ಟ್ರಿಪೋಲಿ : ಲಿಬಿಯಾ ದೇಶದಲ್ಲಿ ಅಬ್ಬರಿಸಿದ ಭೀಕರ ಡೇನಿಯಲ್ ಚಂಡಮಾರುತ ಹಾಗೂ ಪ್ರವಾಹಕ್ಕೆ ಸಾವನ್ನಪ್ಪಿದವರ ಸಂಖ್ಯೆ 20 ಸಾವಿರಕ್ಕೆ ಏರಿಕೆಯಾಗಿದ್ದು, ಈ ಪೈಕಿ ಐದು ಸಾವಿರ ಶವಗಳು ಡೆರ್ನಾ ನಗರವೊಂದರಲ್ಲೇ ಪತ್ತೆಯಾಗಿದೆ. ಚಂಡಮಾರುತದಿಂದಾಗಿ 2 ಡ್ಯಾಮ್ ಒಡೆದು ಈ ದುರಂತ ಸಂಭವಿಸಿದೆ.
ಸಾವಿರಾರು ಜನರನ್ನು ಬಲಿತೆಗೆದುಕೊಂಡ ಮತ್ತು ಅನೇಕರು ಸಮುದ್ರಕ್ಕೆ ಕೊಚ್ಚಿಕೊಂಡು ಹೋದ ಭೀಕರ ಪ್ರವಾಹದ ನಂತರ, ಹಾನಿಗೊಳಗಾದ ಲಿಬಿಯಾದ ನಗರ ಡೆರ್ನಾದ ನಿವಾಸಿಗಳು ಕಾಣೆಯಾದ ತಮ್ಮ ಸಂಬಂಧಿಕರಿಗಾಗಿ ತೀವ್ರ ಹುಡುಕಾಡುತ್ತಿದ್ದಾರೆ. ಸ್ಥಳದಲ್ಲಿ ರಕ್ಷಣಾ ತಂಡಗಳು ಬೀಡುಬಿಟ್ಟಿದ್ದು, ಕಟ್ಟಡ ಹಾಗೂ ಸಮುದ್ರ ತೀರದಿಂದ ಶವಗಳನ್ನು ಹೊರತೆಗೆಯುತ್ತಿದ್ದಾರೆ.
ಡೆರ್ನಾ ಮತ್ತು ಪ್ರವಾಹ ಪೀಡಿತ ಇತರ ಪಟ್ಟಣಗಳಲ್ಲಿನ ಸುಮಾರು 40,000 ಜನರನ್ನು ಈಗಾಗಲೇ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ. ಭೀಕರ ಪ್ರವಾಹಕ್ಕೆ ತತ್ತರಿಸಿದ ಲಿಬಿಯಾಕ್ಕೆ ವಿವಿಧ ದೇಶಗಳು ನೆರವಿನ ಹಸ್ತ ಚಾಚಿದ್ದು, ಜನರ ರಕ್ಷಣೆಗೆ ಮುಂದೆ ಬಂದಿವೆ.
ಡೇನಿಯಲ್ ಚಂಡಮಾರುತವು ಭಾನುವಾರ ಮತ್ತು ಸೋಮವಾರದಂದು ಬೆಂಗಾಜಿ, ಸುಸಾ, ಬೈಡಾ, ಅಲ್-ಮಾರ್ಜ್ ಮತ್ತು ಡರ್ನಾ ನಗರಗಳ ಮೇಲೆ ಪರಿಣಾಮ ಬೀರಿತ್ತು. ಸದ್ಯ ಸಾವಿರಾರು ಮಂದಿ ನಾಪತ್ತೆಯಾಗಿದ್ದು, ತೀವ್ರ ಹುಡುಕಾಟ ನಡೆಸಲಾಗುತ್ತಿದೆ.