ಯಡಿಯೂರಪ್ಪನವರೇ ಸಿದ್ಧಲಿಂಗೇಶ್ವರ ನಿಮಗೆ ಒಳ್ಳೆಯದು ಮಾಡಲ್ಲ: ಎಚ್.ವಿಶ್ವನಾಥ್‌

ಮೈಸೂರು: ಯಡಿಯೂರಪ್ಪನವರೇ ಸಿದ್ಧಲಿಂಗೇಶ್ವರ ನಿಮಗೆ ಒಳ್ಳೆಯದು ಮಾಡಲ್ಲ. ಕೊಟ್ಟ ಮಾತು ಉಳಿಸಿಕೊಳ್ಳದ ನಿಮ್ಮನ್ನು ಸಿದ್ಧಲಿಂಗೇಶ್ವರ ಕ್ಷಮಿಸೋದಿಲ್ಲ ಎಂದು ವಿಧಾನ ಪರಿಷತ್‌ ಸದಸ್ಯ ಎಚ್.ವಿಶ್ವನಾಥ್‌ ಟೀಕಿಸಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಯಾವ ನಾಯಕನಿಗೂ ಕೃತಜ್ಞತೆ ಇಲ್ಲ. ಆ ಸಿದ್ದರಾಮಯ್ಯರನ್ನು ಕರೆದುಕೊಂಡು ಬಂದ್ವಿ, ಅವರು ಹೇಳಲಿಲ್ಲ. ಯಡಿಯೂರಪ್ಪರಿಗೆ ತ್ಯಾಗ ಮಾಡಿದ್ವಿ, ಅವರೂ ಹೇಳಲಿಲ್ಲ. ಬಿಎಸ್‌ವೈ ತಮ್ಮ ನಾಲಿಗೆ ಕಳೆದುಕೊಂಡಿದ್ದಾರೆ. ತಾವು ಕೊಟ್ಟ ಮಾತು ಉಳಿಸಿಕೊಂಡಿಲ್ಲ. 17 ಮಂದಿ ಭಿಕ್ಷೆಯಲ್ಲಿ ಸರ್ಕಾರ ಇದೆ. ಅವರ ತ್ಯಾಗದಿಂದ ಸರ್ಕಾರ ಬಂದಿದೆ, ಅದನ್ನು ನೆನಪಿಸಿಕೊಳ್ಳಿ ಎಂದು ಕಿಡಿಕಾರಿದರು.

ಯಡಿಯೂರಪ್ಪನವರೇ ಸಿದ್ಧಲಿಂಗೇಶ್ವರ ನಿಮಗೆ ಒಳ್ಳೆಯದು ಮಾಡಲ್ಲ. ಕೊಟ್ಟ ಮಾತು ಉಳಿಸಿಕೊಳ್ಳದ ನಿಮ್ಮನ್ನು ಸಿದ್ಧಲಿಂಗೇಶ್ವರ ಕ್ಷಮಿಸೋದಿಲ್ಲ. ನಾವು ಯಡಿಯೂರಪ್ಪ ಅವರಿಂದ ಇದನ್ನ ನಿರೀಕ್ಷಿಸಿರಲಿಲ್ಲ. ನಿಮ್ಮನ್ನು ಸಿಎಂ ಮಾಡಿದ್ದೇ ಈ 17 ಜನ. ನಿಮ್ಮ ಸಂಪುಟದಲ್ಲಿ ಎಲ್ಲರು ಇರಬೇಕು. ಮುಸ್ಲಿಂ ಕೂಡ ಇರಬೇಕು‌. ಎಲ್ಲ ಜಾತಿ, ಜನಾಂಗದವರು ಇರಬೇಕು. ಆದರೆ, ಇಲ್ಲೇನಾಗಿದೆ. ನಾಡಿನಲ್ಲಿ ನಾಲಿಗೆ ತಪ್ಪದ ನಾಯಕ ಅಂತ ಬಿರುದು ಕೊಟ್ಟಿದ್ದು ನಾವೇ. ಆದರೆ ಅದೆಲ್ಲ ಏನಾಯ್ತು ಎಂದು ಪ್ರಶ್ನಿಸಿದರು.

ಯಡಿಯೂರಪ್ಪ ಮನೆಯಲ್ಲಿ ಕುಟುಂಬ ರಾಜಕಾರಣ ನಡೆಯುತ್ತಿದೆ. ಯೋಗೇಶ್ವರ್ ಮಂತ್ರಿ ಆಗೋಕೆ ವಿಜಯೇಂದ್ರ ಕಾರಣ. ಅದೆ ರೀತಿ ಯಡಿಯೂರಪ್ಪ ಪ್ರತಿಷ್ಠೆ ಇಲ್ಲವಾಗಲು ವಿಜಯೇಂದ್ರರೇ ಕಾರಣ ಎಂದು ಆರೋಪಿಸಿದರು.

ಇಡೀ ವಿಧಾನಸೌಧದಲ್ಲಿ ಅವರ ಅಣ್ಣ, ತಮ್ಮಂದಿರೇ ಕುಳಿತಿದ್ದಾರೆ. ಯಡಿಯೂರಪ್ಪ ಸಂಪಾದಿಸಿದ್ದ ಹೆಸರು ಹಾಳಾಗುತ್ತಿದೆ. ಎಲ್ಲದಕ್ಕೂ ಸುಮ್ಮನೆ ಹೈಕಮಾಂಡ್ ಹೆಸರು ಬಳಸಬೇಡಿ. ಕರ್ನಾಟಕಕ್ಕೆ ಬಿಎಸ್‌ವೈ ಅವರೇ ಹೈಕಮಾಂಡ್ ಎಂದು ಹೇಳಿದರು.

× Chat with us