ಐಎಂಎಫ್ ಉನ್ನತ ಸ್ಥಾನಕ್ಕೆ ಪದೋನ್ನತಿ ಪಡೆದ ಮೈಸೂರಿನ ಗೀತಾ

ವಾಷಿಂಗ್ಟನ್: ಅರ್ಥಶಾಸ್ತ್ರಜ್ಞೆ ಮೈಸೂರಿನ ಗೀತಾ ಗೋಪಿನಾಥ್ ಅವರು ಅಂತರರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್) ಉಪ ವ್ಯವಸ್ಥಾಪಕ ನಿರ್ದೇಶಕಿಯಾಗಿ ಬಡ್ತಿ ಪಡೆದಿದ್ದಾರೆ. ಐಎಂಎಫ್ ಉಪ ವ್ಯವಸ್ಥಾಪಕ ನಿರ್ದೇಶಕರಾಗಿರುವ ಜೆಫ್ರಿ ಒಕಾಮೊಟೊ ಮುಂದಿನ ವರ್ಷದ ಮೊದಲ ತಿಂಗಳಲ್ಲಿ ನಿವೃತ್ತರಾಗುತ್ತಿದ್ದಾರೆ. ಆ ಹಿನ್ನೆಲೆಯಲ್ಲಿ ಗೀತಾ ಗೋಪಿನಾಥ್‌ಅವರಿಗೆ ಉನ್ನತ ಹುದ್ದೆ ನೀಡಲಾಗಿದೆ ಎಂದು ಐಎಂಎಫ್ ತಿಳಿಸಿದೆ.

ಈ ಕುರಿತು ಟ್ವೀಟ್ ಮಾಡಿರುವ ಐಎಂಎಫ್ ವ್ಯವಸ್ಥಾಪಕ ನಿರ್ದೇಶಕಿ ಕ್ರಿಸ್ಟಲಿನಾ ಜಾರ್ಜೀವಾ, ಗೀತಾ ಹೊಸ ಜವಾಬ್ದಾರಿ ವಹಿಸಿಕೊಳ್ಳುತ್ತಿರುವುದರಿಂದ ನನಗೆ ಸಂತಸವಾಗಿದೆ ಎಂದು ತಿಳಿಸಿದ್ದಾರೆ.

ಮೈಸೂರಿನಲ್ಲಿ ಜನಿಸಿದ ಗೀತಾ ಅವರು 2019ರ ಜನವರಿಯಲ್ಲಿ ಐಎಂಎಫ್‌ನಲ್ಲಿ ಮುಖ್ಯ ಅರ್ಥಶಾಸ್ತ್ರಜ್ಞೆಯಾಗಿ ಕೆಲಸ ಆರಂಭಿಸಿದ್ದರು. ಅದಕ್ಕೂ ಮೊದಲು ಅವರು ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕಿಯಾಗಿ ಸೇವೆ ಸಲ್ಲಿಸಿದ್ದಾರೆ.

× Chat with us