಹ ಆಟಗಾರರು ಟೀಮಿನಲ್ಲಿ ಇರುವುದರಿಂದ ಅವರ ಅನುಭವಗಳು ತಂಡಕ್ಕೆ ವರವಾಗಬಹುದು. ಆಸ್ಟ್ರೇಲಿಯಾದ ಸ್ಟಿವನ್ ಸ್ಮಿತ್, ಮಾರ್ಕಸ್ ಸ್ಟೋಯಿನಸ್, ವೆಸ್ಟ್ ಇಂಡಿಸ್‌ನ ಹೊಡಿ-ಬಡಿ ಆಟಗಾರ ಶಿಮ್ರಾನ್ ಹೆಟ್ಮೆಯರ್ ತಂಡದ ಬಲವಾಗಿದ್ದಾರೆ.

ತಂಡದ ಪ್ರಮುಖ ಬೌಲರ್‌ಗಳಾದ ದಕ್ಷಿಣ ಆಫ್ರಿಕಾದ ಕಗಿಸೊ ರಬಾಡ ಹಾಗೂ ಎನ್‌ರಿಚ್ ನೋಕಿಯೊ ಬಯೋ ಬಬಲ್ ಮಾರ್ಗಸೂಚಿಗಳನ್ನು ಪಾಲನೆ ಮಾಡಬೇಕಾಗಿರುವುದರಿಂದ ಕ್ವಾರಂಟೆನ್‌ಗೆ ಒಳಗಾಗಿದ್ದಾರೆ. ಆದ್ದರಿಂದ ಒಂದೆರಡು ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತದ ವೇಗದ ಬೌಲರ್‌ಗಳಾದ ಇಶಾಂತ್ ಶರ್ಮಾ ಹಾಗೂ ಉಮೇಶ್ ಯಾದವ್ ಮಂಚೂಣಿ ಬೌಲರ್‌ಗಳಾಗಿ ಕಾರ್ಯ ನಿರ್ವಹಿಸಬಹುದು.

ಕಳೆದ ಸೀಸನ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ ತಂಡವು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎರಡು ಬಾರಿ ಮುಖಾಮುಖಿಯಾಗಿ ಎರಡಲ್ಲೂ ಗೆಲವು ಸಾಧಿಸಿತು. ಉಭಯ ತಂಡಗಳ ಮುಖಾಮುಖಿ ಸಾಧನೆ ನೋಡಿದರೆ ಒಟ್ಟು 23 ಪಂದ್ಯದಲ್ಲಿ ಸಿಎಸ್‌ಕೆ 15ರಲ್ಲಿ ಗೆದ್ದಿದ್ದರೆ, ಡೆಲ್ಲಿ ಕ್ಯಾಪಿಟಲ್ಸ್ ೮ ರಲ್ಲಿ ಮಾತ್ರ ಗೆದ್ದಿದೆ.

ಉಭಯ ತಂಡಗಳ ಸಂಭವನೀಯ ಹನ್ನೊಂದರ ಬಳಗ ಕೆಳಕಂಡತೆ ಇದೆ.

ಸಿಎಸ್‌ಕೆ: ಋತುರಾಜ್ ಗಾಯಕವಾಡ್, ರಾಬಿನ್ ಉತ್ತಪ್ಪ, ಫಾಪ್-ಡು-ಫ್ಲೆಸಿಸ್,ಸುರೇಶ್ ರೈನಾ, ರವೀಂದ್ರ ಜಡೇಜಾ,ಎಂ.ಎಸ್.ಧೋನಿ (ನಾಯಕ), ಸ್ಯಾಮ್ ಕರನ್, ಡ್ವೇನ್ ಬ್ರಾವೋ, ಶಾರ್ದೂಲ್ ಠಾಕೂರ್, ದೀಪಕ್ ಚಹರ್, ಕೆ.ಗೌತಮ್

× Chat with us