ಮೈಸೂರು: ರಂಗೋಲಿ ಬಿಡಿಸಿ, ಹೂ-ಮಾವು ತೋರಣದಿಂದ ಶಾಲೆ ಅಲಂಕರಿಸಿ ಮಕ್ಕಳಿಗೆ ಸ್ವಾಗತ…

ಮೈಸೂರು: ರಂಗೋಲಿ ಬಿಡಿಸಿ, ಹೂ, ಮಾವು ತೋರಣಗಳಿಂದ ಶಾಲೆ ಸಿಂಗರಿಸಿ ವಿದ್ಯಾರ್ಥಿಗಳಿಗೆ ಸೋಮವಾರ ಅದ್ಧೂರಿ ಸ್ವಾಗತ ಕೋರಲಾಯಿತು. ನಗರದ ಹಲವು ಶಾಲೆಗಳು ಅಲಂಕಾರದಿಂದ ಕಂಗೊಳಿಸಿದವು. ವಿದ್ಯಾರ್ಥಿಗಳು ಸಹ ಖುಷಿಯಿಂದ ಮೊದಲ ದಿನ ಶಾಲೆಗಳಿಗೆ ಆಗಮಿಸಿದರು.

ಇಂದಿನಿಂದ 9ರಿಂದ ದ್ವಿತೀಯ ಪಿಯುಸಿವರೆಗೆ ತರಗತಿಗಳನ್ನು ಆರಂಭಿಸಲಾಗಿದೆ. ಕೋವಿಡ್‌ ಮುಂಜಾಗ್ರತೆ ಕ್ರಮಗಳೊಂದಿಗೆ ಶಾಲೆಗಳನ್ನು ತೆರೆಯುವಂತೆ ಸರ್ಕಾರ ನಿರ್ದೇಶನ ನೀಡಿತ್ತು. ಅದರಂತೆ ಎಲ್ಲೆಡೆ ಶಾಲೆಗಳನ್ನು ಆರಂಭಿಸಲಾಗಿದೆ.

ಮೈಸೂರಿನ ಸಂತ ಮೇರಿಸ್‌ ಪ್ರೌಢ ಶಾಲೆಯಲ್ಲಿ ಹಬ್ಬದ ವಾತಾವರಣ ಕಂಡುಬಂತು. ಶಾಲೆಯನ್ನು ಹೂವು ಅಲಂಕಾರ, ಮಾವಿನ ತೋರಣ ಹಾಗೂ ಬಲೂನುಗಳಿಂದ ಸಿಂಗರಿಸಲಾಗಿತ್ತು. ಬಣ್ಣ ಬಣ್ಣದ ರಂಗೋಲಿ ಸಹ ಬಿಡಿಸಲಾಗಿತ್ತು. ಸ್ಯಾನಿಟೈಸೇಷನ್‌, ಸಾರ್ವಜನಿಕ ಅಂತರ ಮೊದಲಾದ ಕೋವಿಡ್‌ ನಿಯಮಗಳನ್ನು ಪಾಲಿಸುವ ನಿಟ್ಟಿನಲ್ಲಿ ಶಾಲೆಯಲ್ಲಿ ಕ್ರಮಕೈಗೊಳ್ಳಲಾಗಿತ್ತು.

ಕೃಷ್ಣರಾಜ ಯುವ ಬಳಗ ಹಾಗೂ ಅಪೂರ್ವ ಸ್ನೇಹ ಬಳಗ ವತಿಯಿಂದ ವಿದ್ಯಾರಣ್ಯಪುರಂನ ಟಿ ಎಸ್ ಸುಬ್ಬಣ್ಣನವರ ಸಾರ್ವಜನಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಆರತಿ ಬೆಳಗಿ, ಗುಲಾಬಿ ಹೂವು, ಪುಸ್ತಕ, ಪೆನ್ ಹಾಗೂ ಮಾಸ್ಕ್ ವಿತರಿಸುವ ಮೂಲಕ ಸ್ವಾಗತ ಕೋರಲಾಯಿತು. ಮೈಸೂರು ಮಹಾನಗರ ಪಾಲಿಕೆ ಸದಸ್ಯರಾದ ಮಾ.ವಿ.ರಾಮಪ್ರಸಾದ್ ನೇತೃತ್ವದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ವಿಶೇಷವಾಗಿ ಸ್ವಾಗತಿಸಲಾಯಿತು.

ಮೈಸೂರು ಜಿಲ್ಲೆಯಲ್ಲಿ 766 ಶಾಲೆಗಳು, 257 ಕಾಲೇಜುಗಳು ತೆರೆಯಲು ಅನುಮತಿ ನೀಡಲಾಗಿದೆ. ಅವುಗಳಲ್ಲಿ 232 ಸರ್ಕಾರಿ ಶಾಲೆಗಳು, 45 ಸಮಾಜ ಕಲ್ಯಾಣ ಇಲಾಖೆಯ ಶಾಲೆಗಳು, 134 ಅನುದಾನಿತ ಖಾಸಗಿ ಶಾಲೆಗಳು, 349 ಅನುದಾನ ರಹಿತ ಖಾಸಗಿ ಶಾಲೆಗಳು, ಕೇಂದ್ರ ವಿದ್ಯಾಲಯಗಳು 6 ಇವೆ. ಅಂತೆಯೇ, 3 ವಸತಿ ಕಾಲೇಜು, 74 ಕಾಲೇಜು ಸೇರಿ ಒಟ್ಟು 77 ಸರ್ಕಾರಿ ಕಾಲೇಜುಗಳಲ್ಲೂ ಸಿದ್ಧತೆ ಮಾಡಿಕೊಳ್ಳಲಾಗಿದೆ.

× Chat with us