ನೂತನ ಸಿಎಂ ಆಯ್ಕೆಗೆ ಮೂಡದ ಒಮ್ಮತ!

ಚಂಡೀಗಢ: ಕಾಂಗ್ರೆಸ್ ಧುರೀಣ ಅಮರೀಂದರ್ ಸಿಂಗ್ ಶನಿವಾರ ಪಂಜಾಬ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ನೂತನ ನಾಯಕನ ಆಯ್ಕೆಗಾಗಿ ಭಾನುವಾರ ಬೆಳಿಗ್ಗೆ ೧೧ ಗಂಟೆಗೆ ನಡೆಯಬೇಕಿದ್ದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ(ಸಿಎಲ್‌ಪಿ) ಯನ್ನು ಮುಂದೂಡಲಾಗಿದೆ. ಪಕ್ಷದಲ್ಲಿ ಹೊಸ ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆ ಕಗ್ಗಂಟಾಗಿದ್ದು, ಈ ನಿಟ್ಟಿನಲ್ಲಿ ಪಕ್ಷದ ವರಿಷ್ಠರು ಮಹತ್ವದ ಸಮಾಲೋಚನೆ ಮುಂದುವರಿಸಿದ್ದಾರೆ.

ಹೊಸ ನಾಯಕನ ಆಯ್ಕೆಯಲ್ಲಿ ಇನ್ನೂ ಒಮ್ಮತ ಮೂಡಿಲ್ಲ. ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯನ್ನು ಮುಂದೂಡಲಾಗಿದೆ ಎಂದು ಪಕ್ಷದ ನಾಯಕರೊಬ್ಬರು ತಿಳಿಸಿದ್ದಾರೆ.

ಪಂಜಾಬ್ ಕಾಂಗ್ರೆಸ್ ಮಾಜಿ ಮುಖ್ಯಸ್ಥ ಸುನೀಲ್ ಜಾಖಡ್, ರಾಜ್ಯ ಘಟಕದ ಅಧ್ಯಕ್ಷ ನವಜೋತ್ ಸಿಂಗ್ ಸಿಧು, ತೃಪ್ತ್ ರಾಜಿಂದರ್ ಸಿಂಗ್ ಬಾಜ್ವಾ ಮತ್ತು ಸುಖಜಿಂದರ್ ಸಿಂಗ್ ರಾಂಧವ ಅವರ ಹೆಸರುಗಳು ಮುಖ್ಯಮಂತ್ರಿ ಸ್ಥಾನಕ್ಕೆ ಪ್ರಮುಖವಾಗಿ ಕೇಳಿ ಬರುತ್ತಿವೆ.

ಪಕ್ಷದ ನಾಯಕತ್ವ ಏನೇ ನಿರ್ಧರಿಸಿದರೂ ನಾವು ಅದನ್ನು ಪಾಲಿಸುತ್ತೇವೆ ಎಂದು ಪಕ್ಷದ ನಾಯಕರೊಬ್ಬರು ತಿಳಿಸಿದ್ದಾರೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಪಂಜಾಬ್ ವ್ಯವಹಾರಗಳ ಉಸ್ತುವಾರಿ ಹರೀಶ್ ರಾವತ್ ಮತ್ತು ಪಕ್ಷದ ಕೇಂದ್ರ ವೀಕ್ಷಕರಾದ ಅಜಯ್ ಮಾಕನ್ ಮತ್ತು ಹರೀಶ್ ಚೌಧರಿ ಸದ್ಯ ರಾಜ್ಯದಲ್ಲಿದ್ದಾರೆ.

× Chat with us