ತುಂಡಾಗಿ ಬಿದ್ದಿದ್ದ ಡಿಸ್‌ ಕೇಬಲ್‌ ತುಳಿದು ರೈತ ಸಾವು!

ಕೆ.ಆರ್.ಪೇಟೆ: ತುಂಡಾಗಿ ಬಿದ್ದಿದ್ದ ಡಿಸ್ ಕೇಬಲ್ ತುಳಿದು ರೈತನೊಬ್ಬ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಕಸಬಾ ಹೋಬಳಿಯ ಹಿರೀಕಳಲೆ ಸಮೀಪದ ರಂಗನತಿಟ್ಟು ಗ್ರಾಮದಲ್ಲಿ ಭಾನುವಾರ ಸಂಜೆ ಸಂಭವಿಸಿದೆ.

ರಂಗನತಿಟ್ಟು ಗ್ರಾಮದ ಲೇಟ್ ಕಾಳೇಗೌಡರ ಮಗ ಕುಳ್ಳೇಗೌಡ (೫೫) ಮೃತ ವ್ಯಕ್ತಿ.

ತಾಲ್ಲೂಕಿನ ಹಿರಿಕಳಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ರಂಗನತಿಟ್ಟು ಗ್ರಾಮದ ಕುಳ್ಳೇಗೌಡ ಅವರು ಭಾನುವಾರ ಸಂಜೆ ವೇಳೆ ತಮ್ಮ ಜಮೀನಿಗೆ ಜಾನುವಾರುಗಳಿಗೆ ಮೇವು ತರಲು ಹೋಗಿದ್ದರು. ಈ ಸಂದರ್ಭದಲ್ಲಿ ಜಮೀನಿನಲ್ಲಿ ಸೆಸ್ಕ್ ಇಲಾಖೆಯ ವಿದ್ಯುತ್ ಕಂಬದಲ್ಲಿ ಜೊತೆಯಲ್ಲೆ ಡಿಸ್ ಕೇಬಲ್ ವೈರ್ ಅನ್ನು ಅನಧಿಕೃತವಾಗಿ ಅಳವಡಿಸಿದ್ದಾರೆ. ಇದು ತುಂಡಾಗಿ ಕುಳ್ಳೇಗೌಡರ ಜಮೀನಿನಲ್ಲಿ ಬಿದ್ದಿದೆ. ಇದನ್ನು ಗಮನಿಸದೇ ಮೇವು ಕೊಯ್ಯುತ್ತಿದ್ದ ಕುಳ್ಳೇಗೌಡ ಅವರಿಗೆ ವಿದ್ಯುತ್ ತಂತಿ ಮತ್ತು ಡಿಸ್ ಕೇಬಲ್ ತಗುಲಿದ ಪರಿಣಾಮ ಡಿಸ್ ಕೇಬಲ್ ಮೂಲಕ ವಿದ್ಯುತ್ ಪ್ರವಹಿಸಿ ಕುಳ್ಳೇಗೌಡ ಮೃತಪಟ್ಟಿದ್ದಾರೆ.

ಈ ಅವಘಡಕ್ಕೆ ಸೆಸ್ಕ್ ಮತ್ತು ಕೆಪಿಟಿಸಿಎಲ್ ಇಂಜಿನಿಯರ್‌ಗಳ ನಿರ್ಲಕ್ಷ್ಯವೇ ಕಾರಣವಾಗಿದೆ. ಅನಧಿಕೃತವಾಗಿ ವಿದ್ಯುತ್ ಕಂಬಕ್ಕೆ ಹಾಕಿರುವ ಡಿಸ್ ಕೇಬಲ್ ವೈರ್ ಅನ್ನು ತೆರವುಗೊಳಿಸಿದ್ದರೆ ಈ ಅನಾಹುತ ಸಂಭವಿಸುತ್ತಿರಲ್ಲ. ಹಾಗಾಗಿ, ಸೆಸ್ಕ್ ಅಧಿಕಾರಿ ಈ ಘಟನೆಯ ಹೊಣೆಯನ್ನು ಹೊತ್ತು ಕೂಡಲೇ ಮೃತ ರೈತ ಕುಳ್ಳೇಗೌಡರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯ ಮಾಡಿದ್ದಾರೆ.

ಘಟನೆ ಸಂಬಂಧ ಕಿಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

× Chat with us