ಕೃಷಿ ಕಾಯ್ದೆಗಳಿಗೆ ವಿರೋಧ: ಪ್ರತಿಭಟನಾನಿರತ ರೈತರ ಶೆಡ್‌ನಲ್ಲಿ ಬೆಂಕಿ ಅವಘಡ!

ಹೊಸದಿಲ್ಲಿ: ಕೃಷಿ ಕಾಯಿದೆಗಳನ್ನು ವಾಪಸ್ ಪಡೆಯುವಂತೆ ಆಗ್ರಹಿಸಿ ಕಿಸಾನ್‌ ಮೋರ್ಚಾ ಸಂಘಟನೆಯ ನೇತೃತ್ವದಲ್ಲಿ ಹೊಸದಿಲ್ಲಿಯ ಸಿಂಘ್ ಗಡಿಯಲ್ಲಿ ಪ್ರತಿಭಟಿಸುತ್ತಿರುವ ರೈತರ ಶೆಡ್‌ವೊಂದರಲ್ಲಿ ಶನಿವಾರ ರಾತ್ರಿ ಬೆಂಕಿ ಅನಾಹುತ ಸಂಭವಿಸಿದೆ. ಯಾವುದೇ ಪ್ರಾಣಾಪಾಯ ಆಗಿಲ್ಲ ಎಂದು ವರದಿಯಾಗಿದೆ.

ಶೆಡ್‌ನಲ್ಲಿದ್ದ ಏರ್ ಕೂಲರ್ ಗಳು, ಲಕ್ಷಾಂತರ ರೂ.ಗಳ ಮೌಲ್ಯದ ವಸ, ಧಾನ್ಯಗಳು ಮತ್ತಿತರ ಪದಾರ್ಥಗಳು ಬೆಂಕಿಯಲ್ಲಿ ಸುಟ್ಟು ಬೂದಿಯಾಗಿವೆ ಎಂದು ಹೇಳಲಾಗಿದೆ.

ರೈತರೇ ಬೆಂಕಿಯನ್ನು ನಂದಿಸುವ ಪ್ರಯತ್ನ‌ ಮಾಡಿದ್ದರಿಂದ ಹೆಚ್ಚಿನ ಅನಾಹುತ ಆಗಲಿಲ್ಲ. ಸ್ವಲ್ಪ ಸಮಯದ ನಂತರ ಅಗ್ನಿಶಾಮಕ‌ ಸಿಬ್ಬಂದಿ‌ ಸ್ಥಳಕ್ಕಾಗಮಿಸಿ, ಬೆಂಕಿಯನ್ನು ನಂದಿಸಿದರು ಎಂದು ಮೂಲಗಳು ತಿಳಿಸಿವೆ.

ಶನಿವಾರ ಬೆಳಿಗ್ಗೆ‌ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ರೈತ ನಾಯಕ ರಾಕೇಶ್ ಟಿಕಾಯತ್ ಅವರು, ಕೇಂದ್ರ ಸರ್ಕಾರ ಪ್ರತಿಭಟನೆಯನ್ನು ತಡೆಗಟ್ಟಲು ಅಡ್ಡದಾರಿಗಳಲ್ಲಿ ಪ್ರಯತ್ನಿಸುತ್ತಿದೆ. ಆ ಭ್ರಮೆಯನ್ನು ಬಿಟ್ಟು, ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕೃಷಿ ಕಾಯಿದೆಗಳನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿದರು.

ನಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೂ ಪ್ರತಿಭಟನೆ ನಿಲ್ಲುವುದಿಲ್ಲ ಎಂದು ಪುನರುಚ್ಚರಿಸಿದರು.

500ಕ್ಕೂ ಹೆಚ್ಚು‌ ಪ್ರತಿಭಟನಾಕಾರರು ಅಸುನೀಗಿದ್ದಾರೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ಕನಿಷ್ಠ ಸಾಂತ್ವಾನ ಹೇಳಲಿಲ್ಲ. ಇವರಿಗೆ‌ ರೈತರ ಹಿತಾಸಕ್ತಿ ಗಿಂತ ಸ್ವಯಂ ಪ್ರತಿಷ್ಠೆಯೇ ಮುಖ್ಯವಾಗಿದೆ. ಅದರಿಂದ ದೇಶದ ಅಭಿವೃದ್ಧಿ ಕುಂಠಿತವಾಗಲಿದೆ ಎಂದರು.

ಕೇಂದ್ರ ಎಪಿಎಂಸಿಗೆ ಸಾಲ‌ ನೀಡುವುದಾಗಿ ಘೋಷಿಸುವ‌ ಮೂಲಕ ರೈತರಿಗೆ ಆಮಿಷವೊಡ್ಡಿದೆ. ಅದಕ್ಕೆಲ್ಲ‌ ನಾವು ಜಗ್ಗುವುದಿಲ್ಲ. ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳಿಂದ ರೈತರು ಪ್ರತಿಭಟನೆಯಲ್ಲಿ‌ ಪಾಲ್ಗೊಂಡಿದ್ದಾರೆ. ಎಲ್ಲ ರೈತರೂ ನಮ್ಮೊಂದಿಗಿದ್ದಾರೆ ಎಂದು‌ ರಾಕೇಶ್ ಟಿಕಾಯತ್ ತಿಳಿಸಿದರು.

× Chat with us