ಟೀಂ ಇಂಡಿಯಾ ಸಾರಥಿ ವಿರಾಟ್ ಕೊಹ್ಲಿ ಮುಡಿಗೆ ‘ಐಸಿಸಿ ದಶಕದ ಕ್ರಿಕೆಟರ್’ ಪ್ರಶಸ್ತಿ

ದುಬೈ: ವಿಶ್ವ ಕ್ರಿಕೆಟ್‌ನಲ್ಲಿ ತಮ್ಮದೇ ಛಾಪು ಮೂಡಿಸಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಐಸಿಸಿ ದಶಕದ ಕ್ರಿಕೆಟಿಗ ಎಂಬ ಹೆಗ್ಗಳಿಕೆ ಪಡೆಯುವ ಮೂಲಕ ಪ್ರತಿಷ್ಠಿತ ‘ಸರ್ ಗಾರ್ಫೀಲ್ಡ್ ಸೋಬರ್ಸ್’ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ. ಅಲ್ಲದೆ ಐಸಿಸಿ ದಶಕದ ಕ್ರಿಕೆಟರ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.ವಿರಾಟ್ ಕೊಹ್ಲಿ ಅವರೊಂದಿಗೆ ಭಾರತದ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್, ಜೋ ರೂಟ್, ಸ್ಟೀವ್ ಸ್ಮಿತ್ ಹಾಗೂ ಇನ್ನಿತರ ಪ್ರಮುಖ ಆಟಗಾರರು ಈ ಪ್ರಶಸ್ತಿ ರೇಸಿನಲ್ಲಿದ್ದರು. ಇನ್ನೂ ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಹೆಸರು ಐಸಿಸಿ ದಶಕದ ಕ್ರಿಕೆಟಿಗರ ಪಟ್ಟಿಯಲ್ಲಿತ್ತು.

ಕಳೆದ ಒಂದು ದಶಕದಲ್ಲಿ ವಿರಾಟ ಕೊಹ್ಲಿ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 20,396 ರನ್‌ಗಳಿಸಿದ್ದು, ಇತರೆ ಆಟಗಾರರಿಗಿಂತ ಗರಿಷ್ಠ ಎನಿಸಿದೆ. ಅಲ್ಲದೇ ಈ ಹಿಂದೆ 2017 ಹಾಗೂ 2018ರಲ್ಲಿ ‘ಐಸಿಸಿ ವರ್ಷದ ಕ್ರಿಕೆಟಿಗ’ ಪ್ರಶಸ್ತಿ ಸಹ ಕೊಹ್ಲಿ ಪಡೆದಿದ್ದರು. ಈ ಎಲ್ಲಾ ಕಾರಣದಿಂದ ವಿರಾಟ್ ಕೊಹ್ಲಿ, ಐಸಿಸಿ ದಶಕದ ಕ್ರಿಕೆಟಿಗ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಇನ್ನೂ, ಆಸ್ಟ್ರೇಲಿಯಾ ತಂಡದ ಪ್ರಮುಖ ಆಟಗಾರ ಸ್ಟೀವ್ ಸ್ಮಿತ್, ‘ಐಸಿಸಿ ದಶಕದ ಟೆಸ್ಟ್ ಆಟಗಾರ’ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ. ಈ ಅವಧಿಯಲ್ಲಿ ಸ್ಮಿತ್, 65.79ರ ಸರಾಸರಿಯಲ್ಲಿ 26 ಶತಕ ಹಾಗೂ 28 ಅರ್ಧಶತಕ ಒಳಗೊಂಡಂತೆ 7040 ರನ್‌ಗಳಿಸಿದ್ದಾರೆ.

ವಿಶ್ವ ಕ್ರಿಕೆಟ್‌ನ ‘ಸ್ಪಿನ್ ಸೆನ್ಸೇಷನ್’ ಎನಿಸಿರುವ ಅಫ್ಘಾನಿಸ್ತಾನದ ಸ್ಪಿನ್ನರ್ ರಶೀದ್ ಖಾನ್, ಐಸಿಸಿ ದಶಕದ ಟಿ20 ಕ್ರಿಕೆಟರ್ ಪ್ರಶಸ್ತಿ ಪಡೆದಿದ್ದಾರೆ. 22ರ ಹರೆಯದ ರಶೀದ್ ಖಾನ್, 12.62ರ ಸರಾಸರಿಯಲ್ಲಿ 89 ವಿಕೆಟ್‌ಗಳನ್ನು ಪಡೆಯುವ ಮೂಲಕ ಈ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.

Attachments area
× Chat with us