ಶಿವಾಜಿಯನ್ನುಮುಸ್ಲಿಂ ವಿರೋಧಿಯಾಗಿ ಬಿಂಬಿಸುವ ಬಿಜೆಪಿಯನ್ನು ಮರಾಠರು ಬೆಂಬಲಿಸಬೇಡಿ; ರಾಜ್ ಕಿರಣ್

ಮೈಸೂರು: “ಶಿವಾಜಿ ಮಹಾರಾಜ್ ಕೀ’ ಎಂಬ ಘೋಷಣೆ ಕೂಗಿ ಕ್ಷತ್ರೀಯ ಮರಾಠರ ಯುವ ಪೀಳಿಗೆಯನ್ನು ಹಾಳು ಮಾಡುತ್ತಿರುವ ಬಿಜೆಪಿಯನ್ನು ಮರಾಠರು ಬೆಂಬಲಿಸಬಾರದು ಎಂದು ಮರಾಠ ಸಮುದಾಯದ ಮುಖಂಡರೂ ಆದ ವಿಚಾರವಾದಿ ರಾಜ್ ಕಿರಣ್ ಕರೆ ನೀಡಿದರು.

ಅವರಿಂದು ನಗರದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಜನಸಂಘದ ಕಾಲದಿಂದಲೂ ಮರಾಠರು ಬಿಜೆಪಿಯನ್ನು ಕಟ್ಟಿ ಬೆಳೆಸಿದ್ದಾರೆ. ಆದರೆ, ಬಿಜೆಪಿ ಮರಾಠರಿಗೆ ಸೂಕ್ತ ಸ್ಥಾನಮಾನ ನೀಡದೆ ವಂಚಿಸುತ್ತಿದೆ. ಮರಾಠರು ಬಡವರಾಗಿ ಉಳಿದರೆ ಆರ್ಎಸ್ಎಸ್ಗೆ ಖುಷಿ ಎಂದರು.

ಶಿವಾಜಿ ಯಾವುದೇ ಧರ್ಮದ ದ್ವೇಷಿಯಲ್ಲ. ಆದರೆ, ಬಿಜೆಪಿಯವರು ಶಿವಾಜಿಯನ್ನು ಮುಸ್ಲಿಂ ವಿರೋಧಿಯಂತೆ ಬಿಂಬಿಸಿ ರಾಜಕೀಯ ಲಾಭ ಪಡೆದು ಸಮುದಾಯದ ಯುವ ಪೀಳಿಗೆಯನ್ನು ಹಾಳು ಮಾಡುತ್ತಿದ್ದಾರೆ ಎಂದು ದೂರಿದರು.

ಶಿವಾಜಿಯ ಪಟ್ಟಾಭಿಷೇಕವನ್ನು ವಿರೋಧಿಸಿದ ಪುರೋಹಿತಶಾಹಿಗಳು ಇಂದು ಶಿವಾಜಿ ಜಪ ಮಾಡುತ್ತಿದ್ದಾರೆ. ಮುಸ್ಲಿಂ ವಿರೋಧಿಯೆಂದು ಬಿಂಬಿಸುತ್ತಿದ್ದಾರೆ. ಸಮಾಜದಲ್ಲಿ ಶಾಂತಿ ನೆಲೆಸಲು ಮರಾಠರು ಮತ್ತು ಮುಸ್ಲಿಂರು ಏಕತೆ ಸಾಧಿಸಬೇಕು. ಹೀಗಾಗಿ ರಾಜ್ಯಾದ್ಯಂತ ಪ್ರವಾಸ ಮಾಡಿ ಆರ್ಎಸ್ಎಸ್ ಕುತಂತ್ರವನ್ನು ಬಯಲಿಗೆಳೆದು ಸಮಾಜದಲ್ಲಿ ಶಾಂತಿ ನೆಲೆಸುವಂತೆ ಮಾಡಲು ಪ್ರಯತ್ನಿಸುತ್ತೇನೆ ಎಂದು ಆಶ್ವಾಸನೆ ನೀಡಿದರು.

× Chat with us