ರೈತ ಸಂಗಾತಿ ಶ್ವಾನ!

ಚಿರಂಜೀವಿ ಸಿ.ಹುಲ್ಲಹಳ್ಳಿ

ಶ್ವಾನಗಳು ಅಂದ್ರೆ ಪ್ರೀತಿಗೆ ಮತ್ತು ನಿಯತ್ತಿಗೆ ಇನ್ನೊಂದು ಹೆಸರು. ಸೇನೆ, ಪೊಲೀಸ್ ಇಲಾಖೆ, ಬಾಂಬ್ ನಿಷ್ಕ್ರಿಯ ದಳ… ಹೀಗೆ ದೇಶದ ರಕ್ಷಣೆಯಲ್ಲಿಯೂ ಸಾಮರ್ಥ್ಯ ತೋರಿರುವ ಶ್ವಾನಗಳು ಅನ್ನದಾತರ ಸಂಗಾತಿಗಳೆಂದರೂ ತಪ್ಪಾಗಲಾರದು.

ರೈತರು ಬೆಳೆದ ಬೆಳೆ ಕೈ ಸಿಗಲು ಎಷ್ಟು ಕಷ್ಟಪಡುತ್ತಾರೆ ಎನ್ನುವುದು ಅವರಿಗಷ್ಟೇ ಗೊತ್ತಿರುತ್ತದೆ. ಕದೀಮರು, ಪ್ರಕೃತಿ ವಿಕೋಪ, ಕಾಡು ಹಂದಿ, ಮಂಗಗಳು ಹಾಗೂ ಇತರ ಪ್ರಾಣಿ, ಪಕ್ಷಿಗಳ ಉಪಟಳದಿಂದ ತಪ್ಪಿಸಿಕೊಂಡು ಬೆಳೆಯನ್ನು ಗೂಡು ಸೇರಿಸುವುದರೊಳಗೆ ರೈತ ಹೈರಾಣಾಗುತ್ತಾನೆ. ತನ್ನ ಮೇಲಿನ ಹೊರೆಯನ್ನು ತಗ್ಗಿಸಲೆಂದೇ ರೈತ ನಾಯಿಗಳನ್ನು ಸಾಕುತ್ತಾನೆ.

ತೋಟದ ಮನೆಗಳಲ್ಲಿ, ಕೋಳಿ ಫಾರಂ, ಮೇಕೆ ಫಾರಂಗಳಲ್ಲಿ ಯಾರಾದರೂ ದಾಳಿ ಇಟ್ಟಾಗ ನಾಯಿಗಳು ಬೊಗಳಿ, ಬೆದರಿಸಿ ನಮಗೆ ಎಚ್ಚರಿಕೆಯ
ಘಂಟೆಯನ್ನು ನೀಡುತ್ತವೆ. ಕೆಲವು ಶ್ರೀಮಂತರು ಶ್ವಾನಗಳಿಗೆ ವಿಶೇಷ ತರಬೇತಿ ನೀಡಿ ತಮ್ಮ ತೋಟದ ಮನೆಗಳಿಗೆ ಹಾಗೂ ವಿಶ್ರಾಂತಿ ಪಡೆದುಕೊಳ್ಳುವ ಗೃಹಗಳಿಗೆ ಸೇನಾಧಿಪತಿಯಂತೆ ನಿಯೋಜಿಸಿಕೊಂಡಿದ್ದಾರೆ.

ರೈತರು ಕೃಷಿ ಕೆಲಸಗಳಿಗೆ ನೆರವಾಗಲೆಂದು ಬೀದಿ ನಾಯಿಗಳು, ವಿವಿಧ ಬಗೆಯ ಜಾತಿ ನಾಯಿಗಳನ್ನು ಸಾಕಿಕೊಂಡಿದ್ದಾರೆ. ಕೆಣಕಿದ್ರು ಪಕ್ಕನೆ ಹಿಡಿಯುವ, ಎಷ್ಟೇ ದೂರವಿದ್ರೂ ಕ್ಷಣ ಮಾತ್ರದಲ್ಲಿ ಬೇಟೆ ಆಡುವ ಸಾಮರ್ಥ್ಯವಿರುವ ಇಂತಹ ನಾಯಿಗಳು, ಕದೀಮರು ಕಂಡೋಡನೆ, ಬೆಳೆ ನಾಶ ಮಾಡುವ ಕಾಡು ಪ್ರಾಣಿಗಳು ಕಂಡೊಡನೆ ಬೊಗಳಿ ಎಚ್ಚರಿಸುತ್ತವೆ. ಗೋಮಾಳಕ್ಕೆ ಬಿಟ್ಟ ಹಸು, ಕುರಿ, ಮೇಕೆಗಳನ್ನು ಕಾಯುತ್ತವೆ.

ಊರಿನ ಹೊರಗೆ ತೋಟದ ಮನೆಗಳಲ್ಲಿ ವಾಸವಿರುವ ಕುಟುಂಬಗಳಿಗೆ ಶ್ವಾನಗಳೇ ಶಕ್ತಿಯಾಗಿವೆ. ಕೆಲವು ಹೊಟ್ಟೆ ಪಾಡಿಗಾಗಿ ದೂರದ ಊರುಗಳಿಂದ ಹೊಲ-ಗದ್ದೆ, ತೋಟಗಳಲ್ಲಿ ಕೆಲಸ ಮಾಡಿ ಬದುಕು ಕಟ್ಟಿಕೊಳ್ಳುವ ಜೀವಗಳಿಗೂ ನೆಮ್ಮದಿಯ ನಿದ್ರೆ ಕಲ್ಪಿಸುವುದು ಇದೇ ಶ್ವಾನಗಳು.

ಈ ಸಂಬಂಧ ಮಾತನಾಡಿರುವ ಹೊಸಕೋಟೆ ರೈತ ರೇವಣ್ಣ, ಊರಿನಿಂದ ಹೊರಗಿರುವ ನಮ್ಮ ಕುಟುಂಬಕ್ಕೆ ನಾಲ್ಕೆ ದು ವರ್ಷಗಳಿಂದ ಸಾಕುತ್ತಿರುವ ನಮ್ಮ ನಾಲ್ಕು ನಾಯಿಗಳೇ ಧೈರ್ಯ. ನನಗೆ ಬಿಡಿ ಭಾಗಗಳಾಗಿ ನಾಲ್ಕು ಎಕರೆ ಜಮೀನಿದೆ. ಗದ್ದೆ ಹಾಗೂ ತೋಟಕ್ಕೆ ಯಾರೊಬ್ಬ ಅಪರಚಿತರು ಬಂದರೂ ನಾಯಿಗಳು ಓಡಿಸಿಕೊಂಡು ಹೋಗುತ್ತವೆ. ನಾವು ಬರುವವರೆಗೂ ಅವರನ್ನು ಅಲುಗಾಡಲು ಬಿಡುವುದಿಲ್ಲ. ಬೈಕ್ ಅಥವಾ ಇತರೆ ವಾಹನಗಳಲ್ಲಿ ಬಂದರೂ ಅವುಗಳಿಂದಲೇ ಓಡಿ ಹೋಗಿ ಪ್ರತಿರೋಧ ಒಡ್ಡುತ್ತ ನಮ್ಮನ್ನು ಹಾಗೂ ಬೆಳೆಗಳನ್ನು ರಕ್ಷಿಸುತ್ತಿವೆ ಎನ್ನುತ್ತಾರೆ.

× Chat with us