ವಿಜಯೇಂದ್ರ ಮೇಲಿನ ಭರವಸೆಯೇ ಸೋಲಿಗೆ ಕಾರಣ: ಎಚ್‌.ವಿಶ್ವನಾಥ್

ಮೈಸೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಅವರ ಮೇಲೆ ಇಟ್ಟಿರುವ ಅತಿಯಾದ ಹುಸಿ ಭರವಸೆಯೇ ಮಸ್ಕಿ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯ ಸೋಲಿಗೆ ಪ್ರಮುಖ ಕಾರಣ ಎಂದು ವಿಧಾನಪರಿಷತ್ ಸದಸ್ಯ ಎ.ಎಚ್.ವಿಶ್ವನಾಥ್ ವಿಶ್ಲೇಷಿಸಿದ್ದಾರೆ.

ರಾಜ್ಯದಲ್ಲಿ ನಡೆದ ಉಪಚುನಾವಣಾ ಫಲಿತಾಂಶದ ಸಂಬಂಧ ʻಆಂದೋಲನʼ ಜತೆ ಮಾತನಾಡಿದ ಅವರು, ಮಸ್ಕಿ ಹಾಗೂ ಬಸವಕಲ್ಯಾಣ ಕ್ಷೇತ್ರದಲ್ಲಿ ವಿಜಯೇಂದ್ರ ಅವರೇ ಬಂದು ಪ್ರಚಾರ ನಡೆಸಬೇಕು. ಅವರು ಪ್ರಚಾರ ಮಾಡಿದಲ್ಲಿ ಪಕ್ಷದ ಅಭ್ಯರ್ಥಿಗಳು ಗೆದ್ದೇ ಗೆಲ್ಲುತ್ತಾರೆ ಎಂದು ಬಿಂಬಿಸಲಾಯಿತು. ಆದರೆ, ಪಕ್ಷದ ಕೆಲವು ಮುಖಂಡರ ನಿರೀಕ್ಷೆ ಇದೀಗ ಹುಸಿಯಾಗಿದೆ. ಕಾಂಗ್ರೆಸ್ ಪಕ್ಷದ ವಿರುದ್ಧ ಬಂಡಾಯವೆದ್ದ 17 ಮಂದಿಯಲ್ಲಿ ಪ್ರತಾಪ್‌ಗೌಡ ಪಾಟೀಲ್ ಕೂಡ ಒಬ್ಬರು. ನಮ್ಮೆಲ್ಲರಿಗಿಂತಲೂ ಮೊದಲೇ ಅವರು ಪಕ್ಷಕ್ಕೆ ರಾಜೀನಾಮೆ ನೀಡಿದ್ದರು. ನಂತರ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದ ಅವರು, ವಿಜಯೇಂದ್ರ ಪ್ರಚಾರಕ್ಕೆ ಬಂದರೆ ನನ್ನ ಗೆಲುವು ನಿಶ್ಚಿತ ಎಂಬ ತೀರ್ಮಾನಕ್ಕೆ ಬಂದುಬಿಟ್ಟಿದ್ದರು. ಜೊತೆಗೆ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಚುನಾವಣೆಯ ಬಗ್ಗೆ ನಿರಾಸಕ್ತಿ ತೋರಿದ್ದರು. ಇದರ ಜೊತೆಗೆ ಸ್ಥಳೀಯ ಜನತೆ ಕೂಡ ವಿಜಯೇಂದ್ರ ಅವರನ್ನು ಗಂಭೀರವಾಗಿ ಪರಿಗಣಿಸಲಿಲ್ಲ ಎಂದರು.

ಹುಣಸೂರಿನಲ್ಲಿ ನಡೆದ ಉಪ ಚುನಾವಣೆಯಲ್ಲಿ ನಾನು ಸೋಲಲೂ ಸ್ಥಳೀಯ ಬಿಜೆಪಿ ಮುಖಂಡರೇ ಕಾರಣ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಇದು ಮಸ್ಕಿ ಕ್ಷೇತ್ರದಲ್ಲಿ ಪುನರಾವರ್ತನೆಯಾಗಿದೆ ಎಂದು ವಿಶ್ಲೇಷಿಸಿದರು.

× Chat with us