ಇಂಡೋ-ಚೀನಾ ಸಂಬಂಧ ಕೆಟ್ಟ ಹಾದಿಯಲ್ಲಿದೆ : ಸಚಿವ ಜೈಶಂಕರ್

ಸಿಂಗಪುರ್: ಒಪ್ಪಂದಗಳನ್ನು ಉಲ್ಲಂಘಿಸಿ ಬೀಜಿಂಗ್ ಹಲವು ಕ್ರಮಗಳನ್ನು ತೆಗೆದುಕೊಂಡಿರುವುದರಿಂದ ಭಾರತ ಮತ್ತು ಚೀನಾ ನಡುವಿನ ಸಂಬಂಧ ಕೆಟ್ಟ ಹಾದಿಯಲ್ಲಿ ಸಾಗುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ.

ಚೀನಾದ ನಡವಳಿಕೆಗಳು ನಮ್ಮೊಂದಿಗಿನ ಸಂಬಂಧವನ್ನು ಯಾವ ದಿಕ್ಕಿನಲ್ಲಿ ತೆಗೆದುಕೊಂಡು ಹೋಗುತ್ತದೆಯೋ ಗೊತ್ತಿಲ್ಲ. ಹಾಗಾಗಿ ಈ ಬಗ್ಗೆ ಮರು ಚಿಂತನೆ ನಡೆಸಬೇಕಾದ ಅಗತ್ಯವಿದೆ. ಇದಕ್ಕೆಲ್ಲ ಚೀನಾವೇ ಉತ್ತರ ನೀಡಬೇಕಿದೆ ಎಂದು ಅವರು ತಿಳಿಸಿದ್ದಾರೆ.

ಬ್ಲೂಮ್‌ಬರ್ಗ್ ನ್ಯೂ ಎಕನಾಮಿಕ್ ಫೋರಂ ಹಮ್ಮಿಕೊಂಡಿದ್ದ ಗ್ರೇಟರ್ ಪವರ್ ಕಾಂಪಿಟೇಷನ್ : ದಿ ಎಮರ್ಜಿಂಗ್ ವರ್ಲ್ಡ್ ಆರ್ಡರ್ ಕುರಿತ ಸಂವಾದದಲ್ಲಿ ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿ ಭಾರತ-ಚೀನಾದ ಪ್ರಸ್ತುತ ಸಂಬಂಧದ ಬಗ್ಗೆ ಮಾತನಾಡಿದರು.

ಒಪ್ಪಂದಗಳನ್ನು ಉಲ್ಲಂಘಿಸಿರುವ ಚೀನಾ ಇಲ್ಲಿಯವರೆಗೂ ಅದಕ್ಕೆ ವಿಶ್ವಾಸಾರ್ಹ ವಿವರಣೆ ನೀಡಿಲ್ಲ. ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧವನ್ನು ಎಲ್ಲಿಗೆ ಕೊಂಡೊಯ್ಯಲು ಬೀಜಿಂಗ್ ಬಯಸುತ್ತಿದೆ ಎಂಬುದನ್ನು ಚೀನಾದ ನಾಯಕತ್ವವೇ ತಿಳಿಸಬೇಕು ಎಂದಿದ್ದಾರೆ.

ಉಭಯ ದೇಶಗಳ ನಡುವಿನ ಸಂಬಂಧ ಈಗ ಹೇಗಿದೆ ಮತ್ತು ಅದು ಎತ್ತ ಸಾಗುತ್ತಿದೆ ಎಂಬುದರ ಬಗ್ಗೆ ಚೀನಾಕ್ಕೆ ಅರಿವಿದೆ. ಸಂಬಂಧ ಸರಿಯಾದ ಹಾದಿಯಲ್ಲಿ ಸಾಗುತ್ತಿಲ್ಲ ಎಂಬುದೂ ಆ ದೇಶಕ್ಕೆ ತಿಳಿದಿದೆ. ನಾನು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರೊಂದಿಗೆ ಹಲವು ಬಾರಿ ಮಾತುಕತೆ ನಡೆಸಿದ್ದೇನೆ. ಆ ಸಂದರ್ಭದಲ್ಲೆಲ್ಲ ನ್ಯಾಯಯುತವಾಗಿಯೇ ಮಾತನಾಡಿದ್ದೇನೆ. ಸ್ಪಷ್ಟ ಮತ್ತು ಸಮಂಜಸವಾಗಿಯೇ ಎಲ್ಲವನ್ನೂ ತಿಳಿಸಿದ್ದೇನೆ ಎಂದು ಅವರು ಹೇಳಿದರು.

× Chat with us