ಪಾಕ್ ರಾಜಕಾರಣದಲ್ಲಿ ನಾಯಕರ ಪ್ರಾಣಕ್ಕೆ ಸದಾ ಆಪತ್ತು
ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಗುರುವಾರ ಸರಕಾರದ ವಿರುದ್ಧ ಪ್ರತಿಭಟನಾ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದ ವೇಳೆ ಗುಂಡಿನ ದಾಳಿಗೆ ಗುರಿಯಾದ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಈಗ ಚೇತರಿಸಿಕೊಳ್ಳುತ್ತಿದ್ದಾರೆ.
ಲಾಹೋರ್ ನಿಂದ 70 ಕಿಮೀ ದೂರದಲ್ಲಿರುವ ಗುಜ್ರನ್ ವಾಲಾ ಸಮೀಪದ ವಜೀರಾಬಾದ್ ನಲ್ಲಿ ನಡೆದ ಈ ಘಟನೆ ಪಾಕಿಸ್ತಾನದ ರಾಜಕೀಯದಲ್ಲಿ ಮತ್ತೊಮ್ಮೆ ಸಂಚಲನ ಸೃಷ್ಟಿಸಿದೆ.
ರಾಜಕೀಯ ನಾಯಕರ ಹತ್ಯೆ ಪಾಕಿಸ್ತಾನದ ಮಟ್ಟಿಗೆ ಹೊಸದೇನೂ ಅಲ್ಲ. ಈ ಘಟನೆ ಅಲ್ಲಿನ ಅಸ್ಥಿರ ಪ್ರಜಾಪ್ರಭುತ್ವವನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ. ನನ್ನ ಹತ್ಯೆಗೆ ಸಂಚು ನಡೆಯುತ್ತಿದೆ ಎಂದು ತೆಹ್ರಿಕ್- ಎ- ಇನ್ಸಾಫ್ ಪಕ್ಷದ ನಾಯಕ ಇಮ್ರಾನ್ ಖಾನ್ ಐದು ತಿಂಗಳ ಹಿಂದೆಯೇ ಆರೋಪಿಸಿದ್ದರು. ಈ ಭೀತಿ ಈಗ ನಿಜವಾಗಿದೆ.
ಶೆಹಬಾಜ್ ಷರೀಫ್ ಸರ್ಕಾರದ ವಿರುದ್ಧದ “ಲಾಂಗ್ ಮಾರ್ಚ್” ಭಾಗವಾಗಿ 70 ವರ್ಷದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಪ್ರತಿಭಟನಾ ರ‍್ಯಾಲಿ ನಡೆಸುತ್ತಿದ್ದಾರೆ. ಹೊಸ ಸರ್ಕಾರ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಟ್ರಕ್ ಮೇಲೆ ನಿಂತು ಜನರನ್ನುದ್ದೇಶಿಸಿ ಮಾತನಾಡುವ ವೇಳೆ ಅಪರಿಚಿತ ಬಂದೂಕು ಧಾರಿ ಗುಂಡು ಹಾರಿಸಿದ್ದಾನೆ. ಗುಂಡು ಬಲಗಾಲಿಗೆ ತಾಗಿದ್ದರಿಂದ ಇಮ್ರಾನ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
“ನಾನು ಇಮ್ರಾನ್ ಖಾನ್ ಅವರನ್ನು ಕೊಲ್ಲಲು ಬಂದಿದ್ದೇನೆ. ಅವರು ಜನರನ್ನು ದಾರಿ ತಪ್ಪಿಸುತ್ತಿದ್ದರಿಂದ ನಾನು ಹೀಗೆ ಮಾಡಿದ್ದೇನೆ. ನನಗೆ ಇದನ್ನು ಸಹಿಸಲಾಗಲಿಲ್ಲ. ಅವರು ರ‍್ಯಾಲಿ ಪ್ರಾರಂಭಿಸಿದ ದಿನವೇ ನಾನು ಕೊಲೆ ಮಾಡಲು ನಿರ್ಧರಿಸಿದ್ದೆ. ನಾನು ಏಕಾಂಗಿ, ನನ್ನ ಹಿಂದೆ ಯಾರೂ ಇರಲಿಲ್ಲ” ಎಂದು ಆರೋಪಿ ಹೇಳಿದ್ದಾನೆ. ಆದರೆ ಪಾಕ್ ಜನತೆ ಈ ಹೇಳಿಕೆಯನ್ನು ನಂಬಲು ಸಿದ್ಧರಿಲ್ಲ. ಘಟನೆಯ ಹಿಂದೆ ಪಾಕಿಸ್ತಾನದ ಸೇನೆ ಮತ್ತು ಗುಪ್ತಚರ ಸಂಸ್ಥೆ ಐಎಸ್ ಐ ಕೈವಾಡವಿದೆ ಎಂಬ ಮಾತುಗಳು ಎಲ್ಲೆಡೆ ಕೇಳಿ ಬರುತ್ತಿದೆ.
ವಿದೇಶಿ ನಾಯಕರಿಂದ ಪಡೆದ ಉಡುಗೊರೆಗಳ ಮಾರಾಟದಿಂದ ಬಂದ ಹಣವನ್ನು ಬಚ್ಚಿಟ್ಟ ಆರೋಪದ ಮೇಲೆ ಪಾಕಿಸ್ತಾನದ ಚುನಾವಣಾ ಆಯೋಗವು ಇಮ್ರಾನ್ ಅವರನ್ನು ಐದು ವರ್ಷಗಳ ಕಾಲ ಸಾರ್ವಜನಿಕ ಹುದ್ದೆಯಿಂದ ಅನರ್ಹಗೊಳಿಸಿದೆ. ಆದರೆ ತಮ್ಮ ಪಕ್ಷವನ್ನು ಮತ್ತೆ ಚುನಾವಣೆಯಲ್ಲಿ ಗೆಲ್ಲಿಸಿ, ನಿರ್ಬಂಧಗಳನ್ನು ಕಳಚಿಕೊಂಡು ಅಧಿಕಾರ ಚುಕ್ಕಾಣಿ ಹಿಡಿಯುವುದು ಇಮ್ರಾನ್ ಕನಸು. ಇದಕ್ಕಾಗಿ ತಕ್ಷಣವೇ ಚುನಾವಣೆಗಳನ್ನು ಘೋಷಿಸಬೇಕು ಎಂದು ಸರ್ಕಾರದ ಮೇಲೆ ಒತ್ತಡ ಹೇರಲು ಕಳೆದ ಅಕ್ಟೋಬರ್ 28 ರಿಂದ ಲಾಂಗ್ ಮಾರ್ಚ್ ಆರಂಭಿಸಿದ್ದಾರೆ. ನವೆಂಬರ್ 4ರಂದು ಈ ಯಾತ್ರೆ ಇಸ್ಲಾಮಾಬಾದ್ ತಲುಪಬೇಕಿತ್ತು. ಆದರೆ ಇಮ್ರಾನ್ ಈಗ ಆಸ್ಪತ್ರೆ ಸೇರಿದ್ದಾರೆ. ಅವರ ವಿರೋಧಿಗಳ ಆಸೆ ಅರ್ಧ ಈಡೇರಿದೆ.
ಪಾಕಿಸ್ತಾನದ ರಾಜಕೀಯದಲ್ಲಿ ಭ್ರಷ್ಟಾಚಾರ ಮತ್ತು ಸೇನಾ ಹಸ್ತಕ್ಷೇಪವನ್ನು ನಿಲ್ಲಿಸುವ ಭರವಸೆಯೊಂದಿಗೆ ಇಮ್ರಾನ್ ಖಾನ್ ಪ್ರಧಾನಿಯಾಗಿ ಅಧಿಕಾರ ಚುಕ್ಕಾಣಿ ಹಿಡಿದಿದ್ದರು. ಆದರೆ ಈ ಭರವಸೆಯನ್ನು ಉಳಿಸಿಕೊಳ್ಳಲಾಗದ ಇಮ್ರಾನ್, ಹೊಂದಾಣಿಕೆ ರಾಜಕೀಯಕ್ಕೆ ಶರಣಾಗಿದ್ದರು. ಆರ್ಥಿಕ ಸಂಕಷ್ಟದಲ್ಲಿ ಮುಳುಗಿದ ರಾಷ್ಟ್ರವನ್ನು ಮೇಲೆತ್ತಲು ಅವರಿಗೆ ಸಾಧ್ಯವಾಗಲಿಲ್ಲ. ಭಾರತದ ಚಾಣಾಕ್ಷ ವಿದೇಶಾಂಗ ನಡೆಯಿಂದ ಏಕಾಂಗಿಯಾದ ದೇಶಕ್ಕೆ ಭರವಸೆ ತುಂಬಲು ಇಮ್ರಾನ್ ವಿಫಲರಾಗಿದ್ದರು. ಮಿತ್ರ ಪಕ್ಷಗಳ ವಿಶ್ವಾಸವನ್ನೂ ಉಳಿಸಿಕೊಳ್ಳಲಾಗದೆ ಅವರು ಪದತ್ಯಾಗ ಮಾಡುವುದು ಅನಿವಾರ್ಯವಾಯಿತು.
ಇವೆಲ್ಲದರ ನಡುವೆ, “ನಾವು ಭಾರತವನ್ನು ನೋಡಿ ಕಲಿಯಬೇಕಾಗಿದೆʼ ಎಂಬ ಅವರ ಹೇಳಿಕೆ ರಾಜಕೀಯ ಜೀವನಕ್ಕೆ ಮುಳ್ಳಾಗಿ ಪರಿಣಮಿಸಿದೆ. ಈ ಹೇಳಿಕೆ ಭಾರತ ವಿರೋಧಿ ನಾಯಕರಿಗೆ ನುಂಗಲಾರದ ತುತ್ತಾಗಿದೆ. ಸೇನೆ ಮತ್ತು ಐಎಸ್ ಐನಲ್ಲಿರುವ ನಾಯಕರಿಗೆ ಇಮ್ರಾನ್ ಈಗಲೂ ಅರೆ ಪಾಕಿಸ್ತಾನಿ. ರಾಜಕೀಯಕ್ಕೆ ಸೇರುವ ಮುನ್ನ ವಿದೇಶಗಳಲ್ಲಿಯೇ ವಿಹಾರ ಯಾತ್ರೆ ನಡೆಸುತ್ತಿದ್ದ ಇಮ್ರಾನ್ ಕಟ್ಟಾ ಇಸ್ಲಾಮ್ ವಾದಿಯೂ ಅಲ್ಲ. ದೇಶದಲ್ಲಿ ಹೆಚ್ಚುತ್ತಿರುವ ಮೂಲಭೂತವಾದಿ ಶಕ್ತಿಗಳಿಗೆ ಇಮ್ರಾನ್ ಬಗ್ಗೆ ಕಿಂಚಿತ್ತೂ ನಂಬಿಕೆಯಿಲ್ಲ.
ತಮಗಾಗದ ನಾಯಕರನ್ನು ಮುಗಿಸುವುದು ಪಾಕ್ ರಾಜಕೀಯ ಚರಿತ್ರೆಯ ಭಾಗ. 1951ರಲ್ಲಿ ದೇಶದ ಮೊದಲ ಪ್ರಧಾನಿ ಲಿಯಾಕತ್ ಆಲಿ ಖಾನ್ ರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಮಿಲಿಟರಿ ದಂಗೆಯ ಮೂಲಕ ಅಧಿಕಾರಕ್ಕೆ ಬಂದ ಜನರಲ್ ಜಿಯಾ ಉಲ್-ಹಕ್ – 1979 ರಲ್ಲಿ ಪದಚ್ಯುತ ಅಧ್ಯಕ್ಷ ಜುಲ್ಫಿಕರ್ ಅಲಿ ಭುಟ್ಟೊ ಅವರನ್ನು ಗಲ್ಲಿಗೇರಿಸಿದ್ದರು. ಇದಾದ ಒಂಬತ್ತು ವರ್ಷಗಳ ಬಳಿಕ ವಿಮಾನ ಅಪಘಾತದಲ್ಲಿ ಮೃತಪಟ್ಟ ಜಿಯಾ ಉಲ್ ಹಕ್ ಸಾವಿನಲ್ಲೂ ಸೇನೆಯ ಕೈವಾಡ ಶಂಕಿಸಲಾಗಿದೆ. 2007 ಡಿಸೆಂಬರ್ ನಲ್ಲಿ ಮಾಜಿ ಪ್ರಧಾನಿ ಬೇನಜೀರ್ ಭುಟ್ಟೊ ಕೂಡ ರಾಜಕೀಯ ರ‍್ಯಾಲಿಯೊಂದರಲ್ಲಿ ಗುಂಡೇಟಿಗೆ ಬಲಿಯಾಗಿದ್ದರು. ಪಾಕಿಸ್ತಾನದಲ್ಲಿ ರಾಜಕೀಯ ಅಧಿಕಾರ ಎಂದರೆ ಹುಲಿಯ ಮೇಲಿನ ಸವಾರಿ. ಸವಾರ ಕೆಳಗಿಳಿದರೆ ತಾನೇ ಶಿಕಾರಿಯಾಗುವ ಸಾಧ್ಯತೆ ಹೆಚ್ಚು. ಇಮ್ರಾನ್ ಈಗ ಹೆಚ್ಚು ಕಡಿಮೆ ಇದೇ ಸ್ಥಿತಿಯಲ್ಲಿದ್ದಾರೆ.
ಕೆ.ಆರ್.ಪೇಟೆ : ತಾಲ್ಲೂಕಿನ ಬೂಕನಕೆರೆ ಹೋಬಳಿಯ ಮುದುಗೆರೆ ಗ್ರಾಮದ ಬಳಿ ರೈತರ ಸಾಕು ಪ್ರಾಣಿಗಳನ್ನು ತಿಂದು ಹಾಕುತ್ತಾ ರೈತರಿಗೆ ನಿತ್ಯ…
ಮೈಸೂರು : ವಿಶ್ವವಿಖ್ಯಾತ ಮೈಸೂರು ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಚುರುಕಿನ ಚಟುವಟಿಕೆಯಿಂದ ಸದಾ ಸಂದರ್ಶಕರ ಗಮನ ಸೆಳೆಯುತ್ತಿದ್ದ ಸುಮಾರು ಸುಮಾರು…
ಮೈಸೂರು : ಗುರುವಾರ ಸಂಜೆ ಮೈಸೂರಿನ ಅಂಬಾವಿಲಾಸ ಅರಮನೆ ಮುಂಭಾಗ ಸಂಭವಿಸಿದ ಹಿಲೀಯಂ ಸಿಲಿಂಡರ್ ಸ್ಪೋಟ ಪ್ರಕರಣ ಸಂಬಂಧ ನಗರದ…
ಎಚ್.ಡಿ.ಕೋಟೆ : ತಾಲ್ಲೂಕಿನಲ್ಲಿ ಶೈಕ್ಷಣಿಕ ಪ್ರಗತಿಗೆ ಅಗತ್ಯವಾದ ಮಾದರಿ ಕಾರ್ಯಕ್ರಮಗಳನ್ನು ಹಗಲಿರುಳು ಎನ್ನದೆ ಶಿಕ್ಷಣ ಇಲಾಖೆಯವರು ನಡೆಸುತ್ತಿದ್ದಾರೆ ಎಂದು ಶಾಸಕ…
ಹನೂರು : ಕರ್ನಾಟಕದ ನಯಾಗಾರ ಎಂದೇ ಪ್ರಖ್ಯಾತಿ ಪಡೆದಿರುವ ಹೊಗೇನಕಲ್ ಜಲಪಾತ ನೋಡಲು ತಮಿಳುನಾಡಿನ ಭಾಗದಿಂದ ಪ್ರವಾಸಿಗರ ದಂಡೇ ಹರಿದುಬರುತ್ತಿದ್ದು,…
ಹೈದರಾಬಾದ್ : ಪುಷ್ಪ-2 ಸಿನಿಮಾ ವಿಶೇಷ ಪ್ರದರ್ಶನದ ವೇಳೆ ಉಂಟಾದ ಕಾಲ್ತುಳಿತ ಪ್ರಕರಣದಲ್ಲಿ ವರ್ಷದ ಬಳಿಕ ಇದೀಗ ಪೊಲೀಸರು ಕೋರ್ಟ್ಗೆ…