ಕುಡಿತದ ಚಟದಿಂದ ಕಳ್ಳತನ: ಚಿನ್ನಾಭರಣ ಕದ್ದು ಸಿಕ್ಕಿಬಿದ್ದ ಹೋಂ ನರ್ಸಿಂಗ್ ಮಹಿಳೆ

ಮೈಸೂರು: ಹೋಂ ನರ್ಸಿಂಗ್ ಕೆಲಸಕ್ಕೆಂದು ಬಂದು ಅದೇ ಮನೆಯಲ್ಲಿ ಚಿನ್ನಾಭರಣ ಹಾಗೂ ನಗದನ್ನು ಕಳ್ಳತನ ಮಾಡಿದ್ದ ಮಹಿಳೆಯನ್ನು ವಿದ್ಯಾರಣ್ಯಪುರಂ ಠಾಣೆ ಪೊಲೀಸರು ಬಂಧಿಸಿದ್ದಾರೆ.

ನಗರದ ಎನ್.ಆರ್.ಮೊಹಲ್ಲಾ ನಿವಾಸಿ ಮೀನಾಕ್ಷಿ ಬಂಧಿತ ಆರೋಪಿ. ಆಕೆಯಿಂದ ಪೊಲೀಸರು ೪ ಚಿನ್ನದ ಬಳೆಗಳನ್ನು ವಶಕ್ಕೆ ಪಡೆದಿದ್ದಾರೆ.

ನಗರದ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರಾಗಿರುವ ವ್ಯಕ್ತಿಯೊಬ್ಬರು ವಯಸ್ಸಾದ ತಮ್ಮ ತಾಯಿಯನ್ನು ನೋಡಿಕೊಳ್ಳುವ ಉದ್ದೇಶದಿಂದ ಮೀನಾಕ್ಷಿಯನ್ನು ನೇಮಿಸಿಕೊಂಡಿದ್ದರು. ಕಳೆದ ಎರಡು ದಿನಗಳ ಹಿಂದೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಆಕೆ ಬೀರುವಿನ ಲಾಕರ್ ತೆಗೆದು 5 ಸಾವಿರ ರೂ. ನಗದು ಹಾಗೂ 60 ಗ್ರಾಂ ತೂಕದ ಚಿನ್ನದ ಬಳೆಗಳನ್ನು ಕಳ್ಳತನ ಮಾಡಿದ್ದಳು.

ಕುಡಿತದ ಚಟಕ್ಕೆ ಬಿದ್ದಿದ್ದಳು: ಹೋಂ ನರ್ಸಿಂಗ್ ಕೆಲಸ ಮಾಡಿಕೊಂಡಿದ್ದ ಮೀನಾಕ್ಷಿ, ಮದ್ಯ ಸೇವನೆಯ ಚಟಕ್ಕೆ ಬಿದ್ದಿದ್ದಳು. ಹೀಗಾಗಿ ಹಣದ ಅವಶ್ಯಕತೆಯಿಂದ ಕಳ್ಳತನ ಮಾಡಿರುವುದಾಗಿ ವಿಚಾರಣೆ ವೇಳೆ ತಿಳಿಸಿದ್ದಾಳೆ. ಆಕೆಯ ಮನೆಯಲ್ಲಿದ್ದ ಚಿನ್ನದ ಬಳೆಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮೊದಲಿಗೆ ಅಕೆಯ ವಿಳಾಸ ಯಾರಿಗೂ ಗೊತ್ತಿರಲಿಲ್ಲ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ವಿದ್ಯಾರಣ್ಯಪುರಂ ಪೊಲೀಸರು ವೈದ್ಯರ ಮನೆಯಲ್ಲಿದ್ದ ಸಿಸಿಟಿವಿ ಫೋಟೇಜ್ ಸಹಾಯದಿಂದ ಆಕೆಯನ್ನು ಒಂದು ದಿನದಲ್ಲಿಯೇ ಪತ್ತೆಹಚ್ಚಿ ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

× Chat with us