ಮದ್ದೂರು: ಕಾಡಾನೆ, ಕರಡಿಗಳು ಪ್ರತ್ಯಕ್ಷ, ಜನರಲ್ಲಿ ಆತಂಕ!

ಮದ್ದೂರು: ತಾಲ್ಲೂಕಿನ ತೊಪ್ಪನಹಳ್ಳಿ ಹಾಗೂ ಚೊಟ್ಟನಹಳ್ಳಿ ಗ್ರಾಮದಲ್ಲಿ ಆನೆ ಹಾಗೂ ಕರಡಿಗಳು ಪ್ರತ್ಯಕ್ಷವಾಗಿವೆ.

ತೊಪ್ಪನಹಳ್ಳಿ ಗ್ರಾಮಕ್ಕೆ ತೆರಳುವ ರಸ್ತೆಯಲ್ಲಿ ಎರಡು ಕರಡಿಗಳು ಕಂಡುಬಂದಿದ್ದು, ಸಾರ್ವಜನಿಕರು ಆತಂಕಗೊಂಡಿದ್ದಾರೆ. ಕರಡಿಗಳು ಓಡಾಡುತ್ತಿರುವುದನ್ನು ಕಾರಿನಲ್ಲಿ ತೆರಳುತ್ತಿದ್ದ ಗ್ರಾಮದ ಯುವಕರು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ.

ಕಾರಿನ ಶಬ್ದ ಹಾಗೂ ಬೆಳಕಿಗೆ ಬೆದರಿದ ಕರಡಿಗಳು ಸುಮಾರು ದೂರದವರೆಗೂ ರಸ್ತೆಯಲ್ಲೇ ಸಂಚರಿಸಿ ಬಳಿಕ ರಸ್ತೆಬದಿಯಲ್ಲಿದ್ದ ಕೋಳಿರಾಯನ ಗುಡ್ಡದತ್ತ ತೆರಳಿವೆ.

ತಾಲ್ಲೂಕಿನ ಕೊಪ್ಪ ಜಿ.ಪಂ. ವ್ಯಾಪ್ತಿಯ ಚೊಟ್ಟನಹಳ್ಳಿ ಗ್ರಾಮದಲ್ಲಿ ಎರಡು ಕಾಡಾನೆಗಳು ಕಂಡುಬಂದಿದ್ದು, ಸುತ್ತಮುತ್ತಲಿನ ಗ್ರಾಮಸ್ಥರು ಆನೆಗಳನ್ನು ನೋಡಲು ತಂಡೋಪತಂಡವಾಗಿ ಆಗಮಿಸಿ ಕುತೂಹಲದಿಂದ ವೀಕ್ಷಿಸಿದರು.

ಸಕಲೇಶಪುರ, ಚನ್ನರಾಯಪಟ್ಟಣ ಹಾಗೂ ನಾಗಮಂಗಲ ಮಾರ್ಗವಾಗಿ ಸುಮಾರು 45 ವರ್ಷದ ಎರಡು ಆನೆಗಳು ಮೇವು ಹರಸಿ ಚೊಟ್ಟನಹಳ್ಳಿ ಗ್ರಾಮಕ್ಕೆ ಬಂದಿರುವುದಾಗಿ ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಶಶಿಧರ್ ತಿಳಿಸಿದ್ದಾರೆ.

ಸಂಜೆ ಬಳಿಕ ಅರಣ್ಯ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ಕೈಗೊಂಡು ಸಾಗಿಬಂದ ದಾರಿಯಲ್ಲೇ ಆನೆಗಳನ್ನು ಕಾಡಿಗೆ ವಾಪಸ್ ಕಳುಹಿಸಲು ಕ್ರಮಕೈಗೊಂಡಿದ್ದಾರೆ.

× Chat with us