ಬಂಗಾಳಿಗರಿಗೆ ಸಹಾಯ ಮಾಡುವುದಾದ್ರೆ ಮೋದಿ ಪಾದ ಸ್ಪರ್ಶಿಸಲೂ ಸಿದ್ದ: ಮಮತಾ ಬ್ಯಾನರ್ಜಿ

ಕೋಲ್ಕೊತ್ತಾ: ಪಶ್ಚಿಮ ಬಂಗಾಳದ ಜನರಿಗೆ ನೆರವಾಗುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಭರವಸೆ ನೀಡಿದರೆ ನಾನು ಅವರ ಕಾಲಿಗೆ ಬೀಳಲೂ ಸಿದ್ಧ ಎಂದು ಮಮತಾ ಬ್ಯಾನರ್ಜಿ ಅವರು ಕೇಂದ್ರ ಸರ್ಕಾರಕ್ಕೆ ತಿರುಗೇಟು ನೀಡಿದ್ದಾರೆ.

ಯಾಸ್‌ ಚಂಡಮಾರುತದಿಂದಾದ ನಷ್ಟದ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ವಿಡಿಯೋ ಕಾನ್ಫರೆನ್ಸ್‌ಗೆ ಗೈರು ಹಾಜರಾದ ನಂತರ ಸರ್ಕಾರದ ಮುಖ್ಯ ಕಾರ್ಯದರ್ಶಿಯನ್ನು ಕೇಂದ್ರ ವಾಪಸ್‌ ಕರೆಸಿಕೊಂಡ ಬೆನ್ನಿಗೇ ದೀದಿ ಈ ಹೇಳಿಕೆ ನೀಡಿದ್ದಾರೆ. ಅಲ್ಲದೇ ಕೇಂದ್ರ ಸರ್ಕಾರವು ಹುಸಿ ಭರವಸೆಗಳನ್ನು ನೀಡಿ ಮಾಧ್ಯಮಗಳಿಂದ ಏಕಪಕ್ಷೀಯವಾದ ಸುದ್ದಿಗಳನ್ನು ಮಾಡಿಸುತ್ತಿದೆ ಎಂದು ಆರೋಪಿಸಿದ್ದಾರೆ.

ನನ್ನನ್ನು ಹೀಗೆ ಅಪಮಾನಿಸಬೇಡಿ. ನಾವು ಚುನಾವಣೆಯಲ್ಲಿ ಜಯಭೇರಿ ಬಾರಿಸಿದೆವು ಎಂದು ನೀವು ಹೀಗೆ ಮಾಡುತ್ತಿದ್ದೀರಾ? ನೀವು ಮಾಡುವ ಪ್ರಯತ್ನವನ್ನೆಲ್ಲ ಮಾಡಿ ಸೋತಿದ್ದೀರ, ಅದಕ್ಕಾಗಿ ಈ ರೀತಿ ಪ್ರತಿದಿನ ನಮ್ಮನ್ನು ಗೋಳು ಹೊಯ್ಕೊಳ್ಳುತ್ತಿದ್ದೀರಾ? ಎಂದು ವಿಡಿಯೋ ಕಾನ್ಫರೆನ್ಸ್‌ನ ಆರಂಭದಲ್ಲೇ ತರಾಟೆಗೆ ತೆಗೆದುಕೊಂಡರು.

ಪ್ರಧಾನಿ ನರೇಂದ್ರ ಮೋದಿ ಅವರು ಪಶ್ಚಿಮ ಬಂಗಾಳದ ಜನರಿಗೆ ನೆರವಾಗುವುದಾಗಿ ಭರವಸೆ ನೀಡಿದರೆ ನಾನು ಅವರ ಕಾಲು ಮುಟ್ಟಿ ನಮಸ್ಕರಿಸಲೂ ಸಿದ್ಧಳಿದ್ದೇನೆ ಎಂದೂ ಅವರು ತಿಳಿಸಿದರು.

× Chat with us