ಏಳೇಳು ಜನ್ಮಕ್ಕೂ ಬೇಡವೆನ್ನುತ್ತಿರುವ ಜನ ಸಾಮಾನ್ಯರು: ಎಚ್‌.ಸಿ.ಮಹದೇವಪ್ಪ

ಮೈಸೂರು: ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರವು ಅಸ್ತಿತ್ವಕ್ಕೆ ಬಂದು 7 ವರ್ಷಗಳು ಪೂರೈಸಿದ ಸಂಭ್ರಮದಲ್ಲಿದೆ. ಈ ಸಂಭ್ರಮ ಯಾವ ಕಾರಣಕ್ಕೆಂದು ಬಿಜೆಪಿಗೆ ಮತ ಹಾಕಿ ಈಗ ಉದ್ಯೋಗವಿಲ್ಲದೇ, ದುಡಿಮೆಯಿಲ್ಲದೇ, ಅವೈಜ್ಞಾನಿಕ ತೆರಿಗೆಗಳಿಂದ ಬೇಸತ್ತಿರುವ ಜನರಿಗೆ ನಿಜಕ್ಕೂ ತಿಳಿಯದಿದ್ದರೂ ಮತ ಹಾಕಿದ ಸ್ವಯಂಕೃತ ಪಾಪಕ್ಕೆ ಬಹಳಷ್ಟು ಮಂದಿ ಒಳಗೊಳಗೆ ದುಃಖಪಡುವಂತಹ ಸ್ಥಿತಿಯನ್ನು ಪ್ರಧಾನಿ ಮೋದಿ ಸೃಷ್ಟಿಸಿದ್ದಾರೆ ಎಂದು ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಟೀಕಿಸಿದ್ದಾರೆ.

ಕೊರೊನಾ ಸಂದರ್ಭದಲ್ಲಿ ಪ್ರಧಾನಿ ಮೋದಿಯವರ ನಿರ್ವಹಣಾ ವೈಫಲ್ಯದಿಂದ ನಮ್ಮ ಬದುಕೆ ನಾಶವಾಗುತ್ತಿದೆ ಎಂದು ಸ್ವತಃ ಬಿಜೆಪಿ ಬೆಂಬಲಿಗರು ಹೇಳುತ್ತಿದ್ದು, ಮೋದಿಯವರ ನಾಟಕದ ಮಾತು ಮತ್ತು ಪ್ರಚಾರದ ಗಿಮಿಕ್ ಗಳಿಗೆ ವಿರೋಧವನ್ನು ವ್ಯಕ್ತಪಡಿಸುತ್ತಿದ್ದಾರೆ. ಪ್ರಧಾನಿಯವರ ಈ 7 ವರ್ಷಗಳ ಆಡಳಿತವನ್ನು ಕಂಡು ಅನುಭವಿಸುತ್ತಿರುವ ಬಹುತೇಕ ಜನರು ಇನ್ನು ಏಳೇಳು ಯುಗಕ್ಕೂ ಕೂಡಾ ಇಂತಹ ಸರ್ಕಾರ ಬೇಡವೆಂಬ ಅಭಿಪ್ರಾಯಕ್ಕೆ ಜನಸಾಮಾನ್ಯರು ಬಂದಿದ್ದಾರೆ ಎಂಬುದನ್ನು ಈ ಸದ್ಯದ ಸಂದರ್ಭದ ಪರಿಸ್ಥಿತಿಯ ಆಧಾರದ ಮೇಲೆ ಖಚಿತವಾಗಿ ಹೇಳಬಹುದಾಗಿದೆ ಎಂದು ಹೇಳಿದ್ದಾರೆ.

ಅವೈಜ್ಞಾನಿಕ ಜಿಎಸ್‌ಟಿ ಮತ್ತು ನೋಟ್ ಬ್ಯಾನ್ ಮೂಲಕ ಶ್ರಮಿಕ ವರ್ಗಗಳ ಕೊಳ್ಳುವ ಶಕ್ತಿಯನ್ನೇ ನಾಶಮಾಡಿದ ಪ್ರಧಾನಿಗಳು ಈ ಕ್ಷಣಕ್ಕೂ ಕೂಡಾ ಜನರು, ಸಣ್ಣ ಪುಟ್ಟ ವ್ಯಾಪಾರಿಗಳು ವಿಲ ವಿಲ ಎಂದು ಒದ್ದಾಡುವಂತಹ ಕೆಟ್ಟ ಪರಿಸ್ಥಿತಿಯನ್ನು ನಿರ್ಮಿಸಿದ್ದಾರೆ. ಬಹುಶಃ ಅಭಿವೃದ್ಧಿ ಮತ್ತು ಜನಪರ ಯೋಜನೆಗಳ ಅರ್ಥ ತಿಳಿಯದ ಬಿಜೆಪಿಗರು ಈಗಲೂ ಕೂಡಾ ಈ ತಲೆಯಿಲ್ಲದ ನೋಟ್ ಬ್ಯಾನ್ ಮತ್ತು ಅವೈಜ್ಞಾನಿಕ ಜಿಎಸ್‌ಟಿಯನ್ನು ಮಾಸ್ಟರ್ ಸ್ಟ್ರೋಕ್ ಎಂದು ನಂಬಿದ್ದಾರೆ. ಭಾರತದ ಸಮಗ್ರ ದೇಶೀಯ ಅಭಿವೃದ್ಧಿ ಅಂದರೆ ಜಿಡಿಪಿಯ ಪ್ರಮಾಣವು ದಾಖಲೆ ಮಟ್ಟದಲ್ಲಿ ಕುಸಿತ ಕಂಡು, ದೇಶದ ಎಲ್ಲಾ ಉತ್ಪಾದಕ ವಲಯಗಳು ತತ್ತರಿಸಿ ಹೋದವು. ಆತ್ಮ ನಿರ್ಭರ್ ಯೋಜನೆ ಹಳ್ಳ ಹಿಡಿದಿದೆ ಎಂದಿದ್ದಾರೆ.

ಅಧಿಕಾರ ರಾಜಕಾರಣವೆಂಬುದು ಕೇವಲ ಮುಂದಿನ ಅವಧಿಗೆ ಹೇಗಾದರೂ ಮಾಡಿ ಅಧಿಕಾರವನ್ನು ಉಳಿಸಿಕೊಳ್ಳಲು ಇರುವ ಅಸ್ತ್ರವೆಂದು ನಂಬಿರುವ ಕೋಮುವಾದಿಗಳು ತಮ್ಮ ಅಧಿಕಾರದ ಅಸ್ತ್ರವನ್ನು ಜನ ಸಾಮಾನ್ಯರ ಬದುಕಿನ ವಿನಾಶಕ್ಕೆ ಬಳಸುತ್ತಾ ದೇಶವು ಆದಷ್ಟು ಬೇಗನೇ ಮನುವಾದದ ಹಿಡಿತಕ್ಕೆ ಬರಲಿ ಎನ್ನುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರ ಕೈಗೆ ಸಿಕ್ಕಿರುವ ಅಧಿಕಾರವು ʻಮಂಗನ ಕೈಯಲ್ಲಿ ಮಾಣಿಕ್ಯ ಕೊಟ್ಟಂತೆ ಆಗಿದೆʼ ಎಂದು ಛೇಡಿಸಿದ್ದಾರೆ.

× Chat with us