ಸಚಿವ ಸ್ಥಾನ ಸಿಗ್ಲಿ ಸಿಗದಿರಲಿ, ಕಾಂಗ್ರೆಸ್-ಜೆಡಿಎಸ್‌ ಮೈತ್ರಿ ಸರ್ಕಾರ ಬೀಳಿಸಿದ ಖುಷಿಯಿದೆ: ರಮೇಶ್‌ ಜಾರಕಿಹೊಳಿ

ಬೆಳಗಾವಿ: ಬಸವರಾಜ ಬೊಮ್ಮಾಯಿ ಅವರ ಸಂಪುಟದಲ್ಲಿ ನನಗೆ ಸಚಿವ ಸ್ಥಾನ ಸಿಗಲಿ, ಸಿಗದಿರಲಿ. ಕಾಂಗ್ರೆಸ್-ಜೆಡಿಎಸ್‌ ಸಮ್ಮಿಶ್ರ ಸರ್ಕಾರ ತೆಗೆದ ಖುಷಿಯಿದೆ ಎಂದು ಶಾಸಕ ರಮೇಶ್‌ ಜಾರಕಿಹೊಳಿ ಹೇಳಿದ್ದಾರೆ.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರವನ್ನು ಕೆಡವಿದ್ದಕ್ಕೆ ನಾವು ಖುಷಿಯಾಗಿದ್ದೇವೆ. ಸಮ್ಮಿಶ್ರ ಸರ್ಕಾರ ತೆಗೆಯದಿದ್ದರೆ ಅಲ್ಲೋಲ ಕಲ್ಲೋಲವಾಗುತ್ತಿತ್ತು. ಈ ಸರ್ಕಾರದಲ್ಲಿ ನಾವು ಸಚಿವರಾಗುತ್ತೇವೋ ಅಥವಾ ಬಿಡುತ್ತೇವೋ ಅದು ಬೇರೆ ಪ್ರಶ್ನೆ. ಆದರೆ, ನಾನು ಈಗ ಸಚಿವನಿಗಿಂತ ಹೆಚ್ಚಾಗಿದ್ದೇನೆ ಎಂದು ತಿಳಿಸಿದ್ದಾರೆ.

2023ಕ್ಕೆ ಪೂರ್ಣ ಪ್ರಮಾಣದಲ್ಲಿ ಅಧಿಕಾರಕ್ಕೆ ಬರಲು ಕೆಲಸ ಮಾಡುತ್ತೇವೆ. ತ್ಯಾಗದ ಮನೋಭಾವದಿಂದ ಕೆಲಸ ಮಾಡಲು ಆರಂಭಿಸುತ್ತೇವೆ. ಮಹೇಶ್ ಕುಮಟಳ್ಳಿಗೆ ಸಚಿವ ಸ್ಥಾನ ಕೈತಪ್ಪಿರುವ ವಿಚಾರವಾಗಿ ಅವರು ಪ್ರತಿಕ್ರಿಯಿಸಿದ್ದಾರೆ. ಅವರು ಒಳ್ಳೆಯವರು, ತ್ಯಾಗ ಮಾಡ್ತಾರೆ ಅಂದುಕೊಂಡು ನೀಡಿರಲಿಕ್ಕಿಲ್ಲ. ಪಕ್ಷಕ್ಕಾಗಿ ತ್ಯಾಗ ಮಾಡ್ತಾರೆಂದು ಕುಮಟಳ್ಳಿ ಕೈಬಿಟ್ಟಿರಬಹುದು. ಮುಂದಿನ ದಿನಗಳಲ್ಲಿ ಮಹೇಶ್ ಕುಮಟಳ್ಳಿಗೆ ಒಳ್ಳೆಯ ಸ್ಥಾನ ನೀಡುತ್ತಾರೆ. ನಾನು ಜಲಸಂಪನ್ಮೂಲ ಸಚಿವನಾಗಲು ಕುಮಟಳ್ಳಿ ಕಾರಣ. ನೀವು ಸಚಿವರಾದರೆ ಈ ಭಾಗ ಅಭಿವೃದ್ಧಿಯಾಗುತ್ತೆ ಎಂದಿದ್ದರು ಎಂದು ನೆನಪಿಸಿಕೊಂಡಿದ್ದಾರೆ.

ನಾನು ಸಚಿವ ಸ್ಥಾನ ಸಿಗುತ್ತೆ ಎಂಬ ಆಶಾಭಾವನೆ ಇಟ್ಟುಕೊಳ್ಳುವುದಿಲ್ಲ. ಬಿಜೆಪಿ ಹೈಕಮಾಂಡ್, ಸಿಎಂ ಬಸವರಾಜ ಬೊಮ್ಮಾಯಿ ಕೈಗೊಳ್ಳುವ ನಿರ್ಣಯಕ್ಕೆ ಬದ್ಧನಾಗಿರುತ್ತೇನೆ. ಈಗ ಎಲ್ಲವೂ ಮುಗಿದ ಅಧ್ಯಾಯ ಎಂದಿದ್ದಾರೆ.

ಶಾಸಕ ಸ್ಥಾನದಿಂದ ರಾಜೀನಾಮೆ ನೀಡುವ ನಿರ್ಧಾರದಿಂದ ಹಿಂದೆ ಸರಿದಿದ್ದೇನೆ. ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡ್ತೇನೆ ಎಂದಿದ್ದು ನಿಜ. ಆದರೆ, ಸುತ್ತೂರು ಶ್ರೀಗಳು ಕೆಲವೊಂದು ಸಲಹೆ ಸೂಚನೆ ಕೊಟ್ಟರು. ಹೀಗಾಗಿ ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿದೆ. ಕಾಂಗ್ರೆಸ್​ನವರು ಇಪ್ಪತ್ತು ವರ್ಷ ನಡೆಸಿಕೊಂಡಷ್ಟು, ಬಿಜೆಪಿ ಹೈಕಮಾಂಡ್ 1 ವರ್ಷದಲ್ಲಿ ನಮ್ಮನ್ನು ನಡೆಸಿಕೊಂಡಿದೆ. ಅವರ ಪ್ರೀತಿ ವಿಶ್ವಾಸದಿಂದ ಬಿಜೆಪಿಯಲ್ಲಿ ಮುಂದುವರಿದಿದ್ದೇನೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಸಿಡಿ ಪ್ರಕರಣವನ್ನು ಇನ್ನೂ 1 ವರ್ಷ ಹಾಗೇ ಇಟ್ಟಿರಲಿ ನನಗೇನೂ ಅವಸರ ಇಲ್ಲ. ನನ್ನ ತಮ್ಮ ಇದ್ದಾನೆ, ಮಹೇಶ್ ಕುಮಟಳ್ಳಿ ಇದ್ದಾರೆ. ನಾನೇ ಮಂತ್ರಿಯಾಗಬೇಕು ಅನ್ನುವ ಆಸೆ ನನಗೆ ಇಲ್ಲ. ಈ ಅವಧಿಯಲ್ಲಿ ನಾವು ಸಚಿವರಾಗದಿದ್ದರೂ ಪರವಾಗಿಲ್ಲ ಎಂದು ಹೇಳಿದ್ದಾರೆ.

× Chat with us