ವಿಶ್ವದ ಅತಿ ದೊಡ್ಡ ತೇಲುವ ರೆಸ್ಟೋರೆಂಟ್ ಮುಳುಗಡೆ

ಹಾಂಕಾಂಗ್‌ನ ಫೇಮಸ್ ತೇಲುವ ರೆಸ್ಟೋರೆಂಟ್‌ ಚೀನಾದ ದಕ್ಷಿಣ ಭಾಗದ ಸಮುದ್ರದಲ್ಲಿ 1,000 ಅಡಿಗೂ ಅಧಿಕ ಆಳಕ್ಕೆ ಮುಳುಗಿ ಹೋಗಿದೆ.. ಜಂಬೋ ಹೆಸರಿನ ರೆಸ್ಟೋರೆಂಟ್‌ನ್ನು ನೀರಿನಿಂದ ಬೇರೆಡೆಗೆ ಸ್ಥಳಾಂತರಿಸಲು ಯತ್ನಿಸುತ್ತಿರುವಾಗ ಈ ಘಟನೆ ಸಂಭವಿಸಿದೆ. ಕಳೆದ 46 ವರ್ಷಗಳಿಂದ ಈ ಫ್ಲೋಟಿಂಗ್‌ ರೆಸ್ಟೋರೆಂಟ್ ಒಂದೇ ಸ್ಥಳದಲ್ಲಿದ್ದು ಲಕ್ಷಾಂತರ ಮಂದಿ ಪ್ರವಾಸಿಗರು ಇಲ್ಲಿಗೆ ಬಂದು ಎಂಜಾಯ್ ಮಾಡುತ್ತಿದ್ದರು.

46 ವರ್ಷಗಳಿಂದ ಒಂದೇ ನೆಲೆಯಲ್ಲಿದ್ದ ಫ್ಲೋಟಿಂಗ್ ರೆಸ್ಟೋರೆಂಟ್ ಅನ್ನು ಬೇರೆಡೆಗೆ ಸ್ಥಳಾಂತರಿಸಲು ಟಗ್‌ಬೋಟ್ ಸಹಾಯದಿಂದ ಎಳೆದುಕೊಂಡು ಹೋಗಲಾಗಿತ್ತು. ಈ ಸಂದರ್ಭ ದಕ್ಷಿಣ ಚೀನಾ ಸಮುದ್ರದ ಭಾರೀ ಅಲೆಯ ಕಾರಣ ಜಂಬೋ ರೆಸ್ಟೋರೆಂಟ್ ಮಗುಚಿ ಬಿದ್ದಿದೆ. ಅದನ್ನು ನೀರಿನಿಂದ ಮೇಲೆತ್ತುವುದು ಅತ್ಯಂತ ಕಷ್ಟಕರವಾಗಿ ಪರಿಣಮಿಸಿದೆ. ಸದ್ಯ ಘಟನೆಯಲ್ಲಿ ಯಾರಿಗೂ ಪ್ರಾಣಾಪಾಯವಾಗಿಲ್ಲ ಎಂದು ವರದಿಗಳು ತಿಳಿಸಿವೆ.

ಒಂದು ಕಾಲದಲ್ಲಿ ವಿಶ್ವದ ಅತಿ ದೊಡ್ಡ ತೇಲುವ ರೆಸ್ಟೋರೆಂಟ್ ಎಂದು ಹೆಗ್ಗಳಿಕೆಗೆ ಪಾತ್ರವಾಗಿದ್ದ ಜಂಬೋ, ಅನೇಕ ಹಾಂಕಾಂಗ್ ಹಾಗೂ ಅಂತಾರಾಷ್ಟ್ರೀಯ ಚಲನಚಿತ್ರಗಳಲ್ಲೂ ಕಾಣಿಸಿಕೊಂಡಿತ್ತು. ಈ ರೆಸ್ಟೋರೆಂಟ್‌ನಲ್ಲಿ ಎರಡನೇ ರಾಣಿ ಎಲಿಜಬೆತ್, ಜಿಮ್ಮಿ ಕಾರ್ಟರ್, ಟಾಮ್ ಕ್ರೂಸ್ ಸೇರಿದಂತೆ ಹಲವು ಗಣ್ಯರಿಗೆ ಆತಿಥ್ಯ ನೀಡಲಾಗಿತ್ತು. ಭವ್ಯವಾದ ಗೋಪುರ, ವರ್ಣರಂಜಿತ ಚಿತ್ರ, ಚೈನೀಸ್ ಭಾಷೆಯ ಸಾಲುಗಳಿಂದ ಜಂಬೋ ಪ್ರಸಿದ್ಧವಾಗಿತ್ತು. 2013ರ ಸಮಯ ಚೀನಾದ ದಕ್ಷಿಣ ಭಾಗದಲ್ಲಿ ಮೀನುಗಾರಿಕೆ ಹಾಗೂ ಜನಸಂಖ್ಯೆ ಕ್ಷೀಣಿಸಿದ ಕಾರಣ ಜಂಬೋ ತನ್ನ ಪ್ರಸಿದ್ಧಿಯನ್ನು ನಿಧಾನವಾಗಿ ಕಳೆದುಕೊಂಡಿತು

ಕೋವಿಡ್ ಪ್ರಾರಂಭವಾದ ಬಳಿಕವಂತೂ ರೆಸ್ಟೋರೆಂಟ್ ಮಾಲೀಕರು ಭಾರೀ ನಷ್ಟವನ್ನು ಅನುಭವಿಸಿ, ಮುಚ್ಚುವ ಸ್ಥಿತಿಗೆ ಬಂದಿದ್ದರು. ಹಣದ ಕೊರತೆಯಿದ್ದ ಕಾರಣ ರೆಸ್ಟೋರೆಂಟ್‌ನ ಮೂಲ ಕಂಪನಿ ಹೊಸ ಮಾಲೀಕರನ್ನು ಹುಡುಕುತ್ತಿತ್ತು. ರೆಸ್ಟೋರೆಂಟ್ ಅನ್ನು ಪುನರುಜ್ಜೀವನಗೊಳಿಸಲು ಹಲವಾರು ಪ್ರಸ್ತಾಪಗಳನ್ನು ಘೋಷಿಸಲಾಗಿದ್ದರೂ, ಪ್ರತಿ ವರ್ಷ ಹೆಚ್ಚಿನ ನಿರ್ವಹಣಾ ಶುಲ್ಕಗಳು ಸಂಭಾವ್ಯ ಹೂಡಿಕೆದಾರರನ್ನು ತಡೆಯುತ್ತಿತ್ತು. ಕೋವಿಡ್‌-೧೯ ನಿರ್ಬಂಧಗಳ ನಂತರ, ಅದರ ಮೂಲ ಕಂಪನಿಗೆ ಹೊಸ ಮಾಲೀಕರನ್ನು ಹುಡುಕಲು ಸಾಧ್ಯವಾಗಲಿಲ್ಲ ಮತ್ತು ಅದನ್ನು ನಿರ್ವಹಿಸಲು ಹಣದ ಕೊರತೆಯಿತ್ತು.

ಹಾಂಕಾಂಗ್‌ನ ಐಕಾನಿಕ್ ಜಂಬೋ ಫ್ಲೋಟಿಂಗ್ ರೆಸ್ಟೋರೆಂಟ್ ಅನ್ನು 46 ವರ್ಷಗಳ ನಂತರ ಅದರ ಅಬರ್‌ಡೀನ್ ಬಂದರಿನಿಂದ  ಹೊರತೆಗೆಯುವ ನಿರ್ಧಾರ ಮಾಡಲಾಗಿತ್ತು. ಈ ರೆಸ್ಟೋರೆಂಟ್‌ಅನ್ನು ಚೀನೀ ಸಾಮ್ರಾಜ್ಯಶಾಹಿ ಅರಮನೆಯಂತೆ ವಿನ್ಯಾಸಗೊಳಿಸಲಾಗಿದೆ ಮತ್ತು ಕ್ಯಾಂಟೋನೀಸ್ ಮತ್ತು ಸಮುದ್ರಾಹಾರ ಭಕ್ಷ್ಯಗಳಿಗೆ ಹೆಸರುವಾಸಿಯಾಗಿದೆ. ಕೋವಿಡ್  ಸಾಂಕ್ರಾಮಿಕದ ಕಾರಣದಿಂದಾಗಿ 2020ರಲ್ಲಿ ಮುಚ್ಚಲ್ಪಟ್ಟಿದ್ದ ಈ ರೆಸ್ಟೋರೆಂಟ್ ಬಳಿಕ ತೆರೆದಿರಲಿಲ್ಲ.

ಈ ರೆಸ್ಟೋರೆಂಟ್ ಅನ್ನು ನಿರ್ವಹಿಸುವ ಕಂಪನಿಯಾದ ಅಬರ್ಡೀನ್ ರೆಸ್ಟೋರೆಂಟ್ ಎಂಟರ್‌ಪ್ರೈಸಸ್, ವ್ಯವಹಾರವನ್ನು ನಡೆಸುವ ವೆಚ್ಚವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಎಂದು ಮಾಧ್ಯಮಗಳಿಗೆ ತಿಳಿಸಿತ್ತು. ರೆಸ್ಟೊರೆಂಟ್‌ನಲ್ಲಿ ನಿರಂತರವಾಗಿ ಹಣ ಹೂಡುವುದು ಅವರಿಗೆ ಅಸಾಧ್ಯವಾಗುತ್ತಿತ್ತು. ಕಂಪನಿಯು ಪ್ರತಿ ವರ್ಷ ನಿರ್ವಹಣಾ ಮತ್ತು ತಪಾಸಣೆ ವೆಚ್ಚಗಳಿಗಾಗಿ ಲಕ್ಷಾಂತರ ಡಾಲರ್‌ಗಳನ್ನು ಖರ್ಚು ಮಾಡುತ್ತಿದೆ. ಆದರೆ ಗಳಿಸಿದ ಆದಾಯಕ್ಕಿಂತ ಖರ್ಚಾದ ವೆಚ್ಚವೇ ಹೆಚ್ಚು ಎಂದು ಮಾಲೀಕರು ತಿಳಿಸಿದ್ದರು

ತೇಲುವ ರೆಸ್ಟೋರೆಂಟ್‌ನ ಒಡೆತನ ವಹಿಸಿಕೊಂಡಿರುವ ಅಬರ್ಡೀನ್ ರೆಸ್ಟೋರೆಂಟ್ ಎಂಟರ್‌ಪ್ರೈಸಸ್, ಅಧಿಕೃತ ಹೇಳಿಕೆಯಲ್ಲಿ, ಘಟನೆಯಿಂದ ತುಂಬಾ ದುಃಖವಾಗಿದೆ ಎಂದು ಹೇಳಿದೆ. ರೆಸ್ಟೋರೆಂಟ್ ಮುಳುಗಲು ಕಾರಣವೇನು ಎಂಬ ಕುರಿತು ತನಿಖೆ ನಡೆಯುತ್ತಿದೆ ಎಂದು ತಿಳಿದುಬಂದಿದೆ. ಒಟ್ನಲ್ಲಿ ಆದರೆ 46 ವರ್ಷಗಳ ಬಳಿಕ ಅದನ್ನು ಬೇರೆಡೆಗೆ ಸ್ಥಳಾಂತರಿಸುವ ಸಂದರ್ಭ ಮುಳುಗಡೆಯಾಗಿದ್ದು, ಇದೀಗ ಸುಪ್ರಸಿದ್ಧ ಜಂಬೋ ರೆಸ್ಟೋರೆಂಟ್ ಕೇವಲ ನೆನಪಾಗಿ ಉಳಿದಿದೆ.