ಉಳಿದ 2 ವರ್ಷ ಜಾ.ದಳ ಶಾಸಕನಾಗಿಯೇ ಅವಧಿ ಮುಗಿಸುತ್ತೇನೆ: ಜಿ.ಟಿ.ದೇವೇಗೌಡ

ಮೈಸೂರು: ನಾನು ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ. ಜಾ.ದಳ ಶಾಸಕನಾಗಿಯೇ ಉಳಿದ ಎರಡು ಅವಧಿ ಮುಗಿಸುತ್ತೇನೆ. ಮುಂದಿನ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಪರಿಸ್ಥಿತಿ ಹೇಗಿರುತ್ತದೆ ಎಂಬುದನ್ನು ನೋಡಿ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದರು.

ಮೈಸೂರು ತಾಲ್ಲೂಕಿನ ಉದ್ಭೂರು ಗ್ರಾಮದಲ್ಲಿ ಸೋಮವಾರ ವಿವಿಧ ಕಾಮಗಾರಿಗೆ ಚಾಲನೆ ನೀಡಿದ ಸಂದರ್ಭದಲ್ಲಿ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಜಾ.ದಳ ಶಾಸಕನಾಗಿದ್ದೇನೆ. ಪಕ್ಷ ಬಿಡುವ ಮಾತೇ ಇಲ್ಲ. ಎರಡು ವರ್ಷ ಜಾ.ದಳ ಶಾಸಕನಾಗಿಯೇ ಅವಧಿ ಮುಗಿಸುತ್ತೇನೆ. ಮುಂದಿನ ಚುನಾವಣೆಯ ಹೊತ್ತಿಗೆ ಜಾ.ದಳ ಹೇಗಿರುತ್ತದೆ? ಬಿಜೆಪಿ ಹೆಂಗಿರುತ್ತದೆ? ಕಾಂಗ್ರೆಸ್ ಹೇಗಿರುತ್ತದೆ ಎನ್ನುವುದನ್ನು ನೋಡುತ್ತೇನೆ. ಕ್ಷೇತ್ರದ ಜನರೊಂದಿಗೆ ಸಮಾಲೋಚನೆ ನಡೆಸಿ ರಾಜಕೀಯ ತೀರ್ಮಾನ ಮಾಡುತ್ತೇನೆಯೇ ಹೊರತು, ಈಗ ಯಾವುದೇ ನಿರ್ಧಾರ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಜನರ ಅಭಿಪ್ರಾಯ ಇಲ್ಲದೆ ಯಾವ ತೀರ್ಮಾನ ಮಾಡಲ್ಲ, ಮಾಡೋದು ಇಲ್ಲ. ಅಂದಿನ ರಾಜಕೀಯ ಸನ್ನಿವೇಶ, ಪರಿಸ್ಥಿತಿ ಹೇಗಿರುತ್ತದೆ ಎನ್ನುವುದನ್ನು ನೋಡಿ ತೀರ್ಮಾನ ಮಾಡುವೆ ಎಂದು ಹೇಳಿದರು.

ಗ್ರಾಪಂ ಚುನಾವಣೆಯು ಪಕ್ಷಾತೀತವಾಗಿ ನಡೆಯಬೇಕು. ಬಿಜೆಪಿಯವರು ಪಂಚಾಯಿತಿಯಿಂದ ಪಾರ್ಲಿಮೆಂಟ್‌ತನಕ ರಾಜಕಾರಣ ಮಾಡುತ್ತೇವೆ ಅಂತಾರೆ. ಕಾಂಗ್ರೆಸ್‌ನವರು ನಾವು ಗೆಲ್ಲುತ್ತೇವೆ ಅಂತ ಹೇಳ್ತಾರೆ. ನಾನು ಜನ ಸೇವೆ ಮಾಡುವವರು ಯಾರಿದ್ದಾರೆ ಎಂಬುದನ್ನು ಗುರುತಿಸಿ ಆಯ್ಕೆ ಮಾಡಿ ಕಳುಹಿಸುವಂತೆ ಹೇಳುತ್ತೇನೆ. ಗ್ರಾಮಸ್ಥರಿಗೆ ಸ್ಪಂದಿಸುವುದು, ಪಿಂಚಣಿ ಕೊಡಿಸುವುದು, ಸ್ವಚ್ಛತೆ ಕಾಪಾಡುವುದು, ಸರ್ಕಾರಿ ಸವಲತ್ತು ಯಾರು ಒದಗಿಸಲು ಪ್ರಾಮಾಣಿಕವಾಗಿ ಕೆಲಸಮಾಡುತ್ತಾರೆ ಎಂಬುದನ್ನು ನೋಡಿ ತೀರ್ಮಾನ ಮಾಡಬೇಕು ಎಂದರು.

ಗ್ರಾಪಂ ಚುನಾವಣೆ ಪಕ್ಷಾತೀತವಾಗಿದೆ. ಮತದಾರರೇ ಎಂಎಲ್‌ಎ, ಎಂಪಿಗಳು. ಅವರ ಸದಸ್ಯರನ್ನು ಆಯ್ಕೆ ಮಾಡಲು ಬಿಡಬೇಕು ಹೊರತು ಪಕ್ಷ ರಾಜಕಾರಣ ಮಾಡಬಾರದು. ರಾಜಕೀಯ ಬೆರಸುವುದು ಬೇಡ ಎಂದು ಸಲಹೆ ನೀಡಿದರು. ೨೦ ಗುಂಟೆ ಜಮೀನು ಹೊಂದಿರುವ ವ್ಯಕ್ತಿಯು ಚುನಾವಣೆಗೆ ನಿಂತರೆ ಅದನ್ನು ಮಾರಿ ಮನೆ ಹಾಳು ಮಾಡಿಕೊಳ್ಳುವುದು ಬೇಡ. ಅಂತಹ ಕೆಲಸಕ್ಕೆ ಕೈ ಹಾಕದಂತೆ ಮಾಡದೆ ಪಕ್ಷಾತೀತವಾಗಿ ಚುನಾವಣೆ ನಡೆಯಲು ಬಿಡಬೇಕು ಎಂದರು.

× Chat with us