ಕೃಷಿ ವಲಯ ಕುಸಿದರೆ ದೇಶ ಸರ್ವನಾಶ

ದೇಶದ ಹಸಿರು ಕ್ರಾಂತಿಯ ಹರಿಕಾರ ಎಂ.ಎಸ್.ಸ್ವಾಮಿನಾಥನ್ ಹೇಳಿದ ಎಚ್ಚರಿಕೆಯ ಮಾತಿದು

‘ಭಾರತದ ಅಧಿಕಾರಾರೂಢ ಪಕ್ಷಗಳು ರೈತರನ್ನು ಕಡೆಗಣಿಸಿದರೆ, ಕೃಷಿ ವಲಯ ಕುಸಿದು ಬಿದ್ದರೆ ದೇಶ ಸರ್ವನಾಶವಾಗುತ್ತದೆ’- ‘ಹಸಿರು ಕ್ರಾಂತಿಯ ಹರಿಕಾರ ಹೇಳಿದ ಮಾತಿದು.

ಸುಮಾರು ೧೧ ವರ್ಷಗಳ ಹಿಂದೆ ನಡು ಮಧ್ಯಾಹ್ನ ಲ್ಯೂಟಿಯೆನ್ಸ್‌ ದೆಹಲಿಯ ಎಂಪಿ ಫ್ಲಾಟ್‌ ಒಂದರಲ್ಲಿ ಕೂತಿದ್ದೆ ಅಂದು ನನ್ನೆದುರಿಗೆ ‘ಹಸಿರು ಕ್ರಾಂತಿಯ ಹರಿಕಾರರಿದ್ದರು.
ರಾಜ್ಯಸಭೆಗೆ ನಾವಾಂಕಿತ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದ ಅವರು ಎಂಬತ್ತರ ಗಡಿ ದಾಟಿದ್ದರೂ, ಕೃಷಿ-ರೈತ- ಕೃಷಿ ಸಂಶೋಧನೆ ಎಂದರೆ ಹದಿನೆಂಟರ ಯುವಕನಾಗಿಬಿಡುತ್ತಿದ್ದರು. ಅಂತಹ ಚಿರಯುವಕನನ್ನು ಸಂದರ್ಶನಕ್ಕಾಗಿ ಹಿಡಿಯಲು ನಾನು ಹರಸಾಹಸ ಮಾಡಿದ್ದೆ. ಕೊನೆಗೂ ಮಾರ್ಚ್‌ನ ಉರಿ ಬಿಸಿಲಲ್ಲಿ ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ ಮನಕೊಂಬು ಸಾಂಬಸಿವನ್ ಸ್ವಾಮಿನಾಥನ್ (ಎಂ.ಎಸ್. ಸ್ವಾಮಿನಾಥನ್) ದರ್ಶನ ಭಾಗ್ಯ ಪ್ರಾಪ್ತಿಯಾಗಿತ್ತು.
ಈಗ ೯೫ರ ಗಡಿ ದಾಟಿರುವ ಎಂ.ಎಸ್.ಸ್ವಾಮಿನಾಥನ್ ಅಂದು ಸಫಾರಿ ಸೂಟ್ ಧರಿಸಿ ಎದುರು ಕೂತಿದ್ದರು. ಎದುರಿಗಿದ್ದ ವ್ಯಕ್ತಿ ಕಣ್ಣಲ್ಲಿ ಕಣ್ಣಿಟ್ಟು ನೋಡಿದರೆ ಎಂಬತ್ತೈದರಗಡಿ ದಾಟಿದ ವಯೋವೃದ್ಧ ಎನ್ನಿಸುತ್ತಿರಲಿಲ್ಲ. ಆ ದೃಷ್ಟಿ ಅಷ್ಟು ಪ್ರಖರ ಮತ್ತು ಸ್ಪಷ್ಟವಾಗಿತ್ತು. ಅವರ ಕೈಯಲ್ಲಿ ಚಹಾದ ಕಪ್. ಫ್ಲಾಟ್‌ನಲ್ಲಿ ನಾವಿಬ್ಬರು ಮತ್ತು ಅವರ ಆಪ್ತಸಹಾಯಕ ಮಾತ್ರ.

ಅಂಜುತ್ತ- ಅಳುಕುತ್ತಾ ಒಳಗೆ ಹೋಗಿ ಎದುರು ಕೂತ ಮೇಲೆ ‘‘ನನಗೆ ತೊಂಬತ್ತು ನಿಮಿಷಗಳ ಸಮಯಾವಕಾಶ ಬೇಕು’’ ಎಂದು ಕೇಳಿಕೊಂಡಾಗ, ‘ಈವತ್ತು ಬೇಕಾದಷ್ಟು ಸಮಯ ಇದೆ. ಅದರ ಬಗ್ಗೆ ಯೋಚನೆ ಮಾಡಬೇಡ. ಎಷ್ಟು ಬೇಕೋ, ಅಷ್ಟು ಕೂತು ಮಾತನಾಡೋಣ’ ಎಂದು ನನ್ನನ್ನು ಅವರೇ ಹುರಿದುಂಬಿಸಿದ್ದರು.

ತಮಿಳುನಾಡಿನ ಕುಂಭಕೋಣಂನಲ್ಲಿದ್ದ ಸರ್ಜನ್ ಡಾ.ಎಂ.ಕೆ. ಸಾಂಬಸಿವನ್ ಮತ್ತು ಪಾರ್ವತಿ ತಂಗಮ್ಮಾಳ್‌ ಅವರ ಎರಡನೇ ಪುತ್ರ ಸ್ವಾಮಿನಾಥನ್ ಕುಟುಂಬಕ್ಕೆ ಕುಟುಂಬವೇ ಅತ್ಯಂತ ವಿದ್ಯಾವಂತವಾದದ್ದು. ತಂದೆಯ ಹಾದಿಯಲ್ಲಿ ಮುಂದುವರಿದು ವೈದ್ಯನಾಗುವ ಕನಸು ಕಂಡಿದ್ದರು. ಆದರೆ, ೧೯೪೩ರ ಬಂಗಾಳದ ಮಹಾ ಬರ ಮತ್ತು ಹಸಿವಿನಿಂದಾದ ಆಕ್ರಂದನ ಸ್ವಾಮಿನಾಥನ್ ಬದುಕು ಬದಲಿಸಿತು. ವೈದ್ಯನಾಗಲು ಹೊರಟಿದ್ದ ಯುವಕ, ಕೃಷಿ ವಿಜ್ಞಾನಿಯಾಗಿ  ಜಗತ್ತಿನ ಹಸಿವು ನೀಗಿಸುವ ಹೊರೆ ಹೊರಲು ಸಿದ್ಧರಾದರು.
ಭಾರತಕ್ಕೆ ಸ್ವಾತಂತ್ರ್ಯ ಬಂದ ವರ್ಷವೇ ಇಂಡಿಯನ್ ಅಗ್ರಿಕಲ್ಚರಲ್ ರೀಸರ್ಚ್ ಇನ್‌ಸ್ಟಿಟ್ಯೂಟ್ (ಐಎಆರ್‌ಐ)ಗೆ ವಿಜ್ಞಾನಿಯಾಗಿ  ಸೇರಿದರು. ಅದೇ ವರ್ಷ ಸ್ವಾಮಿನಾಥನ್ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಪಾಸಾಗಿ ಐಪಿಎಸ್ (ಇಂಡಿಯನ್ ಪೊಲೀಸ್ ಸರ್ವೀಸ್) ಅಧಿಕಾರಿಯಾಗಿ ಆಯ್ಕೆಯಾಗಿದ್ದರು. ಆದರೆ ಗುರಿ ಸ್ಪಷ್ಟವಾಗಿತ್ತು. ಕೃಷಿ ಸಂಶೋಧನೆಗೆ ತಮ್ಮ ಬದುಕನ್ನೇ ಮುಡಿಪಾಗಿ ಇಡಲು ನಿರ್ಧರಿಸಿದ್ದ ಸ್ವಾಮಿನಾಥನ್ ಆ ಕ್ಷಣದ ಆಮಿಷಕ್ಕೆ ಒಳಗಾಗಲಿಲ್ಲ. ಐಎಆರ್‌ಐನಲ್ಲಿಯೇ ಮುಂದುವರಿದರು. ಮಾತ್ರವಲ್ಲ, ನಂತರದ ವರ್ಷಗಳಲ್ಲಿ ಕೇಂಬ್ರಿಜ್ ವಿಶ್ವವಿದ್ಯಾಲುಂದಲ್ಲಿ ಡಾಕ್ಟರೇಟ್ ಹಾಗೂ ವಿಸ್ಕೊನ್ಸಿನ್ ವಿಶ್ವವಿದ್ಯಾಲುಂದಲ್ಲಿ ಪೋಸ್ಟ್ ಡಾಕ್ಟರೇಟ್ ಅಧ್ಯಯನ ಮಾಡಿದರು. ಆ ಮೂಲಕ ಜಾಗತಿಕ ಕೃಷಿ ಸಂಶೋಧನಾ ಲೋಕದಲ್ಲಿ ಹೆಜ್ಜೆ ಮೂಡಿಸಲು ಯಶಸ್ವಿಯಾದ ಅವರು ನಂತರ ಬದುಕಿನುದ್ದಕ್ಕೂ ‘ಹಸಿವು ನೀಗಿಸುವ’ ಕಾರ್ಯಕ್ಕೆ ತಮ್ಮನ್ನು ತಾವು ಒಪ್ಪಿಸಿಕೊಂಡರು.
ಬಂಗಾಳದ ಮಹಾ ಬರದ ಕಾರಣದಿಂದಲೇ ಕೃಷಿ ಸಂಶೋಧನಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದ ಸ್ವಾಮಿನಾಥನ್ ಆಲೂಗಡ್ಡೆ, ಗೋಧಿ, ಅಕ್ಕಿ ಕ್ಷೇತ್ರದಲ್ಲಿ ನಡೆಸಿದ ಸಂಶೋಧನೆಗಳ ಫಲವಾಗಿಯೇ ಭಾರತ ಕಳೆದ ಶತಮಾನದ ಅರವತ್ತು-ಎಪ್ಪತ್ತರ ದಶಕದಲ್ಲಿ ‘ಹಸಿರು ಕ್ರಾಂತಿ’ ನಡೆಸಿದ್ದು.

‘ಹಸಿರು ಕ್ರಾಂತಿ’ಯ ಸ್ವಾಮಿನಾಥನ್ ಮೊದಲು ಜವಾಹರಲಾಲ್ ನೆಹರು ಮತ್ತು ನಂತರ ಇಂದಿರಾ ಗಾಂಧಿ ಜೊತೆ ಕಾರ್ಯ ನಿರ್ವಹಿಸಿದ ಭಾರತದ ಕೃಷಿ ವಲಯವನ್ನು ಸದೃಢವಾಗಿ ಎಳೆದುಕೊಂಡು ಹೋದ ರಥದ ಒಂದು ಗಾಲಿ. ಮತ್ತೊಂದು ಗಾಲಿ ‘ಶ್ವೇತ ಕ್ರಾಂತಿಯ ಹರಿಕಾರ ವರ್ಗೀಸ್ ಕುರಿಯನ್. ಸ್ವಾಮಿನಾಥನ್- ಕುರಿಯನ್ ಜೋಡಿ ಭಾರತದ ರೈತರ ಪಾಲಿನ ದೇವರು ಎಂದು ಬಣ್ಣಿಸಿದರೆ ಕೂಡ ತಪ್ಪಾಗಲಾರದು.
‘ನೀವೇನೋ ಭಾರತದ ಹಸಿವು ನೀಗಿಸಿದಿರಿ. ಆದರೂ, ‘ಹಸಿರು ಕ್ರಾಂತಿಯ ಸಂದರ್ಭದಲ್ಲಿ ಸಾಂಪ್ರದಾಯಿಕ ತಳಿಗಳು ನಾಶವಾದವು ಮತ್ತು ಮಿತಿ ಮೀರಿದಷ್ಟು ರಸಗೊಬ್ಬರ ಬಳಸಿ ಭಾರತದ ಭೂಮಿಗೆ ವಿಷ ತುಂಬಲಾಯಿತು ಎಂಬ ಆರೋಪ ಇದೆಯಲ್ಲಾ?’ ಎಂಬ ನನ್ನ ಪ್ರಶ್ನೆಗೆ ನಕ್ಕ ಸ್ವಾಮಿನಾಥನ್, ‘‘ಈ ಮಾತಲ್ಲಿ ಸತ್ಯ ಇಲ್ಲದಿಲ್ಲ. ಆದರೆ, ಅಂದು ನಮ್ಮ ದೇಶವಿದ್ದ ಪರಿಸ್ಥಿತಿಯಲ್ಲಿ ನಮಗೆ ಬೇರೆ ಯಾವ ದಾರಿಯೂ ಇರಲಿಲ್ಲ. ದೇಶದ ಆಹಾರೋತ್ಪನ್ನದ ಪ್ರವಾಣ ಹೆಚ್ಚಿಸದೇ ಹೋದಲ್ಲಿ ಆರ್ಥಿಕವಾಗಿ ನಾವು ಕುಸಿದು ಬೀಳುವ ಸಾಧ್ಯತೆಯಿತ್ತು. ಮಾತ್ರವಲ್ಲ ಕೋಟ್ಯಂತರ ಜನರು ಹಸಿವಿನಿಂದ ಪ್ರಾಣ ಕಳೆದುಕೊಳ್ಳುವ ಪರಿಸ್ಥಿತಿ ಕೂಡ ನಿರ್ವಾಣವಾಗುವ ಸಾಧ್ಯತೆ ಇತ್ತು. ಅಂದಿನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ನಾವು ‘ಹಸಿರು ಕ್ರಾಂತಿಯʼ ಯೋಜನೆ ಜಾರಿಗೆ ತಂದೆವು. ಅದೊಂದು ತಾತ್ಕಾಲಿಕ ಯೋಜನೆಯಾಗಿತ್ತು ಎಂಬ ಸ್ಪಷ್ಟನೆ ನೀಡಿದರು.

ಯಾವತ್ತಾದರೂ  ಒಂದು ದಿನ ಭಾರತದಲ್ಲಿರುವ ರೈತರು, ಅವರ ಬೆವರಿಗೆ ತಕ್ಕ ಫಲ ಪಡೆದು, ಆರ್ಥಿಕವಾಗಿ, ಸಾವಾಜಿಕವಾಗಿ ತಲೆಯತ್ತಿ ಘನತೆಯಿಂದ ಬದುಕು ನಡೆಸುವ ದಿನಗಳು ಬರಬಹುದೇ?’ ಎಂಬ ನನ್ನ ಪ್ರಶ್ನೆಗೆ ಸ್ವಾಮಿನಾಥನ್ ಅಂದು ನೀಡಿದ ದೀರ್ಘ ಉತ್ತರ ಇಂದಿಗೂ ಪ್ರಸ್ತುತ ಮತ್ತು ಅದು ನಿತ್ಯಸತ್ಯ.

ಮೊದಲೇ ನಾನು ನೀಡಿದ ಸ್ಪಷ್ಟನೆುಂಂತೆ ‘ಹಸಿರು ಕ್ರಾಂತಿ’ ಅಂದಿನ ತುರ್ತಿಗೆ ನಾವು ಕೈಗೊಂಡ ಒಂದು ತಾತ್ಕಾಲಿಕ ಪರಿಹಾರ. ಅದು ಶಾಶ್ವತ ಪರಿಹಾರ ಅಲ್ಲ. ಆ ನಿಟ್ಟಿನಲ್ಲಿಯೇ ನಾನು ‘ಸಂಪೂರ್ಣ ಹಸಿರು ಕ್ರಾಂತಿ’ ಎಂಬ ಹೊಸ ಯೋಜನೆಯೊಂದನ್ನು ಪ್ರಸ್ತಾಪ ವಾಡಿದ್ದೆ. ಆದರೆ, ನಂತರ ಬಂದ ಎಲ್ಲ ಸರ್ಕಾರಗಳೂ ಅದನ್ನು ಅರ್ಥ ವಾಡಿಕೊಳ್ಳುವುದರಲ್ಲಿ ಸೋತು ಬಿಟ್ಟವು. ದುರಂತವೆಂದರೆ ಇಲ್ಲಿನ ಆಡಳಿತಾರೂಢರು ಎರಡು ದೊಡ್ಡ ತಪ್ಪನ್ನು ಮಾಡಿದ್ದಾರೆ ಮತ್ತು ಮಾಡುತ್ತಿದ್ದಾರೆ.  ಜಾಗತೀಕರಣ ಮತ್ತು ಔದ್ಯೋಗೀಕರಣದ ಹಿನ್ನೆಲೆಯಲ್ಲಿ ಕೃಷಿ ಕ್ಷೇತ್ರವನ್ನು  ಕಡೆಗಣಿಸುತ್ತಿದ್ದಾರೆ. ಒಂದು, ಈವತ್ತು ಕೂಡ ಕೃಷಿಯೇ ಈ ದೇಶದ ಆರ್ಥಿಕ ಸ್ಥಿತಿಯ ಬೆನ್ನೆಲುಬು. ಈ ದೇಶದ ಶೇ.೧೮ರಿಂದ ೨೦ರಷ್ಟು ಜಿಡಿಪಿ ಬರುವುದು ಕೃಷಿ ಕ್ಷೇತ್ರದಿಂದ. ಈ ದೇಶದಲ್ಲಿ ಶೇ.೬೦ರಷ್ಟು ಉದ್ಯೋಗ ಸೃಷ್ಟಿ ಮಾಡುತ್ತಿರುವುದು ಕೃಷಿಕ್ಷೇತ್ರ.
ನಾವಿಂದು ಐಟಿ-ಬಿಟಿ ಮತ್ತು ನವೋದ್ಯಮದ ಅಲೆಯ ಮೇಲೆ ತೇಲುತ್ತಿರಬಹುದು. ಆದರೆ, ಕೃಷಿ ಕ್ಷೇತ್ರದಷ್ಟು ಸದೃಢ ಮತ್ತು ಸೂಕ್ತವಾದ ಬೇರೊಂದು ಎಕಾನಮಿ ಈ ದೇಶದಲ್ಲಿ ಇಲ್ಲ. ಏಕೆಂದರೆ ಐಟಿ-ಬಿಟಿ ಮತ್ತು ನವೋದ್ಯಮಗಳು ಉದ್ಯೋಗ ಸೃಷ್ಟಿ ಮಾಡುತ್ತಿರಬಹುದು. ಆದರೆ, ಆ ಕ್ಷೇತ್ರಗಳಲ್ಲಿ ಬರುತ್ತಿರುವ ಬಿಲಿುಂನ್ ಡಾಲರ್‌ಗಳಷ್ಟು ಲಾಭ ಕೆಲವೇ ಕೆಲವು ಉದ್ಯಮಿಗಳ ಖಾತೆ ಸೇರುತ್ತಿದೆ. ಸಂಪತ್ತಿನ ಕ್ರೋಢೀಕರಣಕ್ಕೆ ಐಟಿ-ಬಿಟಿ ಮತ್ತು ನವೋದ್ಯಮಗಳು ದಾರಿ ಮಾಡಿಕೊಡುತ್ತಿವೆ. ಆದರೆ, ಕೃಷಿ ಕ್ಷೇತ್ರ ಲಾಭದ ದಾರಿಯಲ್ಲಿ ನಡೆದರೆ ಈ ದೇಶದ ಕೋಟ್ಯಂತರ ರೈತರು, ಸಣ್ಣ ಹಿಡುವಳಿದಾರರ ಬದುಕು ಸುಧಾರಣೆಗೊಳ್ಳುತ್ತದೆ. ಸಂಪತ್ತಿನ ಹಂಚಿಕೆಯಾಗುತ್ತದೆ. ಇದು ‘ಸಂಪೂರ್ಣ ಹಸಿರು ಕ್ರಾಂತಿಯ ಉದ್ದೇಶ.
ಈವತ್ತು ಕೂಡ ನಮ್ಮ ದೇಶದ ಕೃಷಿ ಕ್ಷೇತ್ರ ಭದ್ರವಾಗಿ ನಿಂತಿರುವುದು ಸಣ್ಣ ಹಿಡುವಳಿಗಳ ಮೂಲಕ. ಈ ದೇಶದ ಶೇ.೮೦ರಷ್ಟು ರೈತರ ಕೈಯಲ್ಲಿ ಒಂದು ಹೆಕ್ಟೇರ್‌ಗಿಂತ ಹೆಚ್ಚು ಭೂಮಿ ಇಲ್ಲ. ಆ ಎಲ್ಲ ಕೋಟ್ಯಂತರ ಅನ್ನದಾತರು ನಮ್ಮ ಹೊಟ್ಟೆ ತುಂಬುತ್ತಿದ್ದರೂ ನಾವು ಅವರ ಬದುಕನ್ನು ಭದ್ರ ಮಾಡುವ ಪ್ರಯತ್ನ ಮಾಡುತ್ತಿಲ್ಲ. ಪರಿಣಾಮ ಕೋಟ್ಯಂತರ ರೈತರು ಕೃಷಿ ಕ್ಷೇತ್ರ ಬಿಟ್ಟು ನಗರಗಳಿಗೆ ಅವಕಾಶ ಹುಡುಕಿಕೊಂಡು ವಲಸೆ ಹೋಗುತ್ತಿದ್ದಾರೆ.

ಈವತ್ತು ಚೀನಾದಲ್ಲಿ ಕೂಡ ಸಣ್ಣ ಹಿಡುವಳಿದಾರರು ಇದ್ದಾರೆ. ಅಲ್ಲಿನ ಸರ್ಕಾರ ಸಣ್ಣ ಹಿಡುವಳಿದಾರರನ್ನೂ ಸೇರಿ ಅಲ್ಲಿನ ಒಟ್ಟಾರೆ ಕೃಷಿ ವಲಯ ಸದೃಢವಾಗುವಂತಹ ನೀತಿ-ನಿಯಮಗಳನ್ನು ಜಾರಿಗೆ ತಂದಿದೆ. ಪರಿಣಾಮ ಅಲ್ಲಿನ ರೈತರು ಮತ್ತು ಕೃಷಿ ಕ್ಷೇತ್ರ ಎರಡೂ ಶ್ರೀಮಂತವಾಗಿವೆ.
ದುರಂತವೆಂದರೆ ಭಾರತದಲ್ಲಿನ ಎಲ್ಲ ಸರ್ಕಾರಗಳೂ ಅಭಿವೃದ್ಧಿ ಎಂದರೆ ನಗರ- ಪಟ್ಟಣ ಪ್ರದೇಶಗಳ ಮೂಲ ಸೌಕರ್ಯಗಳ ಅಭಿವೃದ್ಧಿ ಎಂದುಕೊಂಡಿವೆ. ವಾಸ್ತವದಲ್ಲಿ ಭಾರತದ ನಿಜವಾದ ಅಭಿವೃದ್ಧಿ ಆಗಬೇಕೆಂದರೆ ಗ್ರಾಮೀಣ ಪ್ರದೇಶಗಳ ಮತ್ತು ಕೃಷಿ ಕ್ಷೇತ್ರದ ಅಭಿವೃದ್ಧಿ ಆಗಬೇಕು. ಇರುವ ೨- ೩ ಎಕರೆ ಭೂಮಿುಂಲ್ಲಿ ಭಾರತೀಯ ರೈತರು ಏನನ್ನು ಬೆಳೆಯಬೇಕು, ಹೇಗೆ ಬೆಳೆಯಬೇಕು ಮತ್ತು ಅವರು ಬೆಳೆದ ಬೆಳೆಗೆ ಯಾವ ದರ ಸಿಗಬೇಕು ಎನ್ನುವ ಬಗ್ಗೆ ವೈಜ್ಞಾನಿಕ ನೆಲೆಯಲ್ಲಿ ಸಂಶೋಧನೆ ನಡೆದು ಅದರ ಫಲಿತಾಂಶಗಳನ್ನು ಕಟ್ಟು-ನಿಟ್ಟಾಗಿ ಜಾರಿಗೆ ತರಬೇಕು.
ಭಾರತೀಯ ಕೃಷಿ- ಹೈನುಗಾರಿಕೆ- ತೋಟಗಾರಿಕೆ- ಆಹಾರ ಶೇಖರಣೆ- ಪ್ರೊಸೆಸಿಂಗ್ … ಈ ಎಲ್ಲ ಕ್ಷೇತ್ರಗಳೂ ಒಂದಕ್ಕೊಂದು ಪೂರಕವಾದವು. ಅದನ್ನು ಅರ್ಥ ವಾಡಿಕೊಂಡು ಒಂದು ಸಮಗ್ರ ರಾಷ್ಟ್ರೀುಯ ನೀತಿ ಜಾರಿಗೆ ಬರಬೇಕು.

ಇದುವರೆಗೆ ಭಾರತದಲ್ಲಿ ಕೃಷಿ ಉತ್ಪನ್ನಗಳ ಬೆಲೆ ನಿಗದಿ ಕುರಿತು ಒಂದು ಸದೃಢವಾದ ವೈಜ್ಞಾನಿಕ ನೀತಿ-ನಿಯಮ ಜಾರಿಗೆ ಬಂದಿಲ್ಲ. ನಾವು ಖರೀದಿಸುವ ಒಂದು ಪೆನ್, ಮೊಬೈಲ್ ಫೋನ್ ಅಥವಾ ಟಿವಿಗೆ ದರ ನಿಗದಿ ವಾಡುವ ವೇಳೆ ಅದರ ಉತ್ಪಾದನಾ ವೆಚ್ಚ, ಮಾರ್ಕೆಟಿಂಗ್‌ಗೆ ಆದ ಖರ್ಚನ್ನು ಸೇರಿಸಿ ಅದರ ಮೇಲೆ ಲಾಭವನ್ನು ಇಟ್ಟುಕೊಂಡು ದರ ನಿಗದಿ ಮಾಡಲಾಗುತ್ತದೆ. ಅದೇ ಭಾರತದ ರೈತ ಒಂದು ಕಿಲೋ ಗ್ರಾಂ ಅಕ್ಕಿ ಅಥವಾ ಗೋಧಿ ಬೆಳೆಯಲು ಆಗುವ ಒಟ್ಟಾರೆ ವೆಚ್ಚ ಎಷ್ಟು? ಅದಕ್ಕಾಗಿ ಆ ರೈತನ ಕುಟುಂಬ ಹರಿಸಿದ ಬೆವರಿನ ಬೆಲೆ ಎಷ್ಟು? ಅದನ್ನು ಮಾರುಕಟ್ಟೆಗೆ ತಲುಪಿಸಲು ಬೇಕಾಗುವ ವೆಚ್ಚ ಎಷ್ಟು? ಇವೆಲ್ಲವನ್ನೂ ಕೂಡಿಸಿ ಅದರ ಮೇಲೆ ಶೇಕಡಾ ಮೂವತ್ತರಷ್ಟು ಲಾಭ ಸೇರಿಸಿ ಬೆಲೆ ನಿಗದಿಯಾಗುತ್ತಿದೆಯೇ? ಈವತ್ತು ಮೊದಲು ಆಗಬೇಕಾಗಿರುವುದು ಇದು. ಮಾರುಕಟ್ಟೆಯಲ್ಲಿ ರೈತ ಬೆಳೆದ ಬೆಲೆಗೆ ಸೂಕ್ತ ಬೆಲೆ ನೀಡಿದಲ್ಲಿ, ಅವರು ನಿಮ್ಮ ಸಬ್ಸಿಡಿಗಳಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ.
ಸರ್ಕಾರಗಳು ಕೃಷಿ ಕ್ಷೇತ್ರವನ್ನು ಕಾರ್ಪೊರೇಟ್ ಕಪಿಮುಷ್ಟಿಗೆ ಒಪ್ಪಿಸಲು ಸಿದ್ಧವಾಗಿ ಕೂತಿವೆ. ಏನಾದರೂ ಇನ್ನು ಒಂದು ಹೆಜ್ಜೆ ಮುಂದಕ್ಕೆ ಹೋಗಿ ಕೃಷಿ ಭೂಮಿ ಮತ್ತು ವಲುಂ ಸಂಪೂರ್ಣ ಕಾರ್ಪೊರೇಟ್‌ಮುಂ ಆಯಿತೆಂದರೆ ಈ ದೇಶದ ಸರ್ವನಾಶವಾಗುತ್ತದೆ. ಏಕೆಂದರೆ ಭಾರತದಲ್ಲಿನ ಸಣ್ಣ ಹಿಡುವಳಿದಾರರಿಗೆ ಕೃಷಿ ಭೂಮಿ ಮತ್ತು ಕೃಷಿ ಎಂದರೆ ಅದೊಂದು ಕೇವಲ ಹಣ ಗಳಿಸುವ ಸಾಧನ ಅಲ್ಲ. ಕೃಷಿಯೆಂದರೆ ಅದು ಅವರ ಬದುಕು, ಸಂಸ್ಕೃತಿ, ಜೀವ, ಘನತೆ. ಕಾರ್ಪೊರೇಟ್ ದೊರೆಗಳ ಹೊಟ್ಟೆ ತುಂಬಿಸುವ ಮತ್ತು ಸಂಪತ್ತಿನ ಕ್ರೋಢೀಕರಣದ ಮೂಲಕ ತಮ್ಮ ಬೇಳೆ ಬೇಯಿಸಿಕೊಳ್ಳುವ ನಿರ್ಧಾರಕ್ಕೆ ಯಾವುದೇ ಸರ್ಕಾರ ಬಂದರೂ ಅದು ದೇಶದ ಕೋಟ್ಯಂತರ ಬಡ ರೈತರ ಬದುಕಿನ ವಿನಾಶಕ್ಕೆ ಕಾರಣವಾಗುತ್ತದೆ.

ಅಂದು ಸ್ವಾಮಿನಾಥನ್ ಅವರು ಆಡಿದ ಪ್ರತಿಯೊಂದು ಮಾತುಗಳೂ ಇಂದಿಗೆ ಕೂಡ ನೂರಕ್ಕೆ ನೂರರಷ್ಟು ಪ್ರಸ್ತುತ. ‘ಕ್ರಮೇಣ ನಾವು ಕೃಷಿ ಕ್ಷೇತ್ರದ ಮಹತ್ವವನ್ನು ಮರೆಯುತ್ತಿದ್ದೇವೆ. ಅದರ ಮಹತ್ವ ಅರಿತು ಕೃಷಿಯಾಧಾರಿತ ಸಮಗ್ರ ಗ್ರಾಮೀಣಾಭಿವೃದ್ಧಿಯ ಪರಿಕಲ್ಪನೆ ಎಲ್ಲಿಯವರೆಗೆ ಮೂಡುವುದಿಲ್ಲವೋ ಅಲ್ಲಿಯವರೆಗೆ ಈ ದೇಶದ ಭವಿಷ್ಯ ಗಟ್ಟಿಾಂಗುವುದಿಲ್ಲ’ ಎಂದರು.
ಮಧ್ಯಾಹ್ನದ ಊಟದ ಸಂದರ್ಭದಲ್ಲಿ, ಅನ್ನದ ತುತ್ತು ಕೈಯಲ್ಲಿ ಹಿಡಿದಿದ್ದ ಸ್ವಾಮಿನಾಥನ್, ‘ಇದು ಎಲ್ಲೋ, ಭಾರತದ ಯಾವುದೋ ಭಾಗದ, ಯಾವುದೋ ಮೂಲೆಯಲ್ಲಿನ ಹೊಲದಲ್ಲಿ ಒಬ್ಬ ಬಡ ರೈತ ಬೆವರು ಹರಿಸಿ ನನಗೆ ನೀಡಿದ ಸಬ್ಸಿಡಿ. ಈ ಪರಿಜ್ಞಾನ ಈ ದೇಶದ ಮನೆ-ಮನೆಯಲ್ಲಿ, ಮನ-ಮನದಲ್ಲಿ ಮೂಡಬೇಕು. ಇಲ್ಲವಾದಲ್ಲಿ ಈ ದೇಶದ ರೈತರ ಪರಿಸ್ಥಿತಿ ಸುಧಾರಿಸುವುದಿಲ್ಲ. ಭಾರತದಲ್ಲಿ ಅಧಿಕಾರಕ್ಕೆ ಬರುವ ಪ್ರತಿಯೊಂದು ರಾಜಕೀಯ ಪಕ್ಷ ಮತ್ತು ರಾಜಕಾರಣಿಗೂ ಮುಖ್ಯವಾಗಿ ಈ ಪರಿಜ್ಞಾನ ಇರಬೇಕು. ಅಧಿಕಾರಾರೂಢ ರಾಜಕೀಯ ಪಕ್ಷಗಳು ರೈತರನ್ನು ಕಡೆಗಣಿಸಿದರೆ, ಕೃಷಿ ವಲಯ ಕುಸಿದು ಬಿದ್ದರೆ, ದೇಶ ಸರ್ವನಾಶವಾಗುತ್ತದೆ’ ಎಂದಿದ್ದರು. ಆ ಮಾತು ಕೂಡ ಈಗ ಅಕ್ಷರಶಃ ನಮ್ಮೆಲ್ಲರ ಕಣ್ಣ ಮುಂದೆ ತೆರೆದುಕೊಳ್ಳುತ್ತಿದೆ.

× Chat with us