BREAKING NEWS

ಗ್ಯಾರಂಟಿ ಯೋಜನೆಗಳು ಮಾರ್ಗಸೂಚಿಗೆ ಅನುಗುಣವಾಗಿವೆ: ಹೈಕೋರ್ಟ್‍ಗೆ ಸಿಎಂ ಸ್ಪಷ್ಟನೆ

ಬೆಂಗಳೂರು : ರಾಜ್ಯದಲ್ಲಿ ಆರ್ಥಿಕವಾಗಿ ದುರ್ಬಲವಾಗಿರುವ ಹಾಗೂ ಅವಕಾಶ ವಂಚಿತ ವರ್ಗಗಳ ಕಲ್ಯಾಣಕ್ಕೆ ಜಾರಿಗೆ ತರಲಾಗಿರುವ ಐದು ಗ್ಯಾರಂಟಿಗಳು ಸಂವಿಧಾನ ಮತ್ತು ಚುನಾವಣಾ ಆಯೋಗದ ನಿಯಮಗಳು ಹಾಗೂ ಮಾರ್ಗಸೂಚಿಗಳ ಪ್ರಕಾರವೇ ಘೋಷಣೆ ಮಾಡಲಾಗಿದ್ದು, ಯಾವುದೇ ನಿಯಮಗಳನ್ನು ಉಲ್ಲಂಘಿಸಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೈಕೋರ್ಟ್‍ಗೆ ಲಿಖಿತ ಸ್ಪಷ್ಟನೆ ಸಲ್ಲಿಸಿದ್ದಾರೆ.

ಗ್ಯಾರಂಟಿಗಳ ಹೆಸರಲ್ಲಿ ಮತದಾರರಿಗೆ ಆಮಿಷವೊಡ್ಡುವ ಮೂಲಕ ಚುನಾವಣಾ ಅಕ್ರಮವೆಸಗಿ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಮೈಸೂರಿನ ವರುಣಾ ಕ್ಷೇತ್ರದಿಂದ ಆಯ್ಕೆಯನ್ನು ಅಸಿಂಧುಗೊಳಿಸಬೇಕು ಎಂದು ಕೋರಿ ವರುಣಾ ಹೋಬಳಿಯ ಕೂಡನಹಳ್ಳಿ ಗ್ರಾಮದ ನಿವಾಸಿ ಕೆ.ಎಂ.ಶಂಕರ್ ಎಂಬುವರು ಸಲ್ಲಿಸಿರುವ ಚುನಾವಣಾ ತಕರಾರು ಅರ್ಜಿ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಲ್ಲಿಸಿರುವ ಲಿಖಿತ ಪ್ರಮಾಣಪತ್ರದಲ್ಲಿ ಗ್ಯಾರಂಟಿ ಕಾರ್ಯಕ್ರಮಗಳನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.

ಈ ಅರ್ಜಿಯು ನ್ಯಾಯಮೂರ್ತಿ ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಿತ್ತು. ಪ್ರಕರಣದಲ್ಲಿ ಪ್ರತಿವಾದಿಯಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಲಿಖಿತ ಹೇಳಿಕೆಯನ್ನು ದಾಖಲೆಗೆ ತೆಗೆದುಕೊಂಡ ನ್ಯಾಯಪೀಠ ವಿಚಾರಣೆಯನ್ನು ಅ.6ಕ್ಕೆ ಮುಂದೂಡಿತು.

ಏನಿದೆ ಲಿಖಿತ ಹೇಳಿಕೆಯಲ್ಲಿ?: ‘ಶಕ್ತಿ, ಗೃಹ ಜ್ಯೋತಿ, ಗೃಹಲಕ್ಷ್ಮೀ, ಅನ್ನಭಾಗ್ಯ, ಯುವ ನಿಧಿ ಈ ಐದು ಕಲ್ಯಾಣ ಕಾರ್ಯಕ್ರಮಗಳನ್ನು ರಾಜ್ಯದ ಕೋಟ್ಯಂತರ ಕುಟುಂಬಗಳ ಶ್ರೇಯೋಭಿವೃದ್ಧಿಗೆ ರೂಪಿಸಲಾಗಿದೆ. ರಾಜ್ಯದ ನಾಗರಿಕರ ಹಾಗೂ ವಿಶೇಷವಾಗಿ ಮಹಿಳೆಯರ ಸಬಲೀಕರಣ ಮತ್ತು ಉನ್ನತೀಕರಣದ ವಿಶಾಲ ಧ್ಯೇಯದೊಂದಿಗೆ ಗ್ಯಾರಂಟಿ ಯೋಜನೆಗಳನ್ನು ನಿರ್ದಿಷ್ಟವಾಗಿ ರೂಪಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೈಕೋರ್ಟ್‍ಗೆ ಲಿಖಿತ ಸ್ಪಷ್ಟನೆ ಸಲ್ಲಿಸಿದ್ದಾರೆ.

ಇದು ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯ ಭಾಗವಾಗಿದೆ. ಚುನಾವಣಾ ಪ್ರಣಾಳಿಕೆ ವೈಯುಕ್ತಿಕ ಘೋಷಣೆ ಆಗಿರುವುದಿಲ್ಲ. ಪಕ್ಷದ ಎಲ್ಲ ಅಭ್ಯರ್ಥಿಗಳಿಗೂ ಅನ್ವಯವಾಗುತ್ತದೆ. ಚುನಾವಣಾ ಪ್ರಣಾಳಿಕೆಯ ಮಹತ್ವವನ್ನು ಎಸ್.ಆರ್.ಬೊಮ್ಮಾಯಿ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ 1994ರಲ್ಲಿ ಸುಪ್ರೀಂಕೋರ್ಟ್ ಪುನರುಚ್ಛರಿಸಿದೆ. ಚುನಾವಣಾ ಪ್ರಣಾಳಿಕೆಯಲ್ಲಿನ ಈ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾ ನಕ್ಕೆ ತರುವ ಮೂಲಕ ಸರಕಾರ ತನ್ನ ಬದ್ಧತೆಯನ್ನು ಪ್ರದರ್ಶಿಸಲಿದೆ ಎಂದು ಸಿದ್ದರಾಮಯ್ಯ ತಮ್ಮ ಲಿಖಿತ ಹೇಳಿಕೆಯಲ್ಲಿ ವಿವರಿಸಿದ್ದಾರೆ.

ಗ್ಯಾರಂಟಿ ಯೋಜನೆಗಳನ್ನು ಘೋಷಿಸುವ ಮೂಲಕ ಚುನಾವಣಾ ಅಕ್ರಮ ನಡೆಸಲಾಗಿದೆ ಎಂಬ ಅರ್ಜಿದಾರರ ಆರೋಪ ಸಂಪೂರ್ಣ ಸುಳ್ಳು. ಅರ್ಜಿದಾರರ ಈ ವಾದವು ಪ್ರಜಾಪ್ರತಿನಿಧಿ ಕಾಯ್ದೆಯ ತತ್ವಗಳಿಗೆ ವಿರುದ್ಧವಾಗಿದೆ. ನ್ಯಾಯಾಲಯದ ಅಮೂಲ್ಯ ಸಮಯವನ್ನು ಹಾಳು ಮಾಡುವ ಉದ್ದೇಶದಿಂದ ಈ ಅರ್ಜಿ ಸಲ್ಲಿಸಲಾಗಿದೆ. ನನ್ನ ವಿರುದ್ಧವಲ್ಲದೇ ಕಾಂಗ್ರೆಸ್ ಪಕ್ಷದ ಅನೇಕ ಶಾಸಕರ ವಿರುದ್ಧ ಇದೇ ರೀತಿಯ ಅರ್ಜಿ ಸಲ್ಲಿಸಲಾಗಿದೆ. ವಿಚಾರಣೆಗೆ ಯೋಗ್ಯವಲ್ಲದ, ಸೂಕ್ತ ಕಾನೂನು ತಿಳುವಳಿಕೆ ಇಲ್ಲದ, ಕೇವಲ ಕ್ಷುಲ್ಲಕ ಪ್ರಚಾರ ಗಿಟ್ಟಿಸಿಕೊಳ್ಳಲು ಸಲ್ಲಿಸಲಾಗಿರುವ ಇಂತಹ ಅರ್ಜಿಯನ್ನು ವಜಾಗೊಳಿಸಬೇಕು ಎಂದು ಸಿದ್ದರಾಮಯ್ಯ ತಮ್ಮ ಲಿಖಿತ ಹೇಳಿಕೆಯಲ್ಲಿ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.

andolanait

Recent Posts

ಮುಡಾಗೆ ಆರ್ಥಿಕ ಸಂಕಷ್ಟ; 20 ಕೋಟಿ ರೂ ನಷ್ಟ

ಮೈಸೂರು: ಬದಲಿ ನಿವೇಶನ ಹಂಚಿಕೆ, ೫೦:೫೦ ಅನುಪಾತದಲ್ಲಿ ನಿವೇಶನ ಅಕ್ರಮ ಹಂಚಿಕೆ ಹಗರಣದಿಂದಾಗಿ ಇಡೀ ರಾಜ್ಯದ ಗಮನ ಸೆಳೆದಿರುವ ಮೈಸೂರು…

45 mins ago

ಆಂದೋಲನ ಫಲಶ್ರುತಿ: ಕೊನೆಗೂ ತೆರವಾಯ್ತು ಬೃಹತ್‌ ಮರದ ಕಾಂಡ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಜುಂಬೂ ಸವಾರಿ ಸಾಗುವ ಮಾರ್ಗದಲ್ಲಿ ಕಳೆದ ಎರಡೂ ವರ್ಷಗಳಿಂದ ಬಿದ್ದಿದ್ದ ಬೃಹತ್ ಮರದ ಕಾಂಡವನ್ನು…

55 mins ago

ಜಂಬೂ ಸವಾರಿ ಮಾರ್ಗದಲ್ಲಿ ಸಣ್ಣ ಬದಲಾವಣೆ

ಮೈಸೂರು: ಈ ಬಾರಿಯ ದಸರಾ ಮಹೋತ್ಸವದ ಜಂಬೂ ಸವಾರಿಯನ್ನು ವೀಕ್ಷಿಸಲು ಆಗಮಿಸಿದ ಎಲ್ಲರಿಗೂ ಚಿನ್ನದ ಅಂಬಾರಿ ನೋಡುವ ಅವಕಾಶ ಸಿಗಬೇಕು…

1 hour ago

ಪೈಲ್ವಾನರ ಕಸರತ್ತಿಗೆ ಗರಡಿ ಮನೆಗಳು ಸಜ್ಜು

ಮೈಸೂರು: ಸಾಂಸ್ಕೃತಿಕ ರಾಜಧಾನಿ, ಅರಮನೆಗಳ ನಗರಿ ಎಂದು ಕರೆಯುವ ಮೈಸೂರನ್ನು ಗರಡಿ ಮನೆಗಳ ನಗರಿ ಎಂದೂ ಇತ್ತೀಚಿನ ವರ್ಷಗಳಲ್ಲಿ ಕರೆಯುವುದು…

1 hour ago

ತಿ.‌ ನರಸೀಪುರ: ಬೈಕ್ ಡಿಕ್ಕಿ ಚಿರತೆ ಸಾವು

ತಿ. ನರಸೀಪುರ: ತಾಲೂಕಿನ ಬನ್ನೂರು ಹೋಬಳಿಯ ಬಸವನಹಳ್ಳಿ ಗ್ರಾಮದ ಸಮೀಪದ ಮುಖ್ಯರಸ್ತೆಯಲ್ಲಿ ದ್ವಿಚಕ್ರ ವಾಹನ ಚಿರತೆಗೆ ಡಿಕ್ಕಿ ಹೊಡೆದ ಪರಿಣಾಮ…

9 hours ago

ತಿರುಪತಿ ಲಡ್ಡು: ತುಪ್ಪದಲ್ಲಿ ಪ್ರಾಣಿ ಕೊಬ್ಬು ಬಳಕೆ

ಅಮರಾವತಿ: ಜಗತ್‌ ಪ್ರಸಿದ್ಧ ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಹಾಗೂ ಕಳಪೆ ಗುಣಮಟ್ಟದ ಪದಾರ್ಥಗಳು ಪತ್ತೆಯಾಗಿದೆ ಎಂದು ತೆಲುಗು…

11 hours ago