ತ್ರಿಯಂಬಕಪುರ ಅರಣ್ಯ ಪ್ರದೇಶದಲ್ಲಿ ಬೆಂಕಿ: 50 ಎಕರೆ ಅರಣ್ಯ ನಾಶ

ಗುಂಡ್ಲುಪೇಟೆ: ತಾಲ್ಲೂಕಿನ ಬಂಡೀಪುರ ಅರಣ್ಯ ವ್ಯಾಪ್ತಿಯ ಬಫರ್ ಜೋನ್‌ಗೆ ಒಳಪಡುವ ತ್ರಿಯಂಭಕಪುರ ದಕ್ಷಿಣದ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಶನಿವಾರ ಸಂಜೆ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು, 50 ಎಕರೆಯಷ್ಟು ಅರಣ್ಯ ನಾಶವಾಗಿದೆ.

ಶನಿವಾರ ಸಂಜೆ ಅರಣ್ಯದಂಚಿನಲ್ಲಿ ಕಾಣಿಸಿಕೊಂಡ ಬೆಂಕಿ ಹುಲ್ಲು, ಇತರೆ ಗಿಡಗಂಟೆಗಳು ಒಣಗಿ ನಿಂತಿದ್ದ ಕಾರಣ ಗಾಳಿಯ ರಭಸಕ್ಕೆ ಪೂರ್ವ-ಪಶ್ಚಿಮಾಭಿಮುಖವಾಗಿ ವ್ಯಾಪಿಸಿತ್ತು. ಬೆಂಕಿ ತನ್ನ ಕೆನ್ನಾಲಿಗೆಯನ್ನು ಚಾಚುತ್ತಿದ್ದ ದೃಶ್ಯ ತ್ರಿಯಂಭಕಪುರ ಮತ್ತು ಕಗ್ಗಳ, ಕಗ್ಗಳದಹುಂಡಿ, ತೆರಕಣಾಂಬಿ ಗ್ರಾಮಗಳಿಗೆ ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಜನರು ಕುತೂಹಲದಿಂದ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆಹಿಡಿದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು.

ಬೆಂಕಿ ತೋಟದ ಮನೆ, ಮೇವು ಸಂಗ್ರಹಿಸಿರುವ ಬಣವೆ (ಮೆದೆ) ಕಡೆಗೆ ಹರಡುವ ಬಗ್ಗೆ ಆತಂಕಗೊಂಡಿದ್ದರು. ಮಾಹಿತಿ ತಿಳಿದು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ವಾಹನದ ಸಹಾಯದಿಂದ ಅರಣ್ಯ ಇಲಾಖೆ ಸಿಬ್ಬಂದಿ ಬೆಂಕಿ ನಂದಿಸಿದರು. 50 ಎಕರೆಯಷ್ಟು ಅರಣ್ಯ ನಾಶವಾಗಿದೆ ಎಂದು ಮೂಲಗಳು ತಿಳಿಸಿವೆ.

ಯಾರೊ ರೈತರು ಜಮೀನಿನಲ್ಲಿ ಹಾಕಿದ್ದ ಬೆಂಕಿಯಿಂದ ಕಾಡಿಗೆ ಬೆಂಕಿ ಆವರಿಸಿಕೊಂಡಿದ್ದು, ಹತ್ತಾರು ಎಕರೆಯಷ್ಟು ಅರಣ್ಯ ಭಸ್ಮವಾಗಿದೆ ಎಂದು ಬಂಡೀಪುರ ಎಸಿಎಫ್‌ ಪರಮೇಶ್‌ ಮಾಹಿತಿ ನೀಡಿದ್ದಾರೆ.

ಮೂರು ದಿನದ ಹಿಂದೆ ಇದೇ ಬೆಟ್ಟದ ಸಾಲಿನಲ್ಲಿ ಬೆಂಕಿ ಕಾಣಿಸಿಕೊಂಡು ನೂರಾರು ಎಕರೆ ಅರಣ್ಯ ನಾಶವಾಗಿತ್ತು.

× Chat with us