ಕುರುಬರ ಎಸ್‌ಟಿ ಮೀಸಲಾತಿ ಹೋರಾಟದಲ್ಲಿ ನನ್ನನ್ನೇ ಟಾರ್ಗೆಟ್ ಮಾಡಲಾಗುತ್ತಿದೆ‌: ಸಿದ್ದರಾಮಯ್ಯ ಆರೋಪ

ಮೈಸೂರು: ಕುರುಬರಿಗೆ ಎಸ್ಟಿ ಮೀಸಲಾತಿ ಕೊಡುವ ವಿಚಾರದಲ್ಲಿ ನಡೆಯುತ್ತಿರುವ ಹೋರಾಟದಲ್ಲಿ ನನ್ನನ್ನೇ ಟಾರ್ಗೆಟ್ ಮಾಡಲಾಗುತ್ತಿದೆ. ಆರ್‌ಎಸ್‌ಎಸ್‌ನವರ ಹುನ್ನಾರದಿಂದ ಕುರುಬ ಸಮುದಾಯವನ್ನು ಒಡೆದು ನನ್ನನ್ನು ಮೂಲೆಗುಂಪು ಮಾಡುವ ಪ್ರಯತ್ನ ನಡೆಯುತ್ತಿದೆ ಎನ್ನುವ ಸಂಶಯ ಉಂಟಾಗಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

ಶಾರದಾದೇವಿನಗರದಲ್ಲಿರುವ ತಮ್ಮ ನಿವಾಸದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕುರುಬರಿಗೆ ಎಸ್ಟಿ ಮೀಸಲು ಕೊಡುವ ವಿಚಾರದಲ್ಲಿ ನಡೆಯುತ್ತಿರುವ ಹೋರಾಟ ರಾಜಕೀಯೇತರವಾಗಿದ್ದರೆ ನಾನು ಭಾಗವಹಿಸುತ್ತಿದ್ದೆ. ಆದರೆ, ಅದು ರಾಜಕೀಯೇತರ ಅಲ್ಲ. ಆರ್‌ಎಸ್‌ಎಸ್‌ನವರು ಮಾಡಿಸುತ್ತಿರುವ ಹೋರಾಟವಾಗಿದೆ. ಸ್ವಾಮೀಜಿಗಳು ಪಾಲ್ಗೊಳ್ಳುತ್ತಿರುವುದಕ್ಕೆ ನಮ್ಮದೇನೂ ತಕರಾರು ಇಲ್ಲ. ಆರ್‌ಎಸ್‌ಎಸ್‌ನವರು ಈಶ್ವರಪ್ಪ ಅವರನ್ನು ಬಳಸಿಕೊಂಡು ಸಮಾಜ ಒಡೆಯುವ ಕೆಲಸದಲ್ಲಿ ತೊಡಗಿದೆ ಎಂದು ಆರೋಪಿಸಿದರು.

ಕುರುಬರ ಪರ ಈಶ್ವರಪ್ಪ ಇಲ್ಲ. ತಮ್ಮ ಸ್ವಾರ್ಥಕ್ಕಾಗಿ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಮಾಡಿದ್ದರು. ಈಗ ಬ್ರಿಗೇಡ್ ಏನಾಗಿದೆ? ಉಡುಪಿಯಲ್ಲಿ ಕನಕಗೋಪುರ ಒಡೆದಾಗ ಎಲ್ಲಿದ್ರು. ನಾವು ಮಠ ಸ್ಥಾಪನೆ ಮಾಡಿದಾಗ ಸಹಕಾರ ಕೊಡುವುದು ಇರಲೀ,ಭಾಗವಹಿಸಲೇ ಇಲ್ಲ. ಹಿಂದುಳಿದ ವರ್ಗದವರಿಗೆ ಮೀಸಲಾತಿ ಕೊಡಬಾರದೆಂದು ರಾಮಾಜೋಯಿಸ್ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನೆ ಮಾಡಿದಾಗ ಯಾಕೇ ವಿರೋಧ ಮಾಡಲಿಲ್ಲ, ಹಿಂದುಳಿದ ವರ್ಗದ ಹಿತ ಯಾಕೇ ಕಾಪಾಡಲಿಲ್ಲ ಎಂದು ಈಶ್ವರಪ್ಪ ಅವರನ್ನು ಪ್ರಶ್ನಿಸಿದರು.

ಮದುವೆ ಮಾಡಿಕೊಳ್ಳಲು ಬೇಡ ಅನ್ನುವುದಕ್ಕೆ ನೀವ್ಯಾರು

ಲವ್‌ ಜಿಹಾದ್ ತಡೆಗೆ ಕಾನೂನು ಜಾರಿಗೆ ತರುವ ವಿಚಾರದಲ್ಲಿ ನಾನು ಹೇಳಿರುವ ಮಾತನ್ನು ಬೇರೆಯವರು ಬೇರೆಯ ರೀತಿಯಲ್ಲಿ ವ್ಯಾಖ್ಯಾನ ಮಾಡಿದರೆ ನಮಗೇನು. ಈ ಕಾನೂನು ನ್ಯಾಯಾಲಯದಲ್ಲಿ ನಿಲ್ಲುವುದಿಲ್ಲ. ಈಗಾಗಲೇ ಕರ್ನಾಟಕ, ಉತ್ತರಪ್ರದೇಶದ ಹೈಕೋರ್ಟ್ ತಿರಸ್ಕಾರ ಮಾಡಿದೆ. ೧೮ ವರ್ಷ ತುಂಬಿದ ಹೆಣ್ಣು, ೨೧ ವರ್ಷ ತುಂಬಿದ ಗಂಡು ಪರಸ್ಪರ ಒಪ್ಪಿ ಮದುವೆಯಾದರೆ ಯಾರ ವಿರೋಧವಿಲ್ಲ. ಅದು ಅವರ ಸ್ವಂತ ವಿವೇಚನೆಗೆ ಸೇರಿದ್ದು, ಮದುವೆ ಮಾಡಿಕೊಳ್ಳುವುದು ಬೇಡ ಅನ್ನೋದಕ್ಕೆ ನೀವ್ಯಾರು ಎಂದು ಬಿಜೆಪಿ ನಾಯಕರಿಗೆ ಖಾರವಾಗಿ ಪ್ರಶ್ನಿಸಿದರು.

ಸಾಲ ಮಾಡಿಕೊಂಡು ಆತ್ಮಹತ್ಯೆಮಾಡಿಕೊಳ್ಳುವ ರೈತರು ಹೇಡಿಗಳು ಅಂತೇಳಿರುವ ಕೃಷಿ ಸಚಿವ ಬಿ.ಸಿ.ಪಾಟೀಲ್ ವಿರುದ್ಧ ಕಿಡಿಕಾರಿದ ಸಿದ್ದರಾಮಯ್ಯ, ಕೃಷಿ ಸಚಿವರು ಬೇಜವಾಬ್ದಾರಿಯಿಂದ ಮಾತನ್ನಾಡಬಾರದು. ಒಬ್ಬ ಕೃಷಿ ಸಚಿವರಾಗಿದ್ದುಕೊಂಡು ರೈತರ ಪರವಾಗಿ ಇರದೆ ಈರೀತಿಯ ಹೇಳಿಕೆ ಕೊಡುವುದು ಸರಿಯಲ್ಲ ಎಂದರು.

× Chat with us