ಅತ್ಯಾಚಾರ ಸಂತ್ರಸ್ತೆಗೆ ತಕ್ಷಣ ಪರಿಹಾರ ನೀಡಲಿ, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ: ಇಂದ್ರಜಿತ್‌ ಆಗ್ರಹ

ಮೈಸೂರು: ಅತ್ಯಾಚಾರಕ್ಕೆ ಒಳಗಾಗಿರುವ ಸಂತ್ರಸ್ಥೆಗೆ ತಕ್ಷಣವೇ ಪರಿಹಾರವನ್ನು ನೀಡುವ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೊಸ ಮಾದರಿಯೊಂದನ್ನು ಹುಟ್ಟುಹಾಕಬೇಕು ಎಂದು ಚಲನಚಿತ್ರ ನಿರ್ದೇಶಕ ಇಂದ್ರಜೀತ್ ಲಂಕೇಶ್ ಅವರು ಆಗ್ರಹಿಸಿದ್ದಾರೆ.

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅತ್ಯಾಚಾರ ನಡೆಸಿದ ಆರೋಪಿಗಳಿಗೆ ಶಿಕ್ಷೆಯಾದ ಬಳಿಕ ಸಂತ್ರಸ್ಥರಿಗೆ ಪರಿಹಾರ ನೀಡುವುದು ಇಲ್ಲಿವರೆಗೂ ನಡೆದು ಬಂದಿರುವ ಕ್ರಮವಾಗಿದೆ. ಆದ್ದರಿಂದ ಮುಖ್ಯಮಂತ್ರಿಯವರು ಹೊಸ ಮಾದರಿಗೆ ನಾಂದಿಯಾಡಬೇಕು ಅಲ್ಲದೇ ಅತಿ ಹೆಚ್ಚು ಪರಿಹಾರವನ್ನು ಸಂತ್ರಸ್ಥೆಯ ಕುಟುಂಬಕ್ಕೆ ನೀಡಬೇಕು ಎಂದು ಒತ್ತಾಯಿಸಿದರು.

ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದು ಸುಮಾರು ಮೂರು ದಿನಗಳು ಆಗಿದ್ದರೂ ಸರ್ಕಾರದ ಯಾವೊಬ್ಬ ಸಚಿವರಾಗಲಿ, ಉನ್ನತ ಮಟ್ಟದ ಅಧಿಕಾರಿಗಳಾಗಲಿ ಸಂತ್ರಸ್ಥೆಯ ಆರೋಗ್ಯವನ್ನು ವಿಚಾರಿಸಲು ಹೋಗಿಲ್ಲ. ಆ ಮಾನಿನಿಗೆ ಧೈರ್ಯ ತುಂಬುವ ಕೆಲಸವನ್ನೂ ಮಾಡಿಲ್ಲ. ಇದು ಸರ್ಕಾರದ ಬೇಜಾವಬ್ದಾರಿಯನ್ನು ತೋರಿಸುತ್ತದೆ. ಮೊದಲ ಆಕೆಗೆ ಧೈರ್ಯ ತುಂಬುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.

ಮೈಸೂರಿನಲ್ಲಿ ಕಳೆದ ಮೂರುದಿನದ ಹಿಂದೆ ಹಾಡಹಗಲೇ ಶೂಟೌಟ್ ಆಗಿದೆ. ಆಭರಣದ ಅಂಗಡಿ ದರೋಡೆಯಾಗಿದೆ. ಗ್ಯಾಂಗ್ ರೇಪ್ ಆಗಿದೆ. ಇಷ್ಟೆಲ್ಲ ವೈಫಲ್ಯವಾಗಿದ್ದರೂ ಸರ್ಕಾರದ ಮಟ್ಟದಲ್ಲಿ ತಕ್ಷಣಕ್ಕೆ ಯಾವುದೇ ಕ್ರಮವನ್ನು ತಗೆದುಕೊಂಡಿಲ್ಲ. ಇದು ಜಿಲ್ಲಾ ಉಸ್ತುವಾರಿ ಸಚಿವರ ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಆಡಳಿತ ವೈಫಲ್ಯವನ್ನು ತೋರಿಸುತ್ತದೆ. ಈ ಘಟನೆಗಳನ್ನು ಸರಿಯಾದ ದಿಕ್ಕಿನಲ್ಲಿ ತನಿಖೆ ಮಾಡಲು ಪೊಲೀಸ್ ಇಲಾಖೆಗೆ ಸ್ವಾತಂತ್ರ್ಯ ನೀಡಬೇಕು. ರಾಜಕೀಯ ಮುಖಂಡರು- ಜನಪ್ರತಿನಿಧಿಗಳು ಹಸ್ತಕ್ಷೇಪ ಮಾಡಬಾರದು ಎಂದರು.

ಅತ್ಯಾಚಾರದಂತಹ ಪ್ರಕರಣಗಳಿಗೆ ಶಿಕ್ಷೆ ಯಾವ ಪ್ರಮಾಣದಲ್ಲಿ ಇರುತ್ತದೆ ಎನ್ನುವುದರ ಅರಿವು ಯುವಜನಾಂಗಕ್ಕೆ ಇಲ್ಲ. ಆದ್ದರಿಂದ ರಸ್ತೆ ಸಾರಿಗೆ ಬಸ್ಸುಗಳಲ್ಲಿ, ಬಸ್ ನಿಲ್ದಾಣಗಳಲ್ಲಿ ಈ ಕುರಿತು ಹೋಲ್ಡಿಂಗ್ಸ್‌ಗಳನ್ನು ಹಾಕುವ ಮೂಲಕ ಪ್ರಚಾರ ಮಾಡಿ, ಜಾಗೃತಿ ಮೂಡಿಸುವ ಕೆಲಸವನ್ನು ಸರ್ಕಾರ ಮಾಡಬೇಕು. ಇದರಿಂದಾದರೂ ಪ್ರಕರಣಗಳು ಸ್ವಲ್ಪ ಪ್ರಮಾಣದಲ್ಲಿ ತಗ್ಗಬಹುದು ಎಂದು ಇಂದ್ರಜೀತ್ ಅಭಿಪ್ರಾಯಪಟ್ಟರು.

ಮೈಸೂರು ಸಾಂಸ್ಕೃತಿಕ ರಾಜಧಾನಿಯಾಗಿ ಇಡೀ ವಿಶ್ವದ ಗಮನ ಸೆಳೆದಿದೆ. ಪ್ರವಾಸೋದ್ಯಮದಲ್ಲಿ ಮುಂದಿದೆ. ಆದ್ದರಿಂದ ಇಂತಹ ದುಷ್ಕೃತ್ಯಗಳು ಪದೇ-ಪದೇ ನಡೆದರೆ ವಿಶ್ವ ಮಟ್ಟದಲ್ಲಿ ಇರುವ ಘನತೆ ಹಾಳಾಗುತ್ತದೆ. ಇದಕ್ಕಾಗಿ ಸರ್ಕಾರ ಬಹಳ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡು ಆರೋಪಿಗಳನ್ನು ಶೀಘ್ರವೇ ಪತ್ತೆ ಹಚ್ಚಿ ತ್ವರಿತ ಗತಿಯಲ್ಲಿ ಶಿಕ್ಷೆ ಕೊಡಬೇಕು ಎಂದು ಒತ್ತಾಯಿಸಿದರು.

ಮೈಸೂರು ಹತ್ತು-ಹಲವಾರು ಕವಿಗಳ, ಲೇಖಕರ, ಚಿಂತಕರ ನೆಲೆಯಾಗಿದೆ. ಇಂತಹ ಊರನ್ನು ತಾಲಿಬಾನಿಗೆ, ಉತ್ತರ ಪ್ರದೇಶಕ್ಕೆ ಹೋಲಿಕೆ ಮಾಡಲು ಕಾರಣವಾಗಿರುವ ಗ್ಯಾಂಗ್ ರೇಪ್, ಹಾಡಹಗಲೇ ದರೋಡೆಯಂತಹ ಪ್ರಕರಣಗಳು ಮತ್ತೆ ಮರುಕಳಿಸದಂತೆ ಪೊಲೀಸ್ ಇಲಾಖೆ ಜಾಗೃತಿ ವಹಿಸಬೇಕು ಎಂದರು.

× Chat with us