ಚೆಲುವರಾಯಸ್ವಾಮಿ ಅಂಡ್‌ ಟೀಂ ಅನ್ನು ಬಾಂಬೆಯಲ್ಲಿ ಇರಿಸಿದ್ದು ನಾನೆ: ಸಚಿವ ಸೋಮಶೇಖರ್‌

ಮೈಸೂರು: ಚೆಲುವರಾಯಸ್ವಾಮಿ ಅಂಡ್‌ ಟೀಂ ಕಾಂಗ್ರೆಸ್‌ಗೆ ಬಂದಾಗ ಅವರನ್ನೆಲ್ಲ ಬಾಂಬೆಯಲ್ಲಿ ಇರಿಸಿದ್ದು ನಾನು ಮತ್ತು ಭೈರತಿ ಬಸವರಾಜ್‌. ಅವತ್ತಿನ ಬಾಂಬೆ ಡೀಟೆಲ್ಸ್‌ ಬಗ್ಗೆ ಜಾಸ್ತಿ ಹೇಳುವ ಶಕ್ತಿ ನನಗೂ ಇದೆ ಎಂದು ಸಿದ್ದರಾಮಯ್ಯ ಹೇಳಿಕೆಗೆ ಸಚಿವ ಸೋಮಶೇಖರ್‌ ತಿರುಗೇಟು ನೀಡಿದರು.

ನಮ್ಮ ಶಾಸಕರನ್ನು ಬಿಜೆಪಿ ಖರೀದಿಸಿತು ಎಂಬ ಸಿದ್ದರಾಮಯ್ಯ ಆರೋಪಕ್ಕೆ ನಗರದಲ್ಲಿ ಶನಿವಾರ ಪ್ರತಿಕ್ರಿಯಿಸಿದ ಸಚಿವ ಸೋಮಶೇಖರ್‌, ನಮ್ಮನ್ನು ಯಾರಿಂದಲೂ ಖರೀದಿ ಮಾಡುವುದಕ್ಕೆ ಅಸಾಧ್ಯ. ಅವರು ನಮ್ಮ ಬಗ್ಗೆ ಹೆಚ್ಚು ಹೇಳಿದರೆ, ನಾನು ಹಳೆಯದನ್ನೆಲ್ಲಾ ಹೇಳಬೇಕಾಗುತ್ತದೆ. ನಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾದ ಕಾರಣಕ್ಕೆ ಕಾಂಗ್ರೆಸ್ ಪಕ್ಷ ಬಿಟ್ಟೆವು. ಸಿದ್ದರಾಮಯ್ಯ ಈ ವಿಚಾರದಲ್ಲಿ ವೃಥಾ ಆರೋಪ ಮಾಡಬಾರದು ಎಂದು ತಿಳಿಸಿದರು.

ಇದು ಕಮೀಷನ್ ಸರ್ಕಾರ ಎಂಬ ಡಿ.ಕೆ.ಶಿವಕುಮಾರ್‌ ಆರೋಪಕ್ಕೆ ಪ್ರತಿಕ್ರಿಯಿಸಿ, ಸಮ್ಮಿಶ್ರ ಸರ್ಕಾರ ಇದ್ದಾಗ ನೀವು ಎಷ್ಟು ಕಮೀಷನ್ ತೆಗೆದುಕೊಳ್ಳುತ್ತಿದ್ದಿರಿ ಎಂದು ನನಗೂ ಗೊತ್ತಿದೆ. ಅದನ್ನು ನಾನು ವಿವರವಾಗಿ ಹೇಳಬೇಕಾಗುತ್ತದೆ, ಈಗ ಅದೆಲ್ಲಾ ಬೇಡ. ಆಗ ನಾನು ಸಹ ಸರ್ಕಾರದ ಭಾಗವಾಗಿದ್ದೆ ಎಂಬುದನ್ನು ನೀವು ಮರೆಯಬೇಡಿ. ಡಿ.ಕೆ.ಶಿವಕುಮಾರ್ ಸುಮ್ಮನೆ ಇದ್ದರೆ ಚೆಂದ. ಕಮಿಷನ್ ಸರ್ಕಾರ ಎನ್ನುವುದು ಶೋಭೆ ತರುವ ಮಾತಲ್ಲ. ವಿರೋಧ ಪಕ್ಷದವರು ಇಷ್ಟು ದಿನ ಮಲಗಿದ್ದರು, ಈಗ ಏನನ್ನೋ ಮಾಡುವುದಕ್ಕೆ ಹೊರಟಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು.

× Chat with us