ಉಂಡವಾಡಿ ಕಾಮಗಾರಿ ಪರಿಶೀಲಿಸಿದ ಜಿಟಿಡಿ; ಸಿಎಂಗೆ ಅಭಿನಂದನೆ!

ಮೈಸೂರು: ಮೈಸೂರು ನಗರ ಮತ್ತು ತಾಲ್ಲೂಕಿನ ಗ್ರಾಮಗಳಿಗೆ ಸಮಗ್ರ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ನಡೆಯುತ್ತಿರುವ ಹಳೇ ಉಂಡವಾಡಿ ಕುಡಿಯುವ‌ ನೀರಿನ ಯೋಜನೆ ಕಾಮಗಾರಿಯನ್ನು ಶಾಸಕ ಜಿ.ಟಿ.ದೇವೇಗೌಡ ಪರಿಶೀಲಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ೭ ವರ್ಷಗಳ ಸತತ ಪ್ರಯತ್ನದಿಂದ ಈ ಯೋಜನೆ ಪ್ರಾರಂಭಗೊಂಡಿದೆ. ಈ ಯೋಜನೆಗಾಗಿ 545 ಕೋಟಿ ರೂಗಳ ಪ್ರಸ್ತಾವನೆ ಸಲ್ಲಿಸಿದ್ದು, ಮೊದಲ ಹಂತದಲ್ಲಿ ಅಂದಿನ ಮುಖ್ಯಮಂತ್ರಿಗಳಾಗಿದ್ದ ಕುಮಾರಸ್ವಾಮಿಯವರು ಬಜೆಟ್ ನಲ್ಲಿ 350 ಕೋಟಿ ರೂ. ಅನುದಾನ ಘೋಷಣೆ ಮಾಡಿದ್ದರು. ನಂತರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅನುದಾನ ಬಿಡುಗಡೆ ಮಾಡಿ, ಟೆಂಡರ್ ಕರೆಯಲು ಅನುಮೋದನೆ ನೀಡುವ ಮೂಲಕ ಕಾಮಗಾರಿ ಪ್ರಾರಂಭವಾಗಲು ಕಾರಣಕರ್ತರಾಗಿದ್ದಾರೆ ಎಂದು ಅಭಿನಂದನೆ ಸಲ್ಲಿಸಿದರು.

ಈ ಯೋಜನೆಯಿಂದ ಮೈಸೂರು ತಾಲ್ಲೂಕು ಮತ್ತು ಮೈಸೂರು ನಗರ,‌ ಹುಣಸೂರು ತಾಲ್ಲೂಕು ಹಾಗೂ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ, ಮಂಡ್ಯ ತಾಲ್ಲೂಕಿನ ಹಲವಾರು ಹಳ್ಳಿಗಳಿಗಳಿಗೆ ಕುಡಿಯುವ ನೀರನ್ನು ಒದಗಿಸಬಹುದು ಎಂದರು.

ಮುಖ್ಯಮಂತ್ರಿಗಳು, ಜಿಲ್ಲಾ ಉಸ್ತುವಾರಿ ಸಚಿವರುಗಳು, ನಗರಾಭಿವೃದ್ಧಿ ಸಚಿವರು, ವಸತಿ ಸಚಿವರು, ಶಾಸಕರುಗಳು ಲೋಕಸಭಾ ಸದಸ್ಯರುಗಳು ಸೇರಿ ಶಂಕುಸ್ಥಾಪನೆ ಮಾಡಬೇಕಾಗಿತ್ತು. ಆದರೆ, ಕೋವಿಡ್ ನಿಂದಾಗಿ ಈ ಯೋಜನೆಯನ್ನು ಸರ್ಕಾರದ ಸೂಚನೆ ಮೇರೆಗೆ ಪ್ರಾರಂಭಿಸಲಾಗಿದೆ. ಯೋಜನೆಯನ್ನು ತ್ವರಿತಗೊಳಿಸುವ ಉದ್ದೇಶದಿಂದ ನಗರಾಭಿವೃದ್ಧಿ ಸಚಿವರು, ಮೈಸೂರು ಮತ್ತು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರು ಕಾಮಗಾರಿ‌ ವೀಕ್ಷಣೆ ಮಾಡುವಂತೆ ಮನವಿ ಮಾಡಿದ್ದೇನೆ. ಜುಲೈ ತಿಂಗಳ ಮೊದಲ ವಾರದಲ್ಲಿ ಸಚಿವರು ಕಾಮಗಾರಿ ಪರಿಶೀಸಲು ಆಗಮಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಕಾರ್ಯಪಾಲಕ ಅಭಿಯಂತರರು, ಸಹಾಯಕ ಕಾರ್ಯಪಾಲಕ ಅಭಿಯಂತರುಗಳು ಹಾಜರಿದ್ದರು.

× Chat with us