ಉಪಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸೋಲಿನ ಭೀತಿ ಶುರುವಾಗಿದೆ: ಸಚಿವ ಸೋಮಣ್ಣ

ಕೊಡಗು: ರಾಜ್ಯದ ಶಿರಾ, ಆರ್‌.ಆರ್.ನಗರ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿಗೆ ಗೆಲುವು ನಿಶ್ಚಿತ. ಈ ವಿಚಾರವಾಗಿ ಕಾಂಗ್ರೆಸ್‌ನವರಿಗೆ ಸೋಲಿನ ಭೀತಿ ಶುರುವಾಗಿದೆ ಎಂದು ಸಚಿವ ವಿ.ಸೋಮಣ್ಣ ಹೇಳಿದರು.

ಕೊಡಗಿನಲ್ಲಿ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳುವ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿದ ಅವರು, ಕಾಂಗ್ರೆಸ್‌ನವರ ಇಂಟಲಿಜೆನ್ಸ್ ಸೋಲಿನ ಮುನ್ಸೂಚನೆ ಕೊಟ್ಟಿದೆ. ನಾವು ಎರಡೂ ಕ್ಷೇತ್ರದಲ್ಲೂ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸ್ಟಾರ್ ಪ್ರಚಾರದಿಂದ ಮತ ಬೀಳಲ್ಲ ಎಂಬ ವಿಪಕ್ಷಗಳ ಟೀಕೆ ಕುರಿತು ಪ್ರತಿಕ್ರಿಯಿಸಿದ ಸಚಿವರು, ಕೆಲವರು ಹತಾಶೆಯಿಂದ ಏನೇನೋ ಮಾತಾಡುತ್ತಾರೆ. ಅವರ ಜತೆ ಸ್ಟಾರ್‌ಗಳು ಪ್ರಚಾರ ಮಾಡಿದರೆ ಸರಿನಾ ಎಂದು ಪ್ರಶ್ನಿಸಿದರು. ಸಿಎಂ ಬದಲಾವಣೆ ವಿಚಾರ ಕುರಿತು ಮಾತನಾಡಿ, ಮುಖ್ಯಮಂತ್ರಿ ಬದಲಾವಣೆ ಮಾತೇ ಇಲ್ಲ. ಸಿದ್ದರಾಮಯ್ಯ ಅವರಿಗೆ ಹಗಲು ಕನಸು ಬಿದ್ದಿರಬೇಕು. ಯಡಿಯೂರಪ್ಪ ಉತ್ತಮ ಕೆಲಸ ಮಾಡುತ್ತಿದ್ದಾರೆ. ಯತ್ನಾಳ್ ಹೇಳಿಕೆ ಬಗ್ಗೆ ಅವರೇ ಸ್ಪಷ್ಟನೆ ನೀಡಿದ್ದಾರೆ ಎಂದು ತಿಳಿಸಿದರು.

× Chat with us