ದೇಶದಲ್ಲೇ ಮೊದಲ ಪ್ರಾಣಿ ಕಲ್ಯಾಣ ಸಹಾಯವಾಣಿ ಕೇಂದ್ರ ಬೆಂಗಳೂರಿನಲ್ಲಿ ಆರಂಭ

ಬೆಂಗಳೂರು: ಜಾನುವಾರುಗಳ ಆರೋಗ್ಯ, ಉತ್ಪನ್ನ ಅಥವಾ ಯಾವುದೇ ಮಾಹಿತಿ, ಸಲಹೆ ಪಡೆಯಲು ದೇಶದಲ್ಲೇ ಮೊಟ್ಟಮೊದಲ ಬಾರಿಗೆ ಕರ್ನಾಟಕದಲ್ಲಿ ಸುಸಜ್ಜಿತ ಪ್ರಾಣಿ ಕಲ್ಯಾಣ ಸಹಾಯವಾಣಿ ಆರಂಭಿಸಲಾಗಿದೆ.

ಪ್ರಾಣಿ ಕಲ್ಯಾಣ ಸಹಾಯವಾಣಿಯ ವಾರ್ ರೂಮ್‌ ಅನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉದ್ಘಾಟಿಸಿದರು.
ಪಶು ಸಂಗೋಪನೆ ಮತ್ತು ಪಶುವೈದ್ಯಕೀಯ ಸೇವೆಗಳ ಆಯೋಗದಲ್ಲಿ (ಸಿಎಹೆಚ್‌ವಿಎಸ್) ನಗರದ ಬೆಂಗಳೂರಿನ ಹೆಬ್ಬಾಳದ ಪಶುಪಾಲನಾ ಭವನದಲ್ಲಿ ವಾರ್ ರೂಮ್ ಸ್ಥಾಪಿಸಲಾಗಿದೆ.

ಸಹಾಯವಾಣಿ ಉದ್ಘಾಟಿಸಿ ಮಾತನಾಡಿದ ಯಡಿಯೂರಪ್ಪ, ದೇಶದಲ್ಲೇ ಮೊದಲ ಬಾರಿಗೆ ನಮ್ಮ ರಾಜ್ಯದಲ್ಲಿ ಇಂತಹದೊಂದು ಸುಸಜ್ಜಿತ ಪ್ರಾಣಿ ಕಲ್ಯಾಣ ಸಹಾಯವಾಣಿ ಆರಂಭಿಸಲಾಗಿದೆ. ಇದು ರೈತರು, ಸಾಕಾಣಿಕೆದಾರರು ತಮ್ಮ ಜಾನುವಾರುಗಳ ಆರೋಗ್ಯ ಹಾಗೂ ಉತ್ಪಾದಕತೆ ಹೆಚ್ಚಿಸಲು ಪ್ರಮುಖ ಪಾತ್ರವಹಿಸಲಿದೆ ಎಂದು ತಿಳಿಸಿದರು.
ಪಶು ಸಂಗೋಪನೆ ಸಚಿವ ಪ್ರಭು ಚೌಹಾಣ್‌, ದಿನದ 24 ಗಂಟೆಯೂ ಈ ಸಹಾಯವಾಣಿ ಕಾರ್ಯ ನಿರ್ವಹಿಸಲಿದೆ. ಇಲಾಖೆಯಿಂದ ಜಾನುವಾರು ಆರೋಗ್ಯ ಸೇವೆಗಳು ರೈತರ ಮನೆ ಬಾಗಿಲನ್ನು ತಲುಪಲಿವೆ. ಜಾನುವಾರು ಆರೋಗ್ಯ ಕಾಪಾಡುವಲ್ಲಿ ಹೆಚ್ಚು ಶ್ರಮ ವಹಿಸುತ್ತಿದೆ ಎಂದರು.

ಸಹಾಯವಾಣಿಯ ವಿಶೇಷತೆಗಳು

* ರೈತರು, ಪಶುಪಾಲಕರು (8277100200) ಪ್ರಾಣಿ ಕಲ್ಯಾಣ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಪಶು ಆರೈಕೆ ಸಂಬಂಧ ಮಾಹಿತಿ ಪಡೆಯಬಹುದು.
* ಕುರಿ, ಮೇಕೆ, ಮೊಲ, ಹಂದಿ, ಕೋಳಿ ಸಾಕಾಣಿಕೆ, ಹೈನುಗಾರಿಕೆ ಬಗ್ಗೆ ಮಾಹಿತಿ ಪಡೆಯಬಹುದು.
* ಸಾಂಕ್ರಾಮಿಕ ರೋಗಗಳ ಹತೋಟಿ ಹಾಗೂ ಚಿಕಿತ್ಸೆ, ಸ್ಥಳೀಯ ಹಾಗೂ ವಿದೇಶಿ ತಳಿಗಳು, ಚುಚ್ಚುಮದ್ದು, ಬ್ಯಾಂಕುಗಳ ಸಾಲ ಸೌಲಭ್ಯ, ಮೇವಿನ ಲಭ್ಯತೆ ಕುರಿತ ವಿವರ ಪಡೆಯಬಹುದು.
* ತುರ್ತು ಸಮಯದಲ್ಲಿ ಅಪಘಾತ ಹಾಗೂ ಇತರೆ ಕಾಯಿಲೆಗಳಿಂದ ನರಳುತ್ತಿರುವ ರಾಸುಗಳಿಗೆ ತಕ್ಷಣಕ್ಕೆ ಪಶು ವೈದ್ಯರು ದೊರೆಯದಿದ್ದಾಗ ಚಿಕಿತ್ಸೆ ಬಗ್ಗೆ ಸಲಹೆ
* ಕರ್ನಾಟಕ ಗೋ ಹತ್ಯೆ ಪ್ರತಿಬಂಧಕ ಮತ್ತು ಜಾನುವಾರು ಸಂರಕ್ಷಣೆ ಕಾಯ್ದೆ ಜಾರಿಗೊಳಿಸುವ ಸಂಬಂಧ ಸಲಹೆ ಹಾಗೂ ಮಾಹಿತಿಯನ್ನು ಈ ಸಹಾಯವಾಣಿಯಿಂದ ಪಡೆಯಬಹುದು.

× Chat with us