ಪ್ರಾಥಮಿಕ ಶಾಲಾ ತೆರೆಯಲು ಶಿಕ್ಷಣ ಇಲಾಖೆ ತಯಾರಿದೆ: ಸಚಿವ ಬಿ.ಸಿ.ನಾಗೇಶ್‌

ಬೆಂಗಳೂರು: 1ರಿಂದ 8ನೇ ತರಗತಿವರೆಗೂ ಶಾಲೆಗಳನ್ನು ತೆರೆಯಲು ಶಿಕ್ಷಣ ಇಲಾಖೆಯು ತಯಾರಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಹೇಳಿದರು.

ಈಗಾಗಲೇ 9, 10 ಹಾಗೂ ಪ್ರಥಮ, ದ್ವಿತೀಯ ಪಿಯುಸಿ ತರಗತಿಗಳನ್ನು ನಡೆಸಲಾಗುತ್ತಿದ್ದು, ವಿದ್ಯಾರ್ಥಿಗಳು ಮತ್ತು ಪೋಷಕರಿಂದ ಉತ್ತಮ ಸ್ಪಂದನೆ ಸಿಕ್ಕಿದೆ. ಇದರ ಆಧಾರದ ಮೇಲೆ ಉಳಿದ ತರಗತಿಗಳನ್ನೂ ನಡೆಸುವ ಬಗ್ಗೆ ಚಿಂತನೆ ಇದೆ. ಈ ಸಂಬಂಧ ಇಂದು (ಆ.30) ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಭೆ ನಡೆಯಲಿದೆ. ತಜ್ಞರ ಸಲಹೆ ಹಾಗೂ ಸಭೆ ನಿರ್ಣಯದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಒಟ್ಟಿನಲ್ಲಿ ಉಳಿದ ತರಗತಿಗಳ ಆರಂಭಕ್ಕೆ ಶಿಕ್ಷಣ ಇಲಾಖೆಯಂತೂ ಸಿದ್ಧವಿದೆ ಎಂದು ತಿಳಿಸಿದರು.

ಮೊದಲ ಹಂತದಲ್ಲಿ ಶಾಲೆಗಳಿಗೆ ಬರುತ್ತಿರುವ ವಿದ್ಯಾರ್ಥಿಗಳು ಸಾಯಂಕಾಲದವರೆಗೂ ತರಗತಿ ನಡೆಸುವಂತೆ ಕೇಳುತ್ತಿದ್ದಾರೆ. ಮಧ್ಯಾಹ್ನದ ಊಟ, ನೀರನ್ನು ಕೂಡ ನಾವೇ ತರುತ್ತೇವೆ ಎಂದು ಉತ್ಸಾಹದಿಂದ ನುಡಿಯುತ್ತಿದ್ದಾರೆ. ಆದರೂ ನಾವು ತಜ್ಞರ ವರದಿಯನ್ನು ಪರಿಗಣಿಸಬೇಕಾಗುತ್ತದೆ ಎಂದರು.

ರಾಜ್ಯದಲ್ಲಿ ಪ್ರಸ್ತುತ ಕೋವಿಡ್‌ ಪಾಸಿಟಿವಿಟಿ ಪ್ರಮಾಣ ಗಮನಿಸಿದರೆ ಆತಂಕಪಡುವ ಅಗತ್ಯವಿಲ್ಲ. ಈಗಾಗಲೇ ವರ್ಷಕ್ಕೂ ಹೆಚ್ಚು ಅವಧಿ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಧೈರ್ಯ ಮಾಡಿ ಉಳಿದ ತರಗತಿಗಳನ್ನು ನಡೆಸಲು ಅನುಕೂಲ ಮಾಡಿಕೊಟ್ಟರೆ ವಿದ್ಯಾರ್ಥಿಗಳ ಶಿಕ್ಷಣ ಮುಂದುವರಿಸಲು ಸಹಾಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

× Chat with us