ಸೋತ ಅಭ್ಯರ್ಥಿ ಮರು ಎಣಿಕೆಯಲ್ಲಿ ಗೆಲುವು! 3 ಬಾರಿ ಎಣಿಕೆಯಲ್ಲೂ ವ್ಯತ್ಯಾಸ.

ಪಾಂಡವಪುರ: ಇಲ್ಲಿನ ಪಿಎಸ್‌ಎಸ್‌ಕೆ ಪ್ರೌಢಶಾಲೆಯಲ್ಲಿ ನಡೆದ ಗ್ರಾಪಂ ಚುನಾವಣೆಯ ಮತ ಎಣಿಕೆಯಲ್ಲಿ ಅನ್ಯಾಯವಾಗಿದೆ ಎಂದು ಆರೋಪಿಸಿ ಕೆನ್ನಾಳು ಗ್ರಾಪಂನ ಹರಳಹಳ್ಳಿ ೨ನೇ ವಾರ್ಡ್ ಅಭ್ಯರ್ಥಿ ಮತ್ತು ಬೆಂಬಲಿಗರು ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಪಟ್ಟಣದ ತಾಲ್ಲೂಕು ಕಚೇರಿ ಎದುರು ಜವಾಯಿಸಿದ ಹರಳಹಳ್ಳಿ ಗ್ರಾಮದ ನೂರಾರು ಸಾರ್ವಜನಿಕರು ಮತ ಎಣಿಕೆಯಲ್ಲಿ ಅನ್ಯಾಯ ವಾಡಲಾಗಿದೆ ಎಂದು ಆರೋಪಿಸಿ ರಿಟರ್ನಿಂಗ್ ಅಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಘಟನೆ ವಿವರ:
ಕೆನ್ನಾಳು ಗ್ರಾಮ ಪಂಚಾಯ್ತಿಯ ಹರಳಹಳ್ಳಿ ೨ನೇ ವಾರ್ಡ್ ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದ ಎಂ.ಶಿವರಾಮ ಮತ ಎಣಿಕೆ ನಡೆದಾಗ 307 ಮತಗಳನ್ನು ಪಡೆದು ತಮ್ಮ ಸಮೀಪದ ಪ್ರತಿಸ್ಪರ್ಧಿ ಎ.ಬಿ.ಚಿದಂಬರ (305) ಅವರಿಗಿಂತ 2 ಮತಗಳನ್ನು ಹೆಚ್ಚು ಪಡೆದು ಜಯಶೀಲರಾದರು. ಈ ವೇಳೆ ಇಬ್ಬರೂ ಅಭ್ಯರ್ಥಿಗಳು ಪಡೆದ ಒಟ್ಟು ಮತಗಳು 612 ಆಗಿದ್ದವು.
ಈ ವೇಳೆ ಚಿದಂಬರ ಅವರು ಮರು ಎಣಿಕೆ ಕೋರಿ ಅರ್ಜಿ ಸಲ್ಲಿಸಿದಾಗ ಮರು ಎಣಿಕೆ ನಡೆಯಿತು. ಈ ಸಂದರ್ಭದಲ್ಲಿ ಶಿವರಾಮ ಅವರಿಗೆ 305 ಮತಗಳು ಲಭಿಸಿ, ಮರು ಎಣಿಕೆ ಕೋರಿದ್ದ ಎ.ಬಿ.ಚಿದಂಬರ ಅವರು 306 ಮತಗಳನ್ನು ಪಡೆದಿದ್ದಾರೆ ಎಂದು ಎಣಿಕೆ ಅಧಿಕಾರಿಗಳು ತಿಳಿಸಿದರು. ಈ ವೇಳೆ ಇಬ್ಬರೂ ಅಭ್ಯರ್ಥಿಗಳು ಪಡೆದ ಒಟ್ಟು ಮತಗಳು 611 ಆಗಿದ್ದು, ಮೊದಲ ಸಲ ಎಣಿಕೆ ನಡೆದಾಗ 612 ಮತಗಳ ಪೈಕಿ ಒಂದು ಮತ ಕಡಿಮೆಯಾಗಿತ್ತು. ಎಣಿಕೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ಶಿವರಾಮು ಮತ್ತೊಮ್ಮೆ ಮರು ಎಣಿಕೆಗೆ ಕೋರಿದರು. 2ನೇ ಬಾರಿ ಮರು ಎಣಿಕೆ ನಡೆದಾಗ ಶಿವರಾಮು ಅವರಿಗೆ 303 ಮತಗಳು ಮತ್ತು ಎ.ಬಿ.ಚಿದಂಬರ ಅವರಿಗೆ 304 ಮತಗಳು ಬಂದವು. ಈ ಸಂದರ್ಭದಲ್ಲಿ ಇಬ್ಬರು ಅಭ್ಯರ್ಥಿಗಳು ಪಡೆದ ಒಟ್ಟು ಮತಗಳ ಸಂಖ್ಯೆ 607 ಆಗಿತ್ತು. ಅಂದರೆ, ಮೊದಲ ಸಲ ಎಣಿಕೆ ನಡೆದಾಗ ಇಬ್ಬರು ಅಭ್ಯರ್ಥಿಗಳು ಪಡೆದಿದ್ದ 612 ಮತಗಳ ಪೈಕಿ 3ನೇ ಸಲ ಮತ ಎಣಿಕೆ ನಡೆದಾಗ 5 ಮತಗಳು ಕಡಿಮೆಯಾಗಿದ್ದವು. ಈ ವೇಳೆ ಚಿದಂಬರ ಗೆಲುವು ಸಾಧಿಸಿದ್ದಾರೆ ಎಂದು ಚುನಾವಣಾಧಿಕಾರಿ ಘೋಷಣೆ ವಾಡಿದ್ದನ್ನು ಶಿವರಾಮು ಖಂಡಿಸಿ ತಮಗೆ ಅನ್ಯಾಯವಾಗಿದೆ ಎಂದು ಚುನಾವಣಾಧಿಕಾರಿ ವಿರುದ್ಧ ಅಸವಾಧಾನ ವ್ಯಕ್ತಪಡಿಸಿದ್ದರು.
ಗುರುವಾರ ಬೆಳಿಗ್ಗೆ ತಾಲ್ಲೂಕು ಕಚೇರಿ ಮುಂಭಾಗ ನಡೆದ ಪ್ರತಿಭಟನೆಯಲ್ಲಿ ವಾತನಾಡಿದ ಅಭ್ಯರ್ಥಿ ಶಿವರಾಮು, 3 ಸಲ ಎಣಿಕೆ ನಡೆದರೂ ಪ್ರತಿ ಸಲವೂ ಮತಗಳ ಎಣಿಕೆಯಲ್ಲಿ ಏರು ಪೇರಾಗಿದ್ದರ ಬಗ್ಗೆ ನನಗೆ ತೀವ್ರ ಅನುವಾನ ಉಂಟಾಗಿದೆ. ನಾನು ಪರಿಶಿಷ್ಟ ಜನಾಂಗದವನಾಗಿದ್ದು, ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದೇನೆ. ನನ್ನ ಗೆಲುವು ಸಹಿಸಲಾಗದೆ ಮತಗಳ ಎಣಿಕೆಯಲ್ಲಿ ಅಕ್ರಮ ಎಸಗಲಾಗಿದೆ ಎಂದು ಆರೋಪಿಸಿದರು.
2 ಮತಪತ್ರಗಳು ಖಾಲಿ:
3ನೇ ಬಾರಿ ಎಣಿಕೆ ನಡೆದಾಗ 2 ಮತಪತ್ರಗಳು ಖಾಲಿಯಾಗಿದ್ದವು ಎಂದು ಚುನಾವಣಾಧಿಕಾರಿಗಳು ನನಗೆ ತೋರಿಸಿದ್ದಾರೆ. ಈ ಮೊದಲು ತಿರಸ್ಕೃತಗೊಂಡ 14 ಮತ ಪತ್ರಗಳನ್ನು ಪ್ರತ್ಯೇಕವಾಗಿ ಇಡಲಾಗಿತ್ತು. ಆದರೆ, 2 ಖಾಲಿ ಮತಪತ್ರಗಳು ಹೇಗೆ ಬಂದವು ಎನ್ನುವುದು ಅನುಮಾನಕ್ಕೆ ಕಾರಣವಾಗಿದೆ. ಮೊದಲ ಎಣಿಕೆಯಲ್ಲಿ ನನಗೆ 43 ಸಿಂಗಲ್ ಮತಗಳು ಬಿದ್ದಿದ್ದವು. ಎರಡನೇ ಸಲ ಎಣಿಕೆ ನಡೆದಾಗಲೂ ನನಗೆ 43 ಸಿಂಗಲ್ ಮತಗಳು ಲೆಕ್ಕಕ್ಕೆ ಸಿಕ್ಕಿದ್ದು, 3ನೇ ಎಣಿಕೆ ನಡೆದಾಗ 41 ಸಿಂಗಲ್ ಮತಗಳು ಮಾತ್ರ ಲೆಕ್ಕಕ್ಕೆ ಬಂದವು. 14 ತಿರಸ್ಕೃತ ಮತಗಳಿಂದ ಎರಡು ಖಾಲಿ ತಿರಸ್ಕೃತ ಮತಪತ್ರಗಳನ್ನು ತೆಗೆದು ಅದರ ಜಾಗದಲ್ಲಿ ನನಗೆ ಸಿಂಗಲ್ ಮತಗಳು ಬಿದ್ದಿದ್ದ 2 ಮತಪತ್ರಗಳನ್ನು ಇರಿಸಿ ನನಗೆ ಮೋಸ ಮಾಡಿ ಸೋಲಿಸಲಾಗಿದೆ. ನಾನು 3ನೇ ಬಾರಿ ಎಣಿಕೆ ನಡೆದಾಗ ತಿರಸ್ಕೃತ ಮತಗಳನ್ನೂ ಎಣಿಕೆ ನಡೆಸಿ ಎಂದು ಪ್ರಸ್ತಾವನೆ ಸಲ್ಲಿಸಿದ್ದರೂ ಚುನಾವಣಾಧಿಕಾರಿಗಳು ಪರಿಗಣಿಸಿಲ್ಲ. ನನ್ನನ್ನು ವ್ಯವಸ್ಥಿತ ಸಂಚು ನಡೆಸಿ ಸೋಲಿಸಲಾಗಿದೆ ಎಂದು ಶಿವರಾಮು ಆರೋಪಿಸಿದರು.
ಗುರುವಾರ ಬೆಳಿಗ್ಗೆ ತಾಲ್ಲೂಕು ಕಚೇರಿ ಎದುರು ನಡೆಯುತ್ತಿದ್ದ ಪ್ರತಿಭಟನೆಯನ್ನು ಚದುರಿಸಲು ಪೊಲೀಸರು ಯತ್ನಿಸಿದರೂ ಪ್ರತಿಭಟನಾಕಾರರು ಜಗ್ಗಲಿಲ್ಲ. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ವಾಗ್ವಾದವೂ ನಡೆಯಿತು. ಕೂಡಲೇ ಪ್ರತಿಭಟನಾಕಾರರು ಅಂಬೇಡ್ಕರ್ ಭಾವಚಿತ್ರ ತಂದು ಪ್ರತಿಭಟನಾ ಸ್ಥಳದಲ್ಲಿ ಇಟ್ಟಾಗ ಪೊಲೀಸರು ಮೌನಕ್ಕೆ ಜಾರಿದರು.
ಪ್ರತಿಭಟನೆಯಲ್ಲಿ ದಸಂಸ ಮುಖಂಡ ಬೊಮ್ಮರಾಜು, ಪಿ.ಜಯಕುವಾರ್, ಸಂಪತ್ ಕುವಾರ್, ನಿಂಗಯ್ಯ, ಸಿದ್ದರಾಜು, ಪಾರ್ವತಮ್ಮ, ವಸಂತಮ್ಮ, ಸುಧಾಮಣಿ, ಕಮಲಮ್ಮ, ವರಲಕ್ಷ್ಮಿ, ಕಲಾವತಿ, ಮಂಜುಳ, ಪ್ರಕಾಶ್, ಪ್ರಸನ್ನ ಇತರರು ಪಾಲ್ಗೊಂಡಿದ್ದರು.
× Chat with us