ನಿನಗೆ ತಾಕತ್ತಿದ್ದರೆ ಡಿಸಿ ವರ್ಗಾವಣೆ ಮಾಡಿಸು: ಪ್ರತಾಪ್‌ ಸಿಂಹ ವಿರುದ್ಧ ಜಿಟಿಡಿ ಗುಡುಗು

ಮೈಸೂರು: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದ ಸಂಸದ ಪ್ರತಾಪ್‌ ಸಿಂಹ ವಿರುದ್ಧ ಶಾಸಕ ಜಿ.ಟಿ. ದೇವೇಗೌಡ ಅವರು ಹರಿಹಾಯ್ದಿದ್ದಾರೆ.

ನಿನಗೆ ತಾಕತ್ತಿದ್ದರೆ ಡಿಸಿಯನ್ನ ವರ್ಗಾವಣೆ ಮಾಡಿಸು. ಸುಖಾ ಸುಮ್ಮನೆ ಹಾದಿ ಬೀದಿಲಿ ನಿಂತು ಮಾತನಾಡಬೇಡ. ಮಾಧ್ಯಮಗಳ ಮುಂದೆ ಹೇಳಿಕೆ‌ ನೀಡಿದ್ರೆ ಹುಲಿ ಆಗಲ್ಲ. ಅಧಿಕಾರಿಗಳ ನಡುವೆ ಒಡಕು ಮೂಡಿಸುವ ಕೆಲಸ ಮಾಡಬೇಡ.
ಜಿಲ್ಲೆಯ ಶಾಸಕರು ನಿನಗಿಂತ ಹೆಚ್ಚು ಕೆಲಸ‌ ಮಾಡ್ತಿದ್ದಾರೆ. ಸ್ವಂತ ಹಣದಲ್ಲಿ ಕೋವಿಡ್ ನಿಯಂತ್ರಣಕ್ಕೆ ಮುಂದಾಗಿದ್ದಾರೆ.
ಸಂಸದನಾಗಿ ನೀನೆಷ್ಟು ಸ್ವಂತ ಹಣ ಖರ್ಚು ಮಾಡಿದ್ಯ ಹೇಳು ಎಂದು ಪ್ರಶ್ನಿಸಿದರು.

ವೈಫಲ್ಯತೆ ಬಗ್ಗೆ ವಿರೋಧ ಪಕ್ಷದವರು ಮಾತನಾಡಬೇಕು ಆಡಳಿತ ಪಕ್ಷದವರಲ್ಲ. ನೀನು ಪವರ್‌ಫುಲ್ ಎಂಪಿ, ಸಿಎಂ ನೀನು ಹೇಳಿದಂತೆ ಕೇಳ್ತಾರೆ. ತಾಕತ್ತಿದ್ದರೆ ಡಿಸಿಯನ್ನ ವರ್ಗಾವಣೆ ಮಾಡಿ ತೋರಿಸು. ಅದನ್ನ ಬಿಟ್ಟು ಪೇಪರ್‌ ಸ್ಟೇಟ್‌ಮೆಂಟ್ ಕೊಟ್ಟು ಗೊಂದಲ ಯಾಕೆ ಮೂಡುಸ್ತೀರಾ? ಜನರ ಮೈಸೂರಿನ ಬಗ್ಗೆ ಆಡಿಕೊಂಡು ನಗುತ್ತಿದ್ದಾರೆ. ನಿಮ್ಮ ಹೇಳಿಕೆ, ಆರೋಪಗಳ ಹಿಂದೆ ವೈಯುಕ್ತಿಕ ಸಮಸ್ಯೆ ಇದೆ. ನಿಮ್ಮ ಹೇಳಿಕೆಗಳು ಜನರಲ್ಲಿ ಅನುಮಾನ ಸೃಷ್ಟಿಸಿವೆ ಎಂದು ತಿಳಿಸಿದರು.

ಜನ ಸಾಯ್ತಿದ್ದಾರೆ. ಈಗ ಸರ್ಕಾರ ತೆಗೆಯಲು ಹೋಗಬೇಕಿತ್ತ?. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬದಲಾವಣೆ ಮಾಡಲು ಹೊರಟಿರುವುದು ಸರಿಯಲ್ಲ. ಜನರ ಕಷ್ಟ ನೋಡುವ ಬದಲು ದೆಹಲಿಗೆ ಹೋಗುವ ಅಗತ್ಯ ಇತ್ತು?. ಯಡಿಯೂರಪ್ಪ ಚನ್ನಾಗಿ ಕೆಲಸ ಮಾಡುತ್ತಿದ್ದಾರೆ. ಅವರನ್ನು ಕೆಲಸ ಮಾಡಲು ಬಿಡಿ. ಸರ್ಕಾರ ಬೀಳಸಲು ಪ್ರಯತ್ನ ಮಾಡಿರೋದು ಸರಿಯಲ್ಲ ಎಂದರು.

× Chat with us