ಹೋರಾಟದ ವೇಳೆಯೂ ಅನ್ನ ನೀಡುವ ಕಾಯಕ ಮರೆಯದ ನೇಗಿಲ ಯೋಗಿ!!

ನವದೆಹಲಿ: ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನು ರದ್ದುಪಡಿಸುವಂತೆ ಆಗ್ರಹಿಸಿ ಸಾವಿರಾರು ರೈತ ಕುಟುಂಬಗಳು ಕಳೆದ 47 ದಿನಗಳಿಂದ ಹೋರಾಟ ನಡೆಸುತ್ತಿವೆ. ದೇಶದ ರಾಜಧಾನಿ ದೆಹಲಿಯ ಸಿಂಘು, ಟಿಕ್ರಿ, ಗಾಜಿಪುರ್, ಚಿಲ್ಲಾ ಹಾಗೂ ಶಹಜಹಾನ್ಪುರ್ ಗಡಿಗಳಲ್ಲಿ ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ಉತ್ತರಖಾಂಡ, ರಾಜಸ್ಥಾನ, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳ ರೈತರು ಬೀಡುಬಿಟ್ಟದ್ದಾರೆ.

ದೆಹಲಿಯಿಂದ ಬೇರೆ ಬೇರೆ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ಈ ಗಡಿಗಳಲ್ಲಿ ಗಾಜಿಪುರ್ ಗಡಿಯು ಉತ್ತರ ಪ್ರದೇಶದ ಗಾಜಿಯಾಬಾದ್ ಮತ್ತು ದೆಹಲಿ ಹಾಗೂ ಮೀರತ್ ಮತ್ತು ದೆಹಲಿ ನಡುವೆ ಸಂಪರ್ಕ ಕಲ್ಪಿಸುವ ಹೆದ್ದಾರಿಯಾಗಿದೆ.

ಈ ಗಡಿಭಾಗದ ಜನರು ಕೃಷಿಯನ್ನು ಅವಲಂಭಿಸಿದ್ದಾರೆ. ಮುಖ್ಯವಾಗಿ, ಹೂ, ತರಕಾರಿ ಬೆಳೆಯುವಂತಹ ಪ್ರದೇಶ ಇದಾಗಿದೆ. ಇಲ್ಲಿನ ರೈತರೂ ಕೂಡ ಹೋರಾಟ ನಿರತ ರೈತರಿಗೆ ಅಗತ್ಯ ನೆರವು ಒದಗಿಸುವುರೊಂದಿಗೆ ಹೋರಾಟದಲ್ಲಿ ತೊಡಗಿಸಿಕೊಂಡಿದ್ದಾರೆ.

ಕೊರೆಯುವ ಚಳಿಯಲ್ಲಿ ಹೋರಾಟ ನಡೆಸುತ್ತಿರುವ ರೈತರಿಗೆ ಮೀರತ್ ಸೇರಿದಂತೆ ವಿವಿಧ ಪ್ರದೇಶಗಳ ರೈತರು ಅಡುಗೆ ಮಾಡಲು, ಬೆಂಕಿ ಕಾಯಿಸಿಕೊಳ್ಳಲು ಕಟ್ಟಿಗೆಗಳನ್ನು ಕಳಿಸುತ್ತಿದ್ದಾರೆ. ಗಾಜಿಪುರ್ ಸುತ್ತಮುತ್ತಲಿನ ರೈತರು ಅಡುಗೆಗೆ ಅಗತ್ಯವಿರುವ ತರಕಾರಿಗಳನ್ನು ಒದಗಿಸುತ್ತಿದ್ದಾರೆ.

× Chat with us