ಬೆಂಗಳೂರು : ಬೆಂಗಳೂರಿನ ಖಾಸಗಿ ಕಂಪನಿಯೊಂದಕ್ಕೆ ಬೆಳ್ಳಂಬೆಳಗ್ಗೆ ಹುಸಿ ಬಾಂಬ್ ಬೆದರಿಕೆ ಬಂದಿದೆ.
ಎಲೆಕ್ಟ್ರಾನಿಕ್ ಸಿಟಿಯ ಟಿಸಿಎಸ್ ಕಂಪನಿಯ ಬಿ ಬ್ಲಾಕ್ ನಲ್ಲಿ ಬಾಂಬ್ ಇರುವುದಾಗಿ ಕರೆ ಬಂದಿದೆ. ಬೆದರಿಕೆ ಕರೆ ಬರುತ್ತಿದ್ದಂತೆ ಟೆಕ್ಕಿಗಳು ಗಾಬರಿಯಿಂದ ಹೊರಗಡೆ ಓಡಿ ಬಂದಿದ್ದು,ಕೂಡಲೇ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಗೆ ವಿಷಯ ಮುಟ್ಟಿಸಿದ್ದಾರೆ. ನಂತರ ಬಾಂಬ್ ನಿಷ್ಕ್ರಿಯ ದಳದೊಂದಿಗೆ ಸ್ಥಳಕ್ಕಾಗಮಿಸಿದ ಪೊಲೀಸರು ಟಿಸಿಎಸ್ ಕಂಪನಿಯ ಬಿ ಬ್ಲಾಕ್ ಅನ್ನು ಸಂಪೂರ್ಣವಾಗಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಇದೊಂದು ಹುಸಿ ಬಾಂಬ್ ಬೆದರಿಕೆ ಎಂಬುದು ತಿಳಿದು ಬಂದಿದೆ.
ಪ್ರಕರಣದ ಬಗ್ಗೆ ವಿಚಾರಣೆ ನಡೆಸಿದ ಪೊಲೀಸರಿಗೆ, ಕಂಪನಿಯ ಮಾಜಿ ಉದ್ಯೋಗಿ ಹುಸಿ ಬೆದರಿಕೆ ಹಾಕಿರುವ ವಿಷಯ ತಿಳಿದು ಬಂದಿದೆ.
ಬೆಳಗಾವಿ ಮೂಲದ ಯುವತಿಯನ್ನು ಕೆಲಸದಿಂದ ತೆಗೆದು ಹಾಕಿದ್ದಕ್ಕಾಗಿ. ಆ ಯುವತಿ ಕುಡಿದ ಮತ್ತಿನಲ್ಲಿ ಅದೇ ಕಂಪನಿಯ ಕ್ಯಾಬ್ ಚಾಲಕನಿಗೆ ಕರೆ ಮಾಡಿ, ಬಿ ಬ್ಲಾಕ್ ನಲ್ಲಿ ಬಾಂಬ್ ಇಟ್ಟಿರುವುದಾಗಿ ಹೇಳಿದ್ದಾಳೆ.
ಸದ್ಯ ಘಟನೆಯ ಬಗ್ಗೆ ಖಚಿತ ಮಾಹಿತಿಯನ್ನು ಕಲೆ ಹಾಕಿರುವ ಪೊಲೀಸರು ಬೆಳಗಾವಿಯಲ್ಲಿ ಯುವತಿಯನ್ನು ವಶಕ್ಕೆ ಪಡೆಯಲು ಸಿದ್ಧತೆ ನಡೆಸಿದ್ದಾರೆ.