ಪ್ರವಾಹದಿಂದ ಜನ ಕಂಗಾಲಾಗಿದ್ರೆ, ಬಿಜೆಪಿ ಸರ್ಕಾರಕ್ಕೆ ಕುರ್ಚಿ ಬದಲಾವಣೆಯದ್ದೇ ಚಿಂತೆ: ಶಿವರಾಮೇಗೌಡ ಟೀಕೆ

ನಾಗಮಂಗಲ: ಅಧಿಕಾರದ ಲಾಲಸೆ, ಕುರ್ಚಿ ಬದಲಾವಣೆ ವಿಚಾರದಲ್ಲೇ ರಾಜ್ಯ ಬಿಜೆಪಿ ಸರ್ಕಾರ ಸಮಯ ವ್ಯರ್ಥ ಮಾಡುತ್ತಿದ್ದು, ಜನರ ಹಿತ ಕಾಯುವಲ್ಲಿ ವಿಫಲವಾಗಿದೆ ಎಂದು ಮಾಜಿ ಸಂಸದ ಎಲ್‌.ಆರ್‌.ಶಿವರಾಮೇಗೌಡ ಟೀಕಿಸಿದರು.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೆರೆ ವಿಚಾರದಲ್ಲೂ ಸರ್ಕಾರ ಜನರಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಗರಂ ಆದರು.

ಪ್ರವಾಹ, ಕೋವಿಡ್‌ ಪರಿಸ್ಥಿತಿಗಳಿಂದಾಗಿ ಜನರು ಹೈರಾಣಾಗಿದ್ದಾರೆ. ಈಗ ಪ್ರವಾಹ ಬಂದು ಉತ್ತರ ಕರ್ನಾಟಕ ಕೊಚ್ಚಿಹೋಗುವ ಸ್ಥಿತಿಯಲ್ಲಿದೆ. ಆದರೆ, ಈ ಸರ್ಕಾರ ಅದ್ಯಾವುದರ ಬಗ್ಗೆಯೂ ಗಮನ ಹರಿಸುತ್ತಿಲ್ಲ. ಆಸ್ಪತ್ರೆಗಳಲ್ಲಿ ಸರಿಯಾದ ವ್ಯವಸ್ಥೆ ಮಾಡಿಕೊಳ್ಳದ ಕಾರಣ ಲಕ್ಷಾಂತರ ಜನರು ಸಾಯುವಂತಾಗಿದೆ. ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದರೂ ಸಿಎಂ ಬದಲಾವಣೆಗಾಗಿ ಒಂದು ಗುಂಪು, ಯಾರು ಸಿಎಂ ಆಗಬೇಕು ಎನ್ನುವ ಮತ್ತೊಂದು ಗುಂಪು, ಮಂತ್ರಿ ಮಂಡಲದ ಬಗ್ಗೆ ಗೊಂದಲ, ವಲಸೆ ಹೋದವರ ತ್ರಿಶಂಕು ಸ್ಥಿತಿ ಮೊದಲಾದ ಗೋಜಲುಗಳಿಂದ ಜನರ ಸೇವೆ ಮಾಡಲು ಇವರಿಂದ ಸಾಧ್ಯವಾಗುತ್ತಿಲ್ಲ ಎಂದು ದೂರಿದರು.

ಜೆಡಿಎಸ್‌ ಅಧಿಕಾರದಲ್ಲಿದ್ದಾಗ ಕೊಡಗು, ಕರಾವಳಿ ಭಾಗ, ಹೊಸ ಕರ್ನಾಟಕ ಭಾಗದಲ್ಲಿ ಪ್ರವಾಹ ಆದ ಸಂದರ್ಭದಲ್ಲಿ ಜನಪ್ರತಿನಿಧಿಗಳನ್ನು ಕಳುಹಿಸಿ ಸಾಗರೋಪಾದಿಯಲ್ಲಿ ಕೆಲಸ ಮಾಡಿಸಿದ್ದರು. ಆದರೆ, ಈ ಸರ್ಕಾರ ಕುರ್ಚಿ ವಿವಾದದಲ್ಲೇ ಸಮಯ ವ್ಯರ್ಥ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.

× Chat with us