ನಾನು ಇಲಾಖೆಯ ಪೋಸ್ಟ್‌ ಮನ್‌ ಅಲ್ಲ: ಬಿಎಸ್‌ವೈ ವಿರುದ್ಧ ಈಶ್ವರಪ್ಪ ಕಿಡಿ

ಮೈಸೂರು: ಯಾವುದೇ ಯಾವುದೇ ಇಲಾಖೆಯ ಸಚಿವ ಪೋಸ್ಟ್‌ ಮನ್‌ ಅಲ್ಲ. ನೇರವಾಗಿ ಹಣ ಬಿಡುಗಡೆ ಮಾಡಿದ ನಂತರ ಸಚಿವರ ಗಮನಕ್ಕೆ ತನ್ನಿ ಎನ್ನುವುದು ಸರಿಯಲ್ಲ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ವಿರುದ್ಧ ಸಚಿವ ಕೆ.ಎಸ್.ಈಶ್ವರಪ್ಪ ಕಿಡಿಕಾರಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವು ವಿಚಾರದಲ್ಲಿ ಮುಖ್ಯಮಂತ್ರಿಗಳು ನನಗೂ ದೂರ ಎನ್ನುವುದನ್ನು ಒಪ್ಪುತ್ತೇನೆ. ಅವರು ಬೇರೆ ಪಕ್ಷಕ್ಕೆ ಹೋಗಿ ಮತ್ತೆ ಬಿಜೆಪಿಗೆ ಬಂದರು. ಆದರೂ ಪಕ್ಷ, ರಾಜ್ಯದ ವಿಚಾರವಾಗಿ ಹೊಂದಾಣಿಕೆಯಿಂದ ಹೋಗಿದ್ದೇವೆ. ಅನುದಾನದ ವಿಚಾರಕ್ಕೆ ಬಂದಾಗ ನನ್ನ ಇಲಾಖೆಯ ಅನುದಾನ ಹಂಚಿಕೆ ನನ್ನ ಅಧಿಕಾರ. ಇದನ್ನು ಮಾತನಾಡಿದ್ದೇನೆ ಅಷ್ಟೇ ಎಂದು ತನ್ನ ನಿಲುವನ್ನು ಸಮರ್ಥಿಸಿಕೊಂಡರು.

ನಾಲ್ವರು ಸಚಿವರು, ನಾಲ್ವರು ಶಾಸಕರು ಈ ಬಗ್ಗೆ ಮಾತನಾಡಿದ್ದಾರೆ. ರಾಜೀನಾಮೆ ಕೇಳಿದ್ದು, ಖಾತೆ ಬದಲಾವಣೆ ಬಗ್ಗೆ ಚರ್ಚೆಯಾಗಿದೆ. ಇಂತಹ ಯಾವುದಕ್ಕೂ ನಾನು ಬಗ್ಗುವ ಪ್ರಶ್ನೆಯೇ ಇಲ್ಲ. ನನ್ನ ನಿರ್ಧಾರ ನ್ಯಾಯಬದ್ಧವಾಗಿದೆ. ರಾಜ್ಯದ ಹಲವು ಶಾಸಕರು, ಸಚಿವರು, ಸಂಸದರು, ಬಿಜೆಪಿ ಪದಾಧಿಕಾರಿಗಳು ನನ್ನ ಪರವಾಗಿ ಮಾತಾಡಿದ್ದಾರೆ. ಸಹಿ ಸಂಗ್ರಹಿಸುವ ಬಗ್ಗೆಯೂ ಅವರು ಕೇಳಿದ್ದಾರೆ. ಆದರೆ, ಸಹಿ ಸಂಗ್ರಹ ಮಾಡುವುದು ಬೇಡ ಎಂದಿದ್ದೆ. ಶಾಸಕರು ಸಹಿ ಸಂಗ್ರಹಿಸುವುದು ತಪ್ಪು. ಇದು ನನ್ನ, ಯಡಿಯೂರಪ್ಪ ನಡುವಿನ ವೈಯಕ್ತಿಕ ವಿಚಾರವಲ್ಲ. ನೀತಿ, ನಿಯಮ ಜಾರಿ ಮಾಡಬೇಕೆಂಬ ನನ್ನ ಪ್ರಯತ್ನವಷ್ಟೇ ಎಂದು ಸ್ಪಷ್ಟಪಡಿಸಿದರು.

× Chat with us