ಮೂರನೇ ದಿನಕ್ಕೆ ಕಾಲಿಟ್ಟ ಅಹೋರಾತ್ರಿ ಧರಣಿ

ಮೈಸೂರು: ಗ್ರೀನ್ ಬಡ್ಸ್ ಸಂಸ್ಥೆಯ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು ಠೇವಣಿ ಹಣ ಕೊಡಿಸುವಂತೆ ಆಗ್ರಹಿಸಿ ಠೇವಣಿದಾರರು ನಡೆಸುತ್ತಿರುವ ಅಹೋರಾತ್ರಿ ಪ್ರತಿಭಟನಾ ಧರಣಿ ಮೂರನೇ ದಿನವಾದ ಬುಧವಾರ(ಇಂದು)ವೂ ಮುಂದುವರಿದಿದೆ.

ಕಳೆದ ಎರಡು ದಿನಗಳಿಂದಲೂ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿರುವ ಗ್ರೀನ್‌ಬಡ್ಸ್ ಸಂಸ್ಥೆ ವಿರುದ್ಧದ ಪ್ರತಿಭಟನೆಐಲ್ಲಿ ರೈತರು ವಿವಿಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಠೇವಣಿದಾರರ ಸಂಘದ ಅಧ್ಯಕ್ಷೆ ಲಕ್ಷ್ಮೀ ಮಾತನಾಡಿ, ಈಗಾಗಲೇ ವಂಚನೆ ಬಗ್ಗೆ ಸಿಐಡಿ ವರದಿ ಬಂದಿದೆ. ರಾಜ್ಯ ಸರ್ಕಾರ ಸದರಿ ಸಂಸ್ಥೆಯನ್ನು ವಶಕ್ಕೆ ಪಡೆದು, ಠೇವಣಿದಾರರಿಗೆ ಹಣ ಕೊಡಿಸುವಂತೆಯೂ ಆದೇಶಿಸಿದೆ. ಆದರೆ, ಈ ಬಗ್ಗೆ ಕ್ರಮಕೈಗೊಳ್ಳಲು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಹಿಂದೇಟು ಹಾಕಿದೆ. ಹಾಗಾಗಿ ನಮ್ಮ ಠೇವಣಿ ಹಣ ನಮಗೆ ಸಿಗುವವರೆಗೂ ನಮ್ಮ ಪ್ರತಿಭಟನೆ ಕೈ ಬಿಡುವ ಪ್ರಶ್ನೆಯೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಧರಣಿ ಸ್ಥಳಕ್ಕೆ ಎಂಕೆಎಸ್ ಭೇಟಿ:

ಪ್ರತಿಭಟನಾ ಸ್ಥಳಕ್ಕೆ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಭೇಟಿ ನೀಡಿ ಪರಿಶೀಲಿಸಿದರು. ಮಾತ್ರವಲ್ಲದೆ ನಿಮ್ಮ ಹೋರಾಟದ ಜತೆ ತಾವು ಸಹ ಇರಲಿದ್ದು, ನಿಮ್ಮ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಡೆಯುತ್ತಿರುವ ಹೋರಾಟವನ್ನು ಬೆಂಬಲಿಸುತ್ತೇನೆ ಎಂದು ಭರವಸೆ ನೀಡಿದರು.

ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್, ಪ್ರಧಾನ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜು, ಎಪಿಎಂಸಿ ನಾಗರಾಜು, ರೀಟಾ, ರೂಪ, ಮಂಜು, ಷಡಕ್ಷರಿ, ಸಂತೋಷ್, ಜಗ, ಪುಷ್ಪ ಪ್ರಸಾದ್, ನಾಗರಾಜ್, ಬಳ್ಳಾರಿ ಮಂಜು, ದಿನೇಶ್ ಮತ್ತಿತರರು ಪಾಲ್ಗೊಂಡಿದ್ದರು.

× Chat with us