ನಾನು ತುಂಬ ಲೋ ಪ್ರೊಫೈಲ್‌ ಅಧಿಕಾರಿ, ನನ್ನ ಹೆಸ್ರು ಕೇಳಿದ್ದೀರೋ ಇಲ್ವೋ ಗೊತ್ತಿಲ್ಲ: ಡಿಸಿ ಬಗಾದಿ

ಮೈಸೂರು: ನಾನು ತುಂಬ ಲೋ ಪ್ರೊಫೈಲ್‌ ಅಧಿಕಾರಿ, ನನ್ನ ಹೆಸರು ಕೇಳಿದ್ದೀರೋ ಇಲ್ಲವೋ ಗೊತ್ತಿಲ್ಲ, ಅದನ್ನು ನೀವೇ ಹೇಳಬೇಕು…

ಮೈಸೂರಿನ ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಬಗಾದಿ ಗೌತಮ್‌ ಅವರಿಗೆ ನೀವೇನಾದರೂ ವಿವಾದಿತ ಕುರ್ಚಿಯಲ್ಲಿ ಕುಳಿತಿದ್ದೀರಾ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಅವರು ಹೀಗೆ ಉತ್ತರಿಸಿದರು.

ವಿವಾದಗಳು ಅಧಿಕಾರಿಗಳಿಗೆ ಹೊಸತೇನಲ್ಲ. ನನ್ನ ಹದಿಮೂರು ವರ್ಷಗಳ ಸೇವಾವಧಿಯಲ್ಲಿ ಬಹಳಷ್ಟು ಕಡೆ ಕೆಲಸ ಮಾಡಿದ್ದೇನೆ. ವಿವಾದಗಳು ಈ ಸ್ಥಾನಕ್ಕೆ ಇದ್ದೇ ಇರುತ್ತದೆ. ಜನರು, ಜನಪ್ರತಿನಿಧಿಗಳ ಸಹಕಾರದಿಂದ ಕೆಲಸ ಮಾಡಿದರೆ ಖಂಡಿತವಾಗಿಯೂ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ಅವರು ತಿಳಿಸಿದರು.

ಮೈಸೂರಿಗೆ ವರ್ಗಾವಣೆಯಾಗುತ್ತೇನೆ ಎಂದು ನಾನು ನಿರೀಕ್ಷಿಸಿರಲಿಲ್ಲ. ಇದೊಂದು ಅಚ್ಚರಿಯ ತಿರುವು. ಈ ಸ್ಥಾನದಲ್ಲಿ ಕೆಲಸ ಮಾಡಲು ಜನರು, ಜನಪ್ರತಿನಿಧಿಗಳು, ಪತ್ರಕರ್ತರು, ಸಂಘ ಸಂಸ್ಥೆಗಳು ಸೇರಿದಂತೆ ಎಲ್ಲರ ಅಭಿಪ್ರಾಯಗಳು, ಸಲಹೆಗಳು ಬೇಕಾಗುತ್ತದೆ. ನಾನು ಅದನ್ನು ಯಾವಾಗಲೂ ಸ್ವಾಗತಿಸುತ್ತೇನೆ ಎಂದರು.

ಮಂಡ್ಯ ಸ್ವಲ್ಪ ಹತ್ರ ಅಷ್ಟೆ: ಬೆಂಗಳೂರಿನಿಂದ ಮೈಸೂರಿಗೆ ವರ್ಗವಾಗಿದ್ದಕ್ಕೆ ಪತ್ನಿಗೆ ಸ್ವಲ್ಪ ಹತ್ತಿರವಾದ್ರಾ? ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ತಮಾಷೆಯಾಗಿ ಉತ್ತರಿಸಿದ ಬಗಾದಿ. ಬೆಂಗಳೂರಿನಿಂದ ಮಂಡ್ಯ ಅಷ್ಟೇನೂ ದೂರ ಇಲ್ಲ. ಆದ್ರೆ, ಮೈಸೂರಿನಿಂದ ಸ್ವಲ್ಪ ಹತ್ರ ಅಷ್ಟೆ. ಬೆಂಗಳೂರು-ಮೈಸೂರು ಮಧ್ಯದಲ್ಲಿ ಮಂಡ್ಯ ಇದೆ ಎಂದು ನಗುತ್ತಲೇ ಉತ್ತರಿಸಿದರು.

 

× Chat with us